ರಂಗ ನಟಿಯರ ಕತ್ತಲೆ ಬದುಕಿನ ಕಟು ಸತ್ಯದ ಕೃತಿ – ಹಿರಿಯ ರಂಗ ನಟಿ ನಾಗರತ್ನಮ್ಮ.

ಕೂಡ್ಲಿಗಿ ಡಿಸೆಂಬರ್.4

ರಂಗ ನಟಿಯರ ಅನುಭವಿಸುವ ಬಡತನ, ಹಸಿವು, ಅವಮಾನ ಸೇರಿ ನಾನಾ ಸಂಕಷ್ಟಗಳ ಕತ್ತಲೆ ಬದುಕಿನ ಕಟು ಸತ್ಯವನ್ನು ಲೇಖಕ ಭೀಮಣ್ಣ ಗಜಾಪುರ ಅವರು ಬರೆದಿರುವ “ಬಣ್ಣ ಮಾಸಿದ ಬದುಕು” ಎಂಬ ಪುಸ್ತಕದಲ್ಲಿ ಅನಾವರಣ ಗೊಂಡಿದೆ ಎಂದು ಕೊಪ್ಪಳದ ರಂಗಭೂಮಿ ನಿರ್ದೇಶಕಿ ಶೀಲಾ ಹಾಲ್ಕುರಿಕೆ ಅವರು ತಿಳಿಸಿದರು.ಅವರು ಪಟ್ಟಣದ ಜ್ಞಾನ ಭಾರತಿ ಕಾಲೇಜಿನ ಸಭಾಂಗಣದಲ್ಲಿ ಗಜಾಪುರದ ಕಾವ್ಯ ಪ್ರಕಾಶನ ಹೊರ ತಂದಿರುವ ಹಾಗೂ ಲೇಖಕ ಭೀಮಣ್ಣ ಗಜಾಪುರ ಬರೆದಿರುವ ಬಣ್ಣ ಮಾಸಿದ ಬದುಕು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿಯ ಕುರಿತು ಮಾತನಾಡುತ್ತಾ ಕೂಡ್ಲಿಗಿ ರಂಗಭೂಮಿ ಕಲಾವಿದೆಯರ ತವರೂರು. ಈ ಪುಸ್ತಕದಲ್ಲಿ ಒಟ್ಟು 41 ರಂಗ ನಟಿಯರ ಜೀವನ, ಬದುಕಿನ ಬವಣೆ, ಅನುಭವಿಸುವ ಅವಮಾನ, ಯಾತನೆ, ವೃದ್ಯಾಪ್ಯದಲ್ಲಿ ಎದುರಾಗುವ ಕಷ್ಠಗಳನ್ನು ಮನ ಮುಟ್ಟುವ ರೀತಿಯಲ್ಲಿ ಲೇಖಕರು ಬರೆದಿರುವುದು ಅವರಲ್ಲಿರುವ ಅಂತಃ ಕರಣಕ್ಕೆ ಸಾಕ್ಷಿಯಾಗಿದೆ. ಕೂಡ್ಲಿಗಿ ರಂಗ ನಟಿಯರ ಬಗ್ಗೆ ಈವರೆಗೆ ಯಾರೂ ದಾಖಲಿಸದ ಕೆಲಸವನ್ನು ಭೀಮಣ್ಣ ಗಜಾಪುರ ಮಾಡಿದ್ದಾರೆ. ಕಲೆಯನ್ನು ಉಳಿಸಿ, ಬೆಳೆಸುವ ರಂಗ ನಟಿಯರು ಯಾವುದೇ ಕೀಳರಿಮೆ ಹೊಂದದೆ ನಾನೊಬ್ಬ ರಂಗ ನಟಿ ಎಂದು ಹೆಮ್ಮೆಯಿಂದ ಹೇಳಬೇಕು. ಅಲ್ಲದೆ, ರಂಗ ನಟಿಯರು ಸಂಘಟನೆಯಾಗುವ ಮೂಲಕ ಸರಕಾರದಿಂದ ಸೌಲಭ್ಯ ಪಡೆಯುವಂತಾಗಬೇಕು ಎಂದರಲ್ಲದೆ, ಕೂಡ್ಲಿಗಿ ರಂಗ ನಟಿಯರು ರಾಜ್ಯವಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲೂ ತಮ್ಮ ನಾಟಕ ಅಭಿನಯದ ಮೂಲಕ ಹೆಸರು ವಾಸಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಂಗ ನಟಿ ಹಾಗೂ ರಾಜ್ಯ ನಾಟಕ ಅಕಾಡಮಿ ಮಾಜಿ ಸದಸ್ಯೆ .ಮರಿಯಮ್ಮನಹಳ್ಳಿ.ನಾಗರತ್ನಮ್ಮಅವರು ಕಾರ್ಯಕ್ರಮದಲ್ಲಿ “ಬಣ್ಣ ಮಾಸಿದ ಬದುಕು” ಕೃತಿ ಲೋಕಾರ್ಪಣೆ ಗೊಳಿಸಿ ನಾಟಕಗಳಲ್ಲಿ ಅಭಿನಯಿಸುವ ರಂಗ ನಟಿಯರು ಬಣ್ಣ ಹಚ್ಚಿದಾಗ ರಾಣಿ, ಮಹಾ ರಾಣಿಯಂತೆ ಮಿಂಚುತ್ತಿದ್ದು, ಬಣ್ಣ ಮಾಸಿದ ನಂತರದ ಅವರ ಬದುಕು ಕಷ್ಟಗಳ ಸರಮಾಲೆಯಲ್ಲಿ ಒದ್ದಾಡುವುದು ಯಾರಿಗೂ ಗೊತ್ತಾಗುವುದಿಲ್ಲ.

ಆದರೂ, ರಂಗ ನಟಿಯರು ಕೀಳರಿಮೆ ಬಿಟ್ಟು ಕಲಾಸೇವೆ ಮಾಡುವ ನಾವೆಲ್ಲ ಹೆಮ್ಮೆಯಿಂದ ನಾನೊಬ್ಬ ರಂಗ ನಟಿ ಎಂದು ಹೇಳಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಯಡೆಯೂರು ಸಿದ್ಧಲಿಂಗೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಮಾತನಾಡಿ, ರಂಗ ಭೂಮಿಯ ತವರೂರು ಕೂಡ್ಲಿಗಿಯಲ್ಲಿ ಸಾಕಷ್ಟು ರಂಗ ನಟಿಯರು ತಮ್ಮ ಜೀವನವನ್ನೇ ಕಲೆಗಾಗಿ ಮುಡಿ ಪಾಗಿಟ್ಟಿದ್ದಾರೆ. ಅಂಥವರ ಬದುಕು ಹಸನಾಗಬೇಕಿದ್ದು, ಸರಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.ರಂಗಭೂಮಿ ನಟ ರಾರಾವಿ ಚಿದಾನಂದ ಗವಾಯಿ, ನಾಟಕ ಅಕಾಡೆಮಿ ಸದಸ್ಯ ತಿಪ್ಪೇಸ್ವಾಮಿ, ನಾಟಕ ರಚನೆಕಾರ ಎನ್.ಎಂ.ರವಿಕುಮಾರ್ ಮಾತನಾಡಿದರು. ಕೃತಿಯ ಲೇಖಕ ಭೀಮಣ್ಣ ಪ್ರಾಸ್ತಾವಿಕ ನುಡಿದರು. ಹಿರಿಯ ರಂಗ ನಟಿಯರಾದ ವಿರುಪಾಪುರ ಅಂಜಿನಮ್ಮ, ಆದೋನಿ ವೀಣಾ, ಮುಖಂಡರಾದ ಬಣವಿಕಲ್ಲು ಕಾಮಶೆಟ್ಟಿ ರಾಜು, ಎಸ್.ದುರುಗೇಶ್, ದೇವರಮನೆ ಮಹೇಶ್, ಡಿ.ಎಚ್.ದುರುಗೇಶ್, ಬಣವಿಕಲ್ಲು ಎರಿಸ್ವಾಮಿ, ಕೆ.ಎನ್.ದಿನಕರ, ಕಣವಿಹಳ್ಳಿ ಮಂಜುನಾಥ, ಕಡ್ಲಿ ವೀರೇಶ್, ನಿವೃತ್ತ ಮುಖ್ಯಶಿಕ್ಷಕ ಸಿದ್ದಪ್ಪ, ಗೌಡ್ರು ನಾಗರಾಜ, ಹುಲಿರಾಜಪ್ಪ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಗ್ರಾಮ ಪಂಚಾಯಿತಿ ಸ್ವಚ್ಛವಾಹನ ಚಾಲಕಿ ಮೊರಬ ಅಡಿವೆಮ್ಮ, ಕಲಾವಿದರಾದ ಮಾಡ್ಲಾಕನಹಳ್ಳಿ ನಾಗರಾಜ, ಭಜನೆ ನರಸಿಂಹಪ್ಪ, ಬಾವಿಹಳ್ಳಿ ರೇಣುಕಾ, ಜಿ.ಜ್ಯೋತಿ, ಗೀತಾ, ಲಕ್ಷ್ಮಿ, ಗೌರಮ್ಮ ಇತರರಿದ್ದರು. ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಮೂವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಮೌನೇಶ್ ಕಲ್ಲಹಳ್ಳಿಯ ಭರತನಾಟ್ಯ, ಗಜಾಪುರದ ಗೊಂದಲಿಗರ ಹನುಮಂತಪ್ಪ ತಂಡದ ಹಾಡು, ಮೊರಬದ ವೀರಣ್ಣ ಅವರ ಶಹನಾಯಿ ವಾದನ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button