*ರೈತ ದಿನಾಚರಣೆಯ ಅಂಗವಾಗಿ* “ಭೂಮಿ ತಾಯಿಯ ಚೊಚ್ಚಿಲ ಮಗ”

ತಾಯಿಯ ಚೊಚ್ಚಿಲ ಮಗ ಇವನಮ್ಮ
ಹಗಲೆನ್ನದೆ, ಇರುಳೆನ್ನದೆ ಸಮಯದ
ಪರಿವೆಯಿಲ್ಲದೆ ನಿಷ್ಠೆಯಿಂದ ದುಡಿವ ಕಾಯಕ
ಯೋಗಿ ಇವನಮ್ಮ
ಇವನ ಪರಿಶ್ರಮಕ್ಕೆ, ಬೆಳೆದ ಪಸಲಿಗೆ
ಬೆಲೆ ಕಟ್ಟಲಾಗದಮ್ಮ
ಭೂಮಿ ತಾಯಿಯ ಚೊಚ್ಚಿಲ ಮಗ ಇವನಮ್ಮ
||1||
ಇಡೀ ಜಗದ ಜೀವ ರಾಶಿಯ ಸಲಹುವ ಇಳೆಯ
ಮಗ
ಇವನಮ್ಮ
ದಿನಕರನುದಯಿಸುವ ಮುನ್ನ ತನ್ನ ದಿನಚರಿಯ
ಆರಂಭಿಸುವ ಮೊದಲ ಭಾಸ್ಕರ ಇವನಮ್ಮ
ನಮ್ಮೆಲ್ಲರ ತುತ್ತಿನ ಚೀಲ ತುಂಬಿಸುವ ಅನ್ನದಾತ
ಇವನಮ್ಮ
ಇವ ಮುನಿದರೆ ಇಡೀ ಜಗವೇ ಹಸಿವಿನಿಂದ
ನರಳುವುದಮ್ಮ ಇವ ಸಂತಸದಿಂದಿರೆ ಇಡೀ
ಭುವಿಯೇ ನೆಮ್ಮದಿ ಕಾಣುವುದಮ್ಮ
ಭೂಮಿ ತಾಯಿಯ ಚೊಚ್ಚಿಲ ಮಗ ಇವನಮ್ಮ
||2||
ಜಾತಿ, ಮತ, ಮೇಲು – ಕೀಳೆoಬ
ಭೇಧವನರಿಯದ
ದ್ವೇಷಾಸೂಯೆ, ಮದ ಮಾತ್ಸರ್ಯ ಗಳಿಲ್ಲದ
ಮುಗ್ಧ ಮಾನವ ಇವನಮ್ಮ
ಸದಾ ಮನುಕುಲದ ಉಳಿವಿಗಾಗಿ
ನಿರಂತರ ದುಡಿವ ನೇಗಿಲ ಯೋಗಿ ಇವನಮ್ಮ
ನಮ್ಮ ದೇಶದ ಬೆನ್ನೆಲುಬಾಗಿ ಭೂ ತಾಯಿಯ
ಸೇವೆಗೈವ ಅವನಿ ಪುತ್ರ
ಇವನಮ್ಮ
ಭೂಮಿತಾಯಿಯ ಚೊಚ್ಚಿಲ ಮಗ ಇವನಮ್ಮ
||3||
ಬೇಸಾಯವೆಂಬ ಮಹಾನ್ ತಪಸ್ಸನ್ನು
ಅವಿರತಗೈವ ಮಹಾನ್ ತಪಸ್ವಿ ಇವನಮ್ಮ
ಪ್ರಶಸ್ತಿಗಳ ಸುಳಿಗೆ ಸಿಲುಕದೆ,
ಬಿರುದು ಬಾವಲಿಗಳ ಅಮಲಿಲ್ಲದೆ
ನಿರಂತರ ವಸುಧೆಯ ಸೇವೆಗೈವ
ಧರಿತ್ರಿಯ ಸೇವಕ ಇವನಮ್ಮ
ಭೂಮಿ ತಾಯಿಯ ಚೊಚ್ಚಿಲ ಮಗ ಇವನಮ್ಮ
||4||
ಸರ್ವರ ಬಾಳದೀವಿಗೆಯಾಗಿರುವ
ಮಣ್ಣಿನ ಮಗನ ಬದುಕನ್ನು
ಹಸನಾಗಿಸುವುದು ನಮ್ಮೆಲ್ಲರ ಆದ್ಯ
ಕರ್ತವ್ಯವಮ್ಮ
ಸಾಲ ಬಾಧೆಯ ಸುಳಿಗೆ ಸಿಲುಕಿ ಜವರಾಯನತ್ತ
ಪಯಣ ಬೆಳೆಸಿರುವನಮ್ಮ
ರೈತನಿಂದಲೇ ಬದುಕು
ರೈತನಿಂದಲೇ ಬೆಳಕು
ರೈತನಿಲ್ಲದೆ ಜೀವನವಿಲ್ಲ
ರೈತನುದ್ಧಾರ ನಮ್ಮೆಲ್ಲರ ಬದುಕಿನುದ್ಧಾರವಮ್ಮ
ಭೂಮಿ ತಾಯಿಯ ಚೊಚ್ಚಿಲ ಮಗ ಇವನಮ್ಮ
||5||
ಎಂ. ಎಸ್. ಆಶಾಲತಾ,
ಶಾಖಾ ವ್ಯವಸ್ಥಾಪಕರು,
ಎಂ. ಡಿ. ಸಿ. ಸಿ. ಬ್ಯಾಂಕ್,
ಕೆ ಹೊನ್ನಲಗೆರೆ ಶಾಖೆ