ಸಿದ್ದಗಂಗಾ ಮಠದಲ್ಲಿ ಶಿಕ್ಷಕ ಮುತ್ತು ವಡ್ಡರ ಅವರ ಸನ್ಮಾರ್ಗದ – ದುಂಬಿ ಪುಸ್ತಕ ಬಿಡುಗಡೆ.

ತುಮಕೂರು ಜ.18

ತುಮಕೂರಿನ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ಮುಂಭಾಗ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ಮೂರನೇ ಕೃತಿ ಸನ್ಮಾರ್ಗದ ದುಂಬಿ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಬಿಡುಗಡೆ ಯಾಯಿತು. ಪರಮ ಪೂಜ್ಯರು ಇನ್ನೂ ಹೆಚ್ಚಿನ ಕೃತಿಗಳು ನಿಮ್ಮಿಂದ ನಾಡಿಗೆ ಪರಿಚಯವಾಗಲಿ ಶುಭವಾಗಲಿ ಎಂದು ಆಶೀರ್ವಾದ ನೀಡಿದರು.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀ ಮುತ್ತು ಯ. ವಡ್ಡರ ಅವರು ಮೊದಲ ಬಾರಿಗೆ ವಿದ್ಯಾರ್ಥಿಗಳಿಗಾಗಿ ಸರಳ ಗಣಿತ ಪುಸ್ತಕ, ಎರಡನೇ ಬಾರಿಗೆ ನಾಡಿನ ಉದ್ದಗಲಕ್ಕೂ ಇರುವ ಎಲೆಮರೆ ಕಾಯಿಯ ಹಾಗೇ ಇರುವ ಸಾಧಕರನ್ನು ಗುರುತಿಸಿ ಎಲೆಮರೆ ಕಾಯಿಗಳು ಎಂಬ ಪುಸ್ತಕ ಹೊರತಂದು ಇದೀಗ ಮೂರನೇ ಬಾರಿಗೆ ಎಲ್ಲ ರೀತಿಯಿಂದಲೂ ಸ್ಪೂರ್ತಿದಾಯಕವಾಗಿರುವ ಸನ್ಮಾರ್ಗದ ದುಂಬಿ ಎಂಬ ಪುಸ್ತಕವನ್ನು ತಾವು ಕಲಿತಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿಯೇ ಪರಮ ಪೂಜ್ಯರ ಅಮೃತ ಹಸ್ತದಿಂದ ಬಿಡುಗಡೆ ಗೊಳಿಸಿದರು. ಈ ಪುಸ್ತಕವು ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ, ನಿರೂಪಕರಿಗಾಗಿ ಹಾಗೂ ಭಾಷಣಕಾರರಗಾಗಿ ಹೇಳಿ ಮಾಡಿಸಿರುವ ಪುಸ್ತಕ ಇದಾಗಿದೆ. ವಿದ್ಯಾರ್ಥಿಗಳು ಹೇಗೆ ಓದಬೇಕು ಜೀವನದಲ್ಲಿ ಅನೇಕ ಅವಮಾನ ಅಪಮಾನಗಳನ್ನು ಎದುರಿಸಿ ಹೇಗೆ ಮುಂದೆ ಬರಬೇಕು, ಸರಕಾರಿ ಶಾಲೆಗಳ ಕುರಿತು ಆ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಒಳ್ಳೆಯ ಹುದ್ದೆ ಸೇರಿ ಆ ಶಾಲೆಯ ಕೀರ್ತಿ ಹೇಗೆ ತರಬೇಕು, ಅದೇ ರೀತಿ ತಂದೆ ತಾಯಿಗಳ ಬಗ್ಗೆ ಗುರುಗಳ ಬಗ್ಗೆ ಮತ್ತು ಮಕ್ಕಳಲ್ಲಿ ಸಾಧಿಸುವ ಛಲ ಹುಟ್ಟಿಸುವಂತಹ ಪ್ರೇರಣಾರ್ಥಕ ಕವನಗಳು ಹೀಗೆ ಹಲವಾರು ರೀತಿಯ ವಿಷಯಗಳನ್ನು ಈ ಕವನ ಸಂಕಲನ ಒಳಗೊಂಡಿದೆ.

ಈ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಶಿಕ್ಷಕ ಶ್ರೀ ಮುತ್ತು ಯ. ವಡ್ಡರ ಅವರು ಪರಮ ಪೂಜ್ಯರನ್ನು ಭಕ್ತಿ ಭಾವದಿಂದ ಗೌರವಿಸಿ ಸನ್ಮಾನಿಸಿ ಪರಮ ಪೂಜ್ಯರ ಕುರಿತು ಬರೆದಿರುವಂತಹ ಕವನಗಳನ್ನ ಪೂಜ್ಯರಿಗೆ ಅರ್ಪಿಸಿದರು. ತಮಗೆ ಅಕ್ಷರ ಜ್ಞಾನವನ್ನು ನೀಡಿದ ಪರಮ ಪೂಜ್ಯರಾದ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳು ಹಾಗೂ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಕುರಿತು ಸ್ವರಚಿತವಾದ ಕವನ ಬರೆದು ಆ ಫೋಟೋ ಫ್ರೇಮ್ ಗಳನ್ನು ಪರಮ ಪೂಜ್ಯ ಗುರುಗಳಿಗೆ ಗುರು ಕಾಣಿಕೆಯಾಗಿ ಶ್ರೀಗಳ ಅಮೃತ ಹಸ್ತಕ್ಕೆ ನೀಡಿದರು. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿ, ಸ್ವಾಮೀಜಿಗಳು, ಅಧಿಕಾರಿಗಳು ಹಾಗೂ ಮಠದ ಸರ್ವ ಸಿಬ್ಬಂದಿಯವರು, ಕವಿ ಮನಸ್ಸುಗಳು, ಆತ್ಮೀಯರಾದ ನಾಗರಾಜ್ ಶೆಟ್ಟಿ ದಂಪತಿಗಳು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದರು. ತಾವು ಕಲಿತಿರುವ ಪುಣ್ಯ ಸ್ಥಳದಲ್ಲಿಯೇ ಪುಸ್ತಕವನ್ನು ಪರಮ ಪೂಜ್ಯರಿಂದ ಲೋಕಾರ್ಪಣೆ ಗೊಳಿಸಿ ಶ್ರೀ ಮುತ್ತು ಯ. ವಡ್ಡರ ಹಾಗೂ ಅವರ ಆತ್ಮೀಯ ಸ್ನೇಹ ಜೀವಿಗಳು ಹರ್ಷ ವ್ಯಕ್ತಪಡಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button