ಅಪ್ಪನು ಆತ್ಮದ ಅಧಿಕಾರಿ ಉಸಿರನು ಹಂಚುವ ಉಪಕಾರಿ…..

ಅಪ್ಪ ಎಂದರೆ ಆಕಾಶ, ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ರಕ್ಷಣೆ ನನ್ನ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಜೊತೆಗೆ ಇದ್ದು ಕೈ ಹಿಡಿದು ನಡೆಸಿದ ಜೀವವದು. ಅಪ್ಪ ಎಲ್ಲ ಮಕ್ಕಳಿಗೆ ಮೊದಲ ಹೀರೋ, ಅದರಲ್ಲೂ ಹೆಣ್ಣು ಮಕ್ಕಳಿಗೆ ಅಂತೂ ಪ್ರಪಂಚ. ಅಪ್ಪಂದಿರಿಗೂ ಅಷ್ಟೇ, ಹೆಣ್ಣು ಮಕ್ಕಳ ಮೇಲೆ ಮೋಹ ಪ್ರೀತಿ ಹೆಚ್ಚೆ ಎನ್ನಬಹುದು. ಅಪ್ಪ ಎಂದರೆ ಬರೀ ಆಕಾಶವಲ್ಲ ಅಪರಿಮಿತ ಬ್ರಹ್ಮಾಂಡ. ಅಪ್ಪ ಎಂದರೆ ಬರೀ ಮರವಲ್ಲ ಹೆಮ್ಮರ! ದುಡಿಯುವದರ ಜೊತೆಗೆ, ಕಷ್ಟ ಸುಖಗಳನ್ನು ಸಮಪಾಲಿನಲ್ಲಿ ಸ್ವೀಕರಿಸುತ್ತಾ,ತನ್ನ ಹೊಟ್ಟೆ ತುಂಬದಿದ್ದರೂ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಅಪ್ಪ ಅಪ್ರತಿಮ ಸಾಧಕ! ಅಪ್ಪ ಎಂದರೆ ಎಲ್ಲವನ್ನೂ ಎದುರಿಸಿ ಮತ್ತೇ ನಿಲ್ಲಬಲ್ಲ ಪರ್ವತ! ಅಪ್ಪ ಇದ್ದರೆ ಮನೆಯಲ್ಲಿ ಒಂಥರಾ ನೆಮ್ಮದಿ, ತೃಪ್ತಿ, ಸಡಗರ, ಸಮಾಧಾನ ಮತ್ತು ಆತನ ಆ ಮಗುವಿನಂತ ನಗುವೇ ಮನೆಯವರೆಲ್ಲರಿಗೆ ಆಧಾರ. ಅಪ್ಪ ಇದ್ದಾರೆಂಬುದೇ ಬದುಕಿಗೊಂದು ಛಲ! ಅಪ್ಪನ ಬಗೆಗೆ ಅದೆಷ್ಟು ಹೇಳಿಕೊಂಡರೂ ಸಾಲದು. ಅಪ್ಪ, ಆ ಪದದಲ್ಲೇ ಒಂದು ರೀತಿಯ ಗಾಂಭೀರ್ಯ ಮತ್ತು ಒಂದು ಗೌರವವಿದೆ. ಪ್ರೀತಿ ಎಂಬುದು ಅಮ್ಮನ ಮುಂದೆ ಸಲುಗೆ, ಶಬ್ದ ರೂಪದಲ್ಲಿ ವ್ಯಕ್ತವಾದರೆ, ಅಪ್ಪನ ಮುಂದೆ ಅದು ಗೌರವ ಮತ್ತು ಭಯದ ರೂಪದಲ್ಲಿ ಅಭಿವ್ಯಕ್ತವಾಗುತ್ತದೆಯಂತೆ. ಎಲ್ಲ ಮಕ್ಕಳಿಗೂ ಅಪ್ಪನೆಂದರೆ ಅಚ್ಚುಮೆಚ್ಚು. ಅಪ್ಪ ಎಂದರೆ ಭಾವನೆಗಳ ಮೂಟೆ. ಮಕ್ಕಳ ಜೀವನದಲ್ಲಿ ಅಪ್ಪಂದಿರ ಪಾತ್ರ ಬಹುದೊಡ್ಡದು. ಅಮ್ಮನ ಮಡಿಲಿನಿಂದ ಕೈ ಹಿಡಿದು ನಮ್ಮನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ ಅಪ್ಪ. ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪ, ಹಗಲು ಬೆವರಿನ ಕೂಲಿಕಾರ, ರಾತ್ರಿ ಮನೆಯಲ್ಲಿ ಚೌಕಿದಾರ, ಎಲ್ಲಾ ಕೊಡಿಸುವ ಸಾಹುಕಾರ ಅಪ್ಪ…. ಗದರೋ ಮೀಸೆಗಾರ, ಮನಸೇ ಕೋಮಲಾ….ನಿನ್ನ ಹೋಲೋ ಕರ್ಣ ಯಾರಿಲ್ಲ, ಅಪ್ಪಾ ಐ ಲವ್ ಯು ಪಾ…ಈ ಸಾಲುಗಳು ಎಷ್ಟು ಸತ್ಯ ಅಲ್ವಾ? ನಮಗೋಸ್ಕರ ರಾತ್ರಿ ಹಗಲೆನ್ನದೆ ದುಡಿಯುವ ಅಪ್ಪ ತನಗಾಗಿ ಏನಿಲ್ಲದಿದ್ದರೂ ಮಕ್ಕಳಿಗಾಗಿ ಎಲ್ಲವನ್ನು ಮಾಡುತ್ತಾರೆ. ಅಪ್ಪ ತನ್ನ ಹೆಂಡತಿ ಮಕ್ಕಳಿಗಾಗಿಯೇ ಜೀವನವನ್ನೇ ಮುಡಿಪಾಗಿಡುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಅಮ್ಮ ಕಣ್ಣಾದರೆ ಅಪ್ಪ ಕಣ್ಣನ್ನು ರಕ್ಷಿಸುವ ಕಣ್ಣ ರೆಪ್ಪೆಯಾಗಿ ಯಾವತ್ತೂ ಕುಟುಂಬದ ವ್ಯಕ್ತಿಯ ಬದುಕಿಗೆ ಆಸರೆಯಾಗಿರುತ್ತಾರೆ. ನನ್ನ ಜೀವನದಲ್ಲೂ ಸಹಾ ಅಪ್ಪನ ಪಾತ್ರ ಅವರ್ಣಿನಿಯವಾಗಿಹುದು. ಅಪ್ಪನಲ್ಲಿರುವ ಒಳ್ಳೆಯ ಗುಣ, ಆತನ ವಿಚಾರಗಳು ಹೇಗಿರುತ್ತವೆ ಎಂದರೆ, ತನ್ನ ಕಾಲಲ್ಲಿ ಹರಿದ ಚಪ್ಪಲಿ ಮತ್ತು ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಪರವಾಗಿಲ್ಲ, ನನ್ನ ಮಕ್ಕಳು ನಾಲ್ಕು ಜನರ ಮಧ್ಯೆ ಇರುವುದರಿಂದ ಒಳ್ಳೆಯ ಚಪ್ಪಲಿ, ಬಟ್ಟೆ ಧರಿಸಲಿ ಎನ್ನುವ ಭಾವನೆಯವರು. ಮಕ್ಕಳ ಪ್ರತಿಯೊಂದು ಆಸೆಗೆ ನೀರೆರೆಯುತ್ತ ಮಕ್ಕಳ ಖುಷಿಯೇ ತನ್ನ ಖುಷಿ ಎಂದು ಹಗಲಿರುಳು ಶ್ರಮಿಸುವ ಶ್ರಮಜೀವಿ. ಜನ್ಮ ಜನ್ಮಾಂತರದಲ್ಲೂ ಋಣ ತೀರಿಸಲಾಗದ ಭಗವಂತ ಅಪ್ಪಾ. ನನ್ನಪ್ಪ ಎಲ್ಲರಂತಲ್ಲ. ಅವರ ಯೋಚನೆ ಮಾಡುತ್ತಿದ್ದ ರೀತಿಯೇ ಭಿನ್ನವಾಗಿತ್ತು. ನಮ್ಮನ್ನು ಗಂಡು ಮಕ್ಕಳಂತೆಯೇ ಬೆಳೆಸಿದರು. ಸಮಾಜವು ನಮ್ಮನ್ನು ಹೆಣ್ಣು ಮಕ್ಕಳು ಎಂದು ನೋಡಿದರೂ ನಮ್ಮಪ್ಪನಿಗೆ ಮಾತ್ರ ನಮ್ಮ ಮೇಲೆ ಭರವಸೆ ಬೆಟ್ಟದಷ್ಟಿತ್ತು. ‘ ನೀವು ದೇವರಂತೆ, ನಿಮಗೆ ದೇವತೆಯರ ಶಕ್ತಿ ಇದೆ ‘ ಎನ್ನುತ್ತಲೇ ನಮಗೆ ಧೈರ್ಯ ತುಂಬಿ ಬೆಳೆಸಿದವರು. ‘ಬದುಕಿನಲ್ಲಿ ಧೈರ್ಯವೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಬದುಕೆಂದರೆ ಧೈರ್ಯ ‘ ಎಂದು ಅರ್ಥ ಮಾಡಿಸಿದ್ದ ಅಪ್ಪ. ಹೆಣ್ಣು ಮಕ್ಕಳ ಜೀವನದಲ್ಲಿ ಅಪ್ಪ ಎನ್ನುವ ಪಾತ್ರವೇ ಅಂತಹದ್ದು. ಬದುಕಿನ ಎಲ್ಲಾ ಹಂತದಲ್ಲೂ ಅಪ್ಪ ಹೆಣ್ಣುಮಕ್ಕಳ ಹಿಂದೆ ಶಕ್ತಿಯಾಗಿ ನಿಲ್ಲುತ್ತಾರೆ. ಮಗಳು ಬದುಕನ್ನು ಗೆಲ್ಲಲು ಅವರು ನೀಡುವ ಧೈರ್ಯ ಬೇರೊಬ್ಬರು ನೀಡಲು ಸಾಧ್ಯವಿಲ್ಲ. ಅಪ್ಪನೆಂಬ ಕಲ್ಪವೃಕ್ಷ,ತನ್ನ ಸಂಸಾರಕ್ಕೆ ಸದಾ ನೆರಳಾಗಿ ಇರುವ ಜೀವ. ತನ್ನ ಮಕ್ಕಳಿಗಾಗಿ ಬದುಕನ್ನೇ ಸವೆಸುವ ಆ ಜೀವ ತನ್ನ ಸಂತೋಷ, ಸುಖಕ್ಕಿಂತ ಮಕ್ಕಳ ಸುಖದಲ್ಲೇ ಸರ್ವಸ್ವವನ್ನು ಕಾಣುವವನು. ಬದುಕಿನಲ್ಲಿ ಅಪ್ಪನಿದ್ದರೆ ಧೈರ್ಯ , ಅಪ್ಪನಿದ್ದರೆ ಛಲ, ಅಪ್ಪನಿದ್ದರೆ ಬದುಕನ್ನೇ ಗೆದ್ದು ಬಿಡುವ ಹಂಬಲ. ಯಾವಾಗಲೂ ಅಪ್ಪನ ಪ್ರೀತಿಯಲ್ಲಿ ಹೆಣ್ಣು ಮಕ್ಕಳಿಗೆ ಒಂದು ಪಾಲು ಹೆಚ್ಚೇ ಇರುತ್ತದೆ. ಹೆಣ್ಣು ಮಕ್ಕಳಿಗೂ ಅಷ್ಟೇ ಅಪ್ಪನೊಂದಿಗೆ ಹೆಚ್ಚು ಸಲುಗೆ, ಪ್ರೀತಿ ಇರುತ್ತದೆ. ಅದೇ ಅಪ್ಪ ನಮ್ಮಿಂದ ದೂರವಾದರೆ ಬದುಕೆ ಖಾಲಿ ಎನ್ನಿಸಿಬಿಡುತ್ತೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪನಿಲ್ಲದ ಬದುಕು ನಿಜಕ್ಕೂ ಕಷ್ಟ. ಹೆಣ್ಣು ಮಕ್ಕಳಿಗೆ ಅಪ್ಪನಿರುವ ಜೀವನ ಒಂದು ಭಾಗವಾದರೆ, ಅಪ್ಪನಿಲ್ಲದ ಜೀವನ ಇನ್ನೊಂದು ಭಾಗ. ಗಂಡುಮಕ್ಕಳು ಸಮಾಜವನ್ನು ಎದುರಿಸುವುದಕ್ಕೂ ಹೆಣ್ಣುಮಕ್ಕಳು ಸಮಾಜವನ್ನು ಎದುರಿಸುವುದಕ್ಕೂ ಹಲವು ವ್ಯತ್ಯಾಸಗಳಿವೆ. ಅಪ್ಪನಿಲ್ಲದ ಬದುಕು ನಿಜಕ್ಕೂ ಸೂತ್ರ ಹರಿದ ಗಾಳಿಪಟ. ಹೆಣ್ಣುಮಕ್ಕಳ ಜೀವನದ ಪ್ರತಿಯೊಂದು ಹಂತದಲ್ಲೂ ಅನುಪಸ್ಥಿತಿ ಕಾಡಿಯೇ ಕಾಡುತ್ತದೆ. ಅಪ್ಪನ ಪ್ರೀತಿ, ತ್ಯಾಗ, ಮಮತೆ ಹಾಗೂ ಅಪ್ಪನ ಆದರ್ಶವೇ ಅಂತಹದ್ದು. ಹೀಗೆ ನಾನು ಬಿ. ಕಾಂ.ಪದವಿಯನ್ನು ಓದುತ್ತಿರುವಾಗ ನನ್ನ ತಂದೆಯನ್ನು ಕಳೆದುಕೊಂಡೆ ಆ ಒಂದು ಸಂದರ್ಭದಲ್ಲಿ ತುಂಬಾ ನೋವಾಯಿತು. ಏಕೆಂದರೆ ಅಪ್ಪನಿಲ್ಲದ ಬದುಕೆಂದರೆ ಮಕ್ಕಳ ಪಾಲಿಗೆ ಸೂತ್ರ ಹರಿದ ಗಾಳಿಪಟದಂತೆ. ಅದರಲ್ಲೂ ಹೆಣ್ಣುಮಕ್ಕಳ ಪಾಡು ಇನ್ನೂ ದುಸ್ತರ. ಆದರೆ ನನ್ನ ತಂದೆ ಯಾವಾಗಲೂ ಹೇಳುತ್ತಿರುವ ಮಾತು ಎಂತಹ ಕಷ್ಟ ಬಂದರು ಸಹ ಶಿಕ್ಷಣವನ್ನು ಅರ್ಧಗೊಳಿಸಬೇಡಿ ಒಳ್ಳೆಯ ಶಿಕ್ಷಣ ಪಡೆದು ನಿಮ್ಮ ನಿಮ್ಮ ಜವಾಬ್ದಾರಿಗಳನ್ನು ನೀವೇ ನಿಭಾಯಿಸಿಕೊಳ್ಳಿ ಎಂದು ಧೈರ್ಯದ ಮಾತುಗಳನ್ನು ಹೇಳುತ್ತಿದ್ದರು. ಏನೇ ನೋವು ಬಂದರೂ ಬಾಗದ ಅಪ್ಪನ ಗುಣ, ಛಲ ಮಾತ್ರ ಇಂದಿಗೂ ನಮ್ಮಲ್ಲಿದೆ. ಎಲ್ಲವನ್ನೂ ನಿಭಾಯಿಸುವ ಆತ್ಮವಿಶ್ವಾಸ, ಅಪ್ಪ ಕಲಿಸಿಕೊಟ್ಟ ಅಮೂಲ್ಯ ಸಂಸ್ಕಾರಗಳು ನಮ್ಮೊಟ್ಟಿಗಿವೆ. ಅಪ್ಪ ದೈಹಿಕವಾಗಿಲ್ಲದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮೊಟ್ಟಿಗಿದ್ದಾರೆಂದೇ ಬದುಕುತ್ತಿದ್ದೇವೆ. ಅಪ್ಪ ಅಂದರೆ ಬೆನ್ನೆಲುಬು, ಅಪ್ಪ ಅಂದರೆ ಆಸರೆ, ಅಪ್ಪ ಅಂದರೆ ಆಕಾಶ….ಬದುಕಿಗೆ ಭರವಸೆ ಅಪ್ಪನ ಆ ಮರೆಯಲಾಗದ ನೆನಪುಗಳು… ಅಪ್ಪನವರು ಎಂದಿಗೂ ನಂದದ ನಂದಾದೀಪ. ಅಪ್ಪನ ಬಗ್ಗೆ ಹೇಳ ಹೊರಟರೆ ಅದೊಂದು ಮುಗಿಯದ ಪುಸ್ತಕದಂತೆ ಹೊಸ ಹೊಸ ಅಧ್ಯಾಯಗಳು ತೆರೆದು ಕೊಳ್ಳುತ್ತಲೇ ಇರುತ್ತವೆ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ