ಬದುಕಿಗೆ ಗುರಿ, ದಾರಿ ತೋರುವ ಗುರುಗಳಿಗೆ ವಂದನೆ…..

ತಾಯಿ ಮಡಲಿನಲ್ಲಿ ಹಸುಗೂಸು ಕಣ್ಣು ತೆರೆದರೂ ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ವಿದ್ಯಾರ್ಥಿ ಜೀವನದಲ್ಲಿ ತಪ್ಪೊಪ್ಪುಗಳನ್ನು ತಿದ್ದಿ ಹೇಳಿ ಉತ್ತಮ ವ್ಯಕ್ತಿತ್ವವ ರೂಪಿಸಿ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಗುರುಗಳು ನಮ್ಮ ಜೀವನದ ಪುಟಗಳಲ್ಲಿ ಅಜರಾಮರಾಗಿರುವವರು. ಒಂದು ಗಿಡಕ್ಕೆ ಪರಿಪೂರ್ಣವಾದ ಪೋಷಕಾಂಶಗಳನ್ನು ನೀಡಿದರೆ ಮಾತ್ರ ಆ ಗಿಡ ಸಮೃದ್ಧವಾಗಿ ಬೆಳೆಯಲು ಸಾಧ್ಯ. ನಿಸ್ವಾರ್ಥ ಮನಸ್ಸಿನಿಂದ ಎಲ್ಲರನ್ನು ತಮ್ಮ ಮಕ್ಕಳಂತೆ ಪಾಲನೆ ಮಾಡಿ ನೀತಿ ತತ್ವಗಳನ್ನು ಧಾರೆಯೆರೆಯುವ ಶಿಕ್ಷಕರು ನಮ್ಮ ಜೀವನದ ಅಮೂಲ್ಯ ರತ್ನಗಳು. ಶಿಕ್ಷಕರು ವಿದ್ಯಾರ್ಥಿಗಳನ್ನು ತಾಯಿಯಂತೆ ಕೈ ಹಿಡಿದು ಮಮತೆಯಿಂದ, ಪ್ರೀತಿಯಿಂದ ತಮ್ಮೆಲ್ಲಾ ಶಕ್ತಿಯೊಂದಿಗೆ ವಿದ್ಯಾರ್ಥಿಗಳನ್ನು ಗಮನಿಸಿ ಅವರ ಉದ್ಧಾರಕ್ಕಾಗಿ ಶ್ರಮಿಸುತ್ತಿರುತ್ತಾರೆ. ಪ್ರತಿಕ್ಷಣ ಪ್ರತಿ ಸಮಯ ವಿದ್ಯಾರ್ಥಿಗಳ ಬಗ್ಗೆ ವಿಚಾರವನ್ನು ಮಾಡಿ ಅವರನ್ನು ಉದ್ದಾರ ಮಾಡುತ್ತಾರೆ. ವಿದ್ಯಾರ್ಥಿಗಳನ್ನು ಶುದ್ಧ ಮಾಡಿ ಅವರನ್ನು ಮೋಕ್ಷದ ಕಡೆಗೆ ಕರೆದುಕೊಂಡು ಹೋಗುತ್ತಾರೆ. ಭಗವಂತ ಬೇಡಿದನ್ನೆಲ್ಲಾ ಕೊಟ್ಟರೆ ಗುರುಗಳು ಅವಶ್ಯಕತೆ ಇದ್ದದ್ದನ್ನು ಕೇಳದೆಯೇ ಕೊಡುತ್ತಾರೆ. ಒಮ್ಮೆ ಶಿಷ್ಯನ ಕೈ ಹಿಡಿದರೆ ಗುರುಗಳು ಬಿಡುವುದೇ ಇಲ್ಲ. ಈ ರೀತಿಯಲ್ಲಿ ಗುರುಗಳು ಮಾರ್ಗದರ್ಶನದಲ್ಲಿ ನಡೆದು ಭವಸಾಗರದಂತೆ ಇರುವ ನಮ್ಮ ಜೀವನ ನೌಕೆಯನ್ನು ಗುರುಗಳೇ ನಡೆಸಬಲ್ಲರು. ಜೀವನದಲ್ಲಿ ಬರುವ ಸಂಕಟಗಳನ್ನು ಸಹಿಸುವ ಕ್ಷಮತೆಗಳನ್ನು ಕೊಡುವಂತ ಗುರುಗಳನ್ನು ಸದಾ ಸ್ಮರಿಸಿ ನಮ್ಮ ಜೀವನದ ದೋಷಗಳನ್ನು ತೆಗೆದು ಸುಗಂಧಪೂರಿತವಾದ ಜೀವದ ಪುಷ್ಪವನ್ನು ಗುರುಗಳ ಚರಣಕ್ಕೆ ಅರ್ಪಣೆ ಮಾಡುವುದು ವಿದ್ಯಾರ್ಥಿಗಳ ಮುಖ್ಯ ಧರ್ಮವೇ ಆಗಿದೆ. ಗುರು ಎಂಬುದು ಬೌತಿಕ ವಸ್ತುವಲ್ಲ. ಜ್ಞಾನ ಎಂಬುದನ್ನು ಶಿಷ್ಯನಲ್ಲಿಗೆ ಪ್ರವಹಿಸುವಂತೆ ಮಾಡುವ ಶಕ್ತಿ. ಶಿಷ್ಯನನ್ನು ಒಂದು ಹಿಮಗಲ್ಲು ಎಂದು ಭಾವಿಸಿದರೆ ಜ್ಞಾನ ಎಂಬುದು ಕುದಿಯುವ ನೀರಿನಂತೆ. ಗುರು ಈ ಕುದಿಯುವ ನೀರನ್ನು ಶಿಷ್ಯ ಎಂಬ ಹಿಮಗಲ್ಲಿನ ಮೇಲೆ ನಿಧಾನವಾಗಿ ಹನಿ ಸುರಿಯುತ್ತಾ ಬರುತ್ತಾನೆ. ಇಲ್ಲದಿದ್ದರೆ ಹಿಮಗಲ್ಲು ಬಿರುಕು ಬಿಡುತ್ತದೆ. ಗುರು ಶಿಷ್ಯನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ. ವಿಕಸನದ ಪ್ರಯಾಣದಲ್ಲಿ ಗುರು ಅಕ್ಷರಶಃ ಶಿಷ್ಯನನ್ನು ಹೊತ್ತೊಯ್ಯುತ್ತಾನೆ.ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ!ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ! ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ. ಗುರುವೇ ನಿಜವಾದ ಪರಮ ಬ್ರಹ್ಮ ಅಂತಹ ಗುರುಗಳಿಗೆ ನಾನು ನಮಿಸುತ್ತೇನೆ. ಮಕ್ಕಳಲ್ಲಿನ ಜ್ಞಾನವನ್ನು ಹೆಚ್ಚಿಸಿ ಅವರನ್ನು ಇನ್ನಷ್ಟು ಬೌದ್ಧಿಕವಾಗಿ ಬಲಗೊಳಿಸುವವನೇ ಶಿಕ್ಷಕನಾಗಿರುತ್ತಾನೆ. ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ಮುನ್ನಡೆಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗವನ್ನು ತೋರಿಸುವವರು ಶಿಕ್ಷಕರು. ತಮ್ಮ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎತ್ತರವನ್ನು ತಲುಪಬೇಕೆಂದು ಬಯಸುವ ನಮ್ಮ ಪೋಷಕರ ಮುಂದಿನ ಹಿತೈಷಿಗಳಲ್ಲಿ ಶಿಕ್ಷಕರನ್ನು ಒಬ್ಬರು ಎಂದು ಪರಿಗಣಿಸಲಾಗುತ್ತದೆ. ನಮ್ಮ ಪೋಷಕರ ನಂತರ, ನಮ್ಮ ಎಲ್ಲಾ ಅಂಶಗಳಲ್ಲಿ ಯಾವಾಗಲೂ ನಮ್ಮನ್ನು ಬೆಂಬಲಿಸುವವರು ಮತ್ತು ಪ್ರೋತ್ಸಾಹಿಸುವವರು ಶಿಕ್ಷಕರಾಗಿರುತ್ತಾರೆ. ಅಜ್ಞಾನದ ಕಳೆಯ ಕಿತ್ತು, ಸುಜ್ಞಾನದ ಬೀಜ ಬಿತ್ತಿ, ಸದ್ಗುಣಗಳ ಗೊಬ್ಬರ ಹಾಕಿ, ನವ ಚೇತನದ ಫಲವ ಮೂಡಿಸಿ, ದೇಶಕ್ಕೆ ಒಳಿತೆಂಬ ಗಾಳಿಯು ಅಳಿಯದೆ ಉಳಿಸಿ ಸಿಗುವಂತೆ ಮಾಡುವವರೇ ನಮ್ಮೆಲ್ಲರ ಗುರುಗಳು. ಪ್ರತಿ ಹೆಜ್ಜೆಯಲ್ಲೂ ವಿದ್ಯಾರ್ಥಿಗಳ ಕೈ ಹಿಡಿದು ದಾರಿ ತೋರಿದ ಕಾಣದ ಕೈಗಳು ಶಿಕ್ಷಕರು. ಬದುಕಲು ಉಸಿರಾಟ ಎಷ್ಟು ಮುಖ್ಯವೋ ಹಾಗೆ ಪ್ರತಿಯೊಬ್ಬರ ಬಾಳಿನ ಜ್ಯೋತಿ ಬೆಳಗಲು ಗುರುಗಳ ಪಾತ್ರ ಅಷ್ಟೇ ಮುಖ್ಯವಾದದ್ದು. ಗುರುವಿಲ್ಲದೆ ಈ ಪ್ರಪಂಚದಲ್ಲಿ ಎಲ್ಲವೂ ಅಪೂರ್ಣ. ” ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು ” ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದಾಗಿದೆ. ” ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ ” ಎಂಬ ಮಾತು ಅಕ್ಷರಶಃ ಸತ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರು ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಕಟ್ಟಿ ಕೊಡುವವರು ಗುರುಗಳು.ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವ ಹಾಗೆ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಪ್ರತಿಯೊಬ್ಬ ಗುರುವಿಗೂ ನನ್ನ ಕೋಟಿ ಕೋಟಿ ನಮನಗಳು….!

ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ ಸರಿದಾರಿಯ ತೋರಿ ಜ್ಞಾನದ ದೀವಿಗೆಯ ಬೆಳಗಿದ ಗುರು ನೀವು. ತಪ್ಪು ಮಾಡಿದಾಗ ಮಾತಲ್ಲೆ ಶಿಕ್ಷಿಸಿ ಕ್ಷಮಿಸಿ ತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕರು ನೀವು. ಅಕ್ಕರೆಯಿಂದ ಅಕ್ಷರ ಕಲಿಸಿ ಜಗದ ಶ್ರೇಷ್ಠರ ವಿಚಾರ ತಿಳಿಸಿ ನಾವು ಅವರಂತಾಗಬೇಕೆಂದು ಪ್ರೇರೇಪಿಸಿದವರು ನೀವು. ಪೋಷಕರಂತೆ ಪ್ರೀತಿ ತೋರಿ ಸ್ನೇಹಿತರಂತೆ ಜೊತೆಗೂಡಿ ಪ್ರತಿ ಸೋಲು ಗೆಲುವಿನಲ್ಲಿ ದೈರ್ಯ ತುಂಬಿದವರು ನೀವು. ನಿಮಗುಂಟು ಎಣಿಕೆಗೆ ಸಿಗದ ಶಿಷ್ಯವೃಂದ ಅದರಲ್ಲಿ ನಾನೊಂದು ಚುಕ್ಕಿ ಎಂಬುದು ಪರಮಾನಂದ.

ಕು. ಜ್ಯೋತಿ ಆನಂದ ಚಂದುಕರ

ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button