ನಿಡಗುಂದಿ ಪಟ್ಟಣದ ನದಿಯ ದಡದಲ್ಲಿ ಅಕ್ರಮ ಗಣಿಗಾರಿಕೆ, ಅಧಿಕಾರಿಗಳು ಮೌನ….!
ನಿಡಗುಂದಿ ಮಾರ್ಚ್.23

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ನಿಡಗುಂದಿ ಪಟ್ಟಣದಲ್ಲಿ ಏಳು ಮಕ್ಕಳ ತಾಯಿ ಮಂದಿರ ಹಾಗೂ ಹಳೇ ಬಾಗೇವಾಡಿ ಹೋಗುವ ರಸ್ತೆಯ ನದಿಯ ದಡದಲ್ಲಿ ಅನೇಕ ತಿಂಗಳುಗಳಿಂದ ಹಾಡು ಹಗಲೇ ಮಣ್ಣು, ಗರಸು ಅಕ್ರಮ ಗಣಿಗಾರಿಕೆ ಮುಂದುವರೆದಿದ್ದರೆ ತಾಲೂಕ ಆಡಳಿತಾಗಲಿ ಜಿಲ್ಲಾಡಳಿತಾಗಲಿ ಇದನ್ನು ತಡೆಯುವಲ್ಲಿ ವಿಫಲವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಗಣಿ ಅಕ್ರಮ ತಡೆಯುವಲ್ಲಿ ಜಾಣ ಮೌನ ತಾಳಿದ್ದಾರೆ. ಇಲ್ಲಿ ಹಗಲು ಹೊತ್ತಿನಲ್ಲಿ ನದಿಯಲ್ಲಿ ಗರಸು, ಮಣ್ಣು ಹೊಡೆಯುತ್ತಿದ್ದು ರಾತ್ರಿ ಹೊತ್ತಿನಲ್ಲಿ ಮರಳು ಸಾಗಿಸುವ ದಂಧೆ ಆಗಾಗ ನಡೆಯುತ್ತಲೆ ಇದೆ.

ಲೂಟಿಕೋರರು ನದಿಯಲ್ಲಿರುವ ಗರಸು, ಮಣ್ಣು ತೆಗೆದಿದ್ದರಿಂದ ನದಿಯಲ್ಲಿ ಬಾರಿ ಕಂದಕಗಳು ಬಿದ್ದಿವೆ.ಇಲ್ಲಿ ಅಕ್ರಮ ಗಣಿಗಾರಿಕೆ ಹಗಲು ಹೊತ್ತು ನಡೆದರೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬಂದಿಲ್ಲದಿರುವುದು ನಿಜಕ್ಕೂ ಸೋಜಿಗದ ಸಂಗತಿ ಎನ್ನಲಾಗುತ್ತಿದೆ. ಇಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ಹಿಂದೆ ಪಟ್ಟಭದ್ರ ಪ್ರಭಾವಿಗಳ ಕೃಪೆಯಿದೆ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ. ಯಾರ ಹೆದರಿಕೆ ಇಲ್ಲದೆ ನದಿಯಲ್ಲಿ ಬಂದು ಅಗೆದು ಮಣ್ಣು ಗರಿಸು ಸಂಗ್ರಹಿಸಿ ಜೆಸಿಬಿ ಯಂತ್ರೋಪಕರಣ ಗಳಿಂದ ಟ್ರ್ಯಾಕ್ಟರ್ ಗಳಿಗೆ ತುಂಬುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿವೆ.ಈ ಅಕ್ರಮ ಗಣಿಗಾರಿಕೆಯನ್ನು ತಡೆಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಮಹಾಂತೇಶ ಹಾದಿಮನಿ ವಿಜಯಪುರ.