ಎರಡು ವರ್ಷದಲ್ಲಿ ಜನರ ಕೈಗೆ ₹1 ಲಕ್ಷ ಕೋಟಿ ನೆರವು – ರಾಜ್ಯ ಸರ್ಕಾರದ ಸಾಧನೆ.
ಕೂಡ್ಲಿಗಿ ನ.11

ರಾಜ್ಯ ಸರ್ಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು ನೇರವಾಗಿ ರಾಜ್ಯದ ಜನರ ಜೇಬಿಗೆ ತಲುಪುತ್ತಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಕೂಡ್ಲಿಗಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದ ಅವರು, “ನಾವು ನೀಡಿದ ಗ್ಯಾರಂಟಿಗಳು ಕೇವಲ ಚುನಾವಣೆ ಘೋಷಣೆಗಳಲ್ಲ, ಅವು ಜನರ ಬದುಕು ಸುಧಾರಿಸುತ್ತಿವೆ” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಭಾಷಣದಲ್ಲಿ, “ರಾಜ್ಯದ ಪ್ರತಿಯೊಂದು ಮನೆಗೆ ಸರ್ಕಾರದ ಹಣ ತಲುಪುತ್ತಿದೆ. ಪ್ರತೀ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಗೃಹಿಣಿಯರಿಗೆ ಹಣ ತಲುಪುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಉಚಿತ ವಿದ್ಯುತ್ ಸೌಲಭ್ಯ ದೊರೆತಿದೆ. ನಮ್ಮ ಯೋಜನೆಗಳು ನೇರವಾಗಿ ಜನರ ಜೀವನಮಟ್ಟವನ್ನು ಎತ್ತುವ ಕಾರ್ಯ ಮಾಡುತ್ತಿವೆ,” ಎಂದು ಹೇಳಿದರು.

ಬಿಜೆಪಿಯನ್ನು ಕಟುವಾಗಿ ಟೀಕಿಸಿದ ಅವರು, “ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿ ನಾಯಕರು ರಾಜ್ಯದ ಜನರನ್ನು ತಪ್ಪು ದಾರಿಗೆಳೆದು ಮತಗಳ್ಳತನಕ್ಕೆ ಯತ್ನಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಮಾಡಿದೆ. ಆದರೆ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ಬೆಳೆಗಾರರ ಪರ ನಿಂತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಹ್ಲಾದ್ ಜೋಶಿ ಮತ್ತು ವಿಜಯೇಂದ್ರರನ್ನು ಉದ್ದೇಶಿಸಿ, “ತಮ್ಮದೇ ಕೇಂದ್ರ ಸರ್ಕಾರ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ,” ಎಂದು ಟೀಕಿಸಿದರು.
ಅಭಿವೃದ್ಧಿ ಕಾರ್ಯಗಳ ವಿವರ ನೀಡಿದ ಮುಖ್ಯಮಂತ್ರಿ ಹೇಳಿದರು, “ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ ₹1,750 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. 1.70 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಯಶಸ್ವಿಯಾಗಿದೆ. ಕೂಡ್ಲಿಗಿಯಂತರ್ಜಲ ವೃದ್ಧಿಗೆ ಶಾಸಕರ ಶ್ರಮ ಫಲಿಸಿದೆ,” ಎಂದರು. ಶಾಸಕ ಶ್ರೀನಿವಾಸ್ ಹಾಗೂ ಸಂಸದ ತುಕಾರಾಂ ಅವರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು, “ಇವರು ಜನರ ಹಿತಾಸಕ್ತಿ ಬಿಟ್ಟರೆ ಬೇರೆ ವಿಚಾರವೇ ಕೇಳುವುದಿಲ್ಲ. ಇವರನ್ನು ಗೆಲ್ಲಿಸಿದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಇಬ್ಬರು ಜನಪ್ರತಿನಿಧಿಗಳು ಕೂಡ್ಲಿಗಿಯ ಆಸ್ತಿಯಂತವರು ಇವರನ್ನು ಕಾಪಾಡಿಕೊಳ್ಳಿ,” ಎಂದು ಕರೆ ನೀಡಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

