ಡಾ. ಬಿ.ಆರ್.ಅಂಬೇಡ್ಕರ್ ಕೊಡುಗೆ ಅನನ್ಯ.
ಅಥಣಿ ಜನೇವರಿ.26





ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀಡಿದ ಸಂವಿಧಾನವು ಜಗತ್ತಿಗೆ ಮಾದರಿಯಾಗಿದೆ. ಇದರಲ್ಲಿ ದೇಶದ ಸರ್ವರಿಗೂ ಅಸ್ಪೃಶ್ಯತೆ ನಿವಾರಣೆ, ಜಾತ್ಯತೀತತೆ, ಸಹಬಾಳ್ವೆ, ಸಮಾನತೆ ಕಲ್ಪಿಸುವ ಉದ್ದೇಶದಿಂದ ಮಹಾ ಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ತತ್ವಾದರ್ಶದಂತೆ ಸಂವಿಧಾನವನ್ನು ರಚಿಸಲಾಗಿದೆ. ಇಂತಹ ಸಂವಿಧಾನವನ್ನು ನೀಡಿದ ಡಾ. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಿ ಗೌರವಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಹೇಳಿದರು.ಅವರು ತಾಲೂಕಾಡಳಿತದಿಂದ ಇಂದು ಬೆಳಗ್ಗೆ ಪಟ್ಟಣದ ಶ್ರೀ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75.ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕಕಮರಿ (ಕೊಟ್ಟಲಗಿ) ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ 1400 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿಯೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ಭೂಮಿ ಪೂಜೆ ನೆರವೇರಿಸಲಾಗುವುದು. ಎರಡುವರೆ ವರ್ಷದಲ್ಲಿಯೇ ಈ ಯೋಜನೆಯನ್ನು ಪೂರ್ಣ ಗೊಳಿಸಿ ಅಥಣಿ ಪೂರ್ವ ಭಾಗದ ಹಳ್ಳಿಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಅಥಣಿ ಪಟ್ಟಣದಲ್ಲಿ 126 ಕೋಟಿ ರೂ. ವೆಚ್ಚದಲ್ಲಿ ದಿನದ 24 ತಾಸು ಕುಡಿಯವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಪಟ್ಟಣದ ಜೋಡು ಕೆರೆಗಳ ಅಭಿವೃದ್ಧಿಗೆ 25 ಕೋಟಿ ರೂ. ಹಾಗೂ ಭಾಗಿರಥಿ (ದಕ್ಕೆ) ನಾಲಾ ಅಭಿವೃದ್ಧಿಗೆ 10 ಕೋಟಿ ರೂ. ಮಂಜೂರಾಗಿದ್ದರು, ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು. ಅಥಣಿ ಮತಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಒದಗಿಸುವ ಮೂಲಕ ಸಹಕಾರ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು ತಿಳಿಸಿದರು.

ಅಥಣಿ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಬದ್ಧನಿದ್ದೇನೆ. ಕ್ಷೇತ್ರದ ಜನತೆ ಸಹಕಾರ ನೀಡಬೇಕು ಎಂದು ಕೋರಿದರು. ತಹಸೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಶ್ರೀಮತಿ ವಾಣಿ ಯು. ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಇ.ಒ. ಶ್ರೀ ಶಿವಾನಂದ ಕಲ್ಲಾಪುರ, ಎಇಇ ಶ್ರೀ ವೀರಣ್ಣಾ ವಾಲಿ, ಡಿವೈಎಸ್‌ಪಿ ಶ್ರೀ ಶ್ರೀಪಾದ ಜಲ್ದೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಮುರೋಟಗಿ ಗ್ರೇಡ್ 2 ತಹಶೀಲ್ದಾರ್ ರಾದ ಶ್ರೀ ಬಿ.ವೈ. ಹೊಸಕೇರಿ, ಎಮ್.ವ್ಹಿ. ಬಿರಾದರಪಾಟೀಲ ಸೇರಿದಂತೆ ತಾಲೂಕಾಮಟ್ಟದ ಎಲ್ಲ ಅಧಿಕಾರಿಗಳು, ಹಲವು ಗಣ್ಯ ಮಾನ್ಯರು, ಪುರಸಭೆ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ