ಆಯುಧ ಪೂಜೆ ಹಿನ್ನೆಲೆ…..

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯ ದಶಮಿ ಹಬ್ಬ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಂಭ್ರಮದಿಂದ ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ ಮುಂತಾದ ತಮ್ಮ ಇಷ್ಟ ದೇವತೆಗಳನ್ನು ಭಕ್ತಾದಿಗಳು ಭಕ್ತಿ ಭಾವದಿಂದ ಪೂಜಿಸುತ್ತಾರೆ. ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವ ದೇವತೆಗಳನ್ನು ಸ್ತುತಿಸಲಾಗುತ್ತದೆ.ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾ ನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ.ಹೊಲದಲ್ಲಿ ಕೆಲಸ ಮಾಡಲು ಬಳಸುವ ಸಾಧನ, ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ. ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ಎಲ್ಲಾ ದೇವರು ಮತ್ತು ದೇವತೆಗಳು ತಮ್ಮಲ್ಲಿದ್ದ ಆಯುಧಗಳನ್ನು ದುರ್ಗಾ ದೇವಿಗೆ ನೀಡುತ್ತಾರೆ.ಮಹಿಷಾಸುರನ ಸಂಹಾರಕ್ಕಾಗಿ ದುರ್ಗಾ ದೇವಿ ಮತ್ತು ಮಹಿಷಾಸುರನ ನಡುವೆ 9 ದಿನಗಳ ಸುದೀರ್ಘ ಯುದ್ಧ ನಡೆಯಿತು. ನಂತರ 10ನೇ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಯುದ್ಧ ಮುಗಿದ ನಂತರ ತಾಯಿಯ ಬಳಿಯಿದ್ದ ಎಲ್ಲಾ ಆಯುಧಗಳನ್ನು ಆಯಾ ದೇವರಿಗೆ ಒಪ್ಪಿಸುತ್ತಾಳೆ ಅದರ ಸಂಕೇತವಾಗಿ ಆಯುಧ ಪೂಜೆ ಆಚರಣೆ ಮಾಡಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
*****
ಲೇಖನ:ಭೂಮಿಕಾ ದಾಸರೆಡ್ಡಿ