ಸಾಧನೆಯು ದೀರ್ಘ ಅನುಭವದ ಹಾದಿಯಾಗಿದೆ – ವೆಂಕಟೇಶ ಹೂಲಗೇರಿ.
ಹುನಗುಂದ ಜನೇವರಿ.3

ಸಾಧನೆ ಎಂಬುದು ದೀರ್ಘ ಅನುಭವದ ಹಾದಿ.ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ದೃಢ ಸಂಕಲ್ಪ ಇರಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಂರಾದ ವೆಂಕಟೇಶ ಹೂಲಗೇರಿ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಎದುರಿಸುವ ಮನೋಭೂಮಿಕೆ ಮತ್ತು ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಫಲಿತಾಂಶಕ್ಕಾಗಿ ಪರಿಶ್ರಮ ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಸಾಧನೆಗೆ ಏಕಾಗ್ರತೆ,ಎತ್ತರದ ಗುರಿ,ಕೀಳರಿಮೆ ದೂರ ಮಾಡುವಿಕೆ,ಸತತ ಪ್ರಯತ್ನ ಇವುಗಳೇ ಯಶಸ್ಸಿನ ಜೀವಾಳಗಳಾಗಿವೆ ಅದರೊಟ್ಟಿಗೆ ಇಂದ್ರಿಯ ನಿಗ್ರಹ ಬೇಕು.ಆಶಾವಾದದ ಬದುಕು, ಸಾಧಿಸಲೇ ಬೇಕೆಂಬ ಹಠವುಳ್ಳವರು, ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸುವವರು ಮತ್ತು ಸದವಕಾಶಗಳನ್ನು ಕಾಯುವ ಬದಲಾಗಿ ಸೃಷ್ಟಿಸಿ ಕೊಂಡು ಮುನ್ನಡೆಯುವವರೇ ನಿಜವಾದ ಸಾಧಕರು. ಇಂದಿನ ಅಂಕಪ್ರಧಾನ, ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳಿಗೆ ಬರವಿಲ್ಲವಾದರೂ ಬದುಕು ರೂಪಿಸಿ ಕೊಳ್ಳುವಿಕೆ ನಮ್ಮ ನಮ್ಮ ಕೈಯಲ್ಲಿಯೇ ಇದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹಾಂತೇಶ ಪರೂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಧನೆ ಸಾಧಕನ ಸ್ವತ್ತಾಗಿದ್ದು.ವಿಶಾಲವಾದ ಜಗತ್ತಿನಲ್ಲಿರುವ ವಿಫಲವಾದ ಅವಕಾಶಗಳನ್ನು ಸಮರ್ಥವಾಗಿ ಬಳಸಿ ಕೊಳ್ಳುವವರು ಮಾತ್ರ ಜೀವನದಲ್ಲಿ ಏನನ್ನಾದರೂ ಹೊಸತನ್ನು ಮಾಡಬಲ್ಲರು ಎಂದರು. ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಅಧ್ಯಕ್ಷತೆ ವಹಿಸಿ ಕೊಂಡಿದ್ದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶ್ವಿನಿ ರವಿ ಹುಚನೂರ ಮಾತನಾಡಿದರು.ಸದಸ್ಯರಾದ ರೇಖಾ ವಿಶ್ವನಾಥ ಬ್ಯಾಳಿ, ಉಪನ್ಯಾಸಕಿ ಛಾಯಾ ಪುರಂದರೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಭಿಯಂತರರಾದ ವೆಂಕಟೇಶ ಹೂಲಗೇರಿ ಮತ್ತು ಕಾಲೇಜಿಗೆ ಸಾಮಗ್ರಿ ದೇಣಿಗೆ ನೀಡಿದ ಸಿದ್ದಲಿಂಗಪ್ಪ ಬೀಳಗಿ ಅವರನ್ನು ಕಾಲೇಜಿನ ಪರವಾಗಿ ಸತ್ಕರಿಸಲಾಯಿತು.ಶಾವಂತ್ರವ್ವ ಗೌಡರ ಸಂಗಡಿಗರು ಪ್ರಾರ್ಥಿಸಿದರು.ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಸ್ವಾಗತಿಸಿದರು. ಡಾ.ಎನ್.ವಾಯ್ ನದಾಫ್ ನಿರೂಪಿಸಿದರು.ಎಚ್.ಟಿ.ಅಗಸಿಮುಂದಿನ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ