ಜಗತ್ತಿಗೆ ಜ್ಞಾನದ ಬುತ್ತಿ ನೀಡಿದ ಸಿದ್ದೇಶ್ವರ ಶ್ರೀಗಳು – ಸಿದ್ದರಾಮೇಶ್ವರ ಸ್ವಾಮೀಜಿ.
ನಾಗಠಾಣ ಡಿಸೆಂಬರ್.31

ವೇದಗಳ ಸಾರವನ್ನು, ಬಸವಾದಿ ಶರಣರ ವಚನಗಳ ಆಶಯವನ್ನು ಕಥೆಗಳ ಮೂಲಕ ವಿವರಿಸಿ ಮಹಾನ್ ಉದಾತ್ತ ಚಿಂತನೆಗಳು, ಆದರ್ಶಗಳು ಮನಸ್ಸಿಗೆ ನಾಟುವಂತೆ ಮಾಡುವ ಅದ್ಭುತ ಶಕ್ತಿ ಶ್ರೀಗಳಲ್ಲಿತ್ತು ಎಂದು ಭಾಲ್ಕಿಯ ಗೋರ ಚಿಂಚೋಲಿ ಮಠದ ಸಿದ್ದರಾಮೇಶ್ವರ ಪಟ್ಟದೇವರು ಹೇಳಿದರು. ಅವರು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದ ವಿವಿಧ ದಾರ್ಶನಿಕರ ದರ್ಶನ, ಚಿಂತಕರ ಉದಾತ್ತ ಚಿಂತನೆಗಳನ್ನು ಸುಲಲಿತವಾಗಿ ಹೇಳುವ ಪೂಜ್ಯರು ಸಾಧಕರಿಗೆ ಸನ್ಮಾರ್ಗ ತೋರುವ ದಾರಿ ದೀಪವಾಗಿದ್ದರು ಎಂದು ಹೇಳಿದರು. ನಾಗಠಾಣದ ಕಲ್ಲಯಾರೂಢ ಮಠದ ಪ್ರಜ್ಞಾನಂದ ಸ್ವಾಮೀಜಿ ಮಾತನಾಡಿ, ಆಡು ಭಾಷೆಯಲ್ಲಿ, ಅತ್ಯಂತ ಸ್ಪಷ್ಟ ಉಚ್ಚಾರಣೆಯಲ್ಲಿ ಪ್ರವಚನ ನೀಡುತ್ತಿದ್ದ ಸಿದ್ದೇಶ್ವರರು ಭಕ್ತರು ತಲ್ಲೀನರಾಗುವಂತೆ ಮಾಡುತ್ತಿದ್ದರು.

ಸಾಕ್ಷಾತ್ ದೈವ ಸ್ವರೂಪ, ಶಾಂತ ಸ್ವರೂಪರಾಗಿದ್ದ ಅವರ ಸಂದೇಶವನ್ನು ಪಾಲಿಸಿ ದಿವ್ಯ ಬದುಕನ್ನು ಸಾಗಿಸೋಣ ಎಂದು ಹೇಳಿದರು. ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ,ಸರಳ, ಮೃದು ಸ್ವಭಾವದ ಸಾತ್ವಿಕ ಜೀವನವೇ ಶ್ರೀಗಳ ಆದರ್ಶ.ಅವರ ಜ್ಞಾನ ದಾಸೋಹದ ಪ್ರವಚನಗಳು ಮನದ ಅಂಧಕಾರವನ್ನು ನಿವಾರಿಸಿ ವಿಶ್ವ ಪ್ರೇಮತ್ವ, ನಿಸರ್ಗ ಸೌಂದರ್ಯ ಆಸ್ವಾದಿಸುವ ಗುಣ ಹಾಗೂ ಎಲ್ಲಾ ಧರ್ಮಗಳ ಸಾರ ತಿಳಿದು ಕೊಂಡು ಮಾನವನಾಗಲು ಸಹಕಾರವಾಗಿವೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಮೆರವಣಿಗೆಯ ಜೊತೆಗೆ ಮಕ್ಕಳು ಪುಸ್ತಕದ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ,ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘವೇಂದ್ರ ಮೊಗಳ, ಭೀಮಾಶಂಕರ ಕೋರೆ,ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ,ರೂಪಾ ಶಹಾಪುರ, ಮಧುಮತಿ ನಿಕ್ಕಂ,ಸರೋಜಿನಿ ಕಟ್ಟಿಮನಿ, ಲಕ್ಷ್ಮೀ ಮೇತ್ರಿ,ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ