ತಾಯಿಯ ಒಡಲು – ಬಂಗಾರದ ಕೊಡಲು…..

ತಾಯಿಯು ಒಂದು ಪದವಾಗಿದ್ದು ಅದು ಸ್ವತಃ ಪರಿಪೂರ್ಣ ಪದವಾಗಿದೆ. ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೂಲ ಕಾರಣ. ತಾಯಿ ನಮ್ಮ ಜನ್ಮದಲ್ಲಿ ದೇವರ ಸಂಗಾತಿ. ನಾವು ದೇವರನ್ನು ನೋಡಿಲ್ಲ, ಮುಟ್ಟಿಲ್ಲ, ಆದರೆ ದೇವರನ್ನು ಕಂಡರೆ ಅದು ತಾಯಿಯಂತಾಗಬಹುದು.

ತಾಯಿಯೇ ಮೊದಲ ಗುರು ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ, ತಾಯಿಯ ಸೇವೆಯು ಎಲ್ಲಾ ದೇವರ ಸೇವೆ ಮಾಡಿದ ಪ್ರತಿ ಫಲವಾಗಿದೆ.

ಈ ಭೂಮಿಯ ಮೇಲೆ ದೇವರು ಎಲ್ಲಾ ಕಡೆ ಇರಲು ಅಸಾಧ್ಯವೆಂದು ತಿಳಿದು, ಪ್ರತಿ ಮನೆ ಮನೆಗೆ ಒಬ್ಬ ಮಹಾ ತಾಯಿಯನ್ನು ಕಲ್ಪಿಸಿದ. ಅವಳೇ ನಮ್ಮ ಜನ್ಮಕ್ಕೆ ಕಾರಣೀಭೂತರಾದ ಮಹಾ ತ್ಯಾಗಿ ಜನನಿ. ಒಮ್ಮೊಮ್ಮೆ ನಮ್ಮೊಂದಿಗಿರುವ ಎಲ್ಲಾ ಸಂಬಂಧಗಳು ಶೂನ್ಯವೆನಿಸಬಹುದು. ಆದರೆ ತಾಯಿಯ ಸಂಬಂಧಕ್ಕೆ ಮಿತಿಯೇ ಇಲ್ಲ. ಅದು ಒಂದು ರೀತಿಯ ಕರುಳು ಬಳ್ಳಿಯ ಸಂಬಂಧವಾದದ್ದರಿಂದ ಉಸಿರಿನ ಕೊನೆಯ ಘಳಿಗೆಯ ಆಚೆಗೂ ಮರೆಯದ ಸಂಬಂಧವಾಗಿದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಹೇಳುತ್ತದೆ ತಾಯಿಯ ಅಮೂಲ್ಯವಾದ ಸಂಬಂಧವನ್ನು. ಪ್ರತಿ ಮಗುವಿಗಾಗಿ ಚಿಂತಿಸುವ, ಯೋಚಿಸುವ ಆ ಮಗುವಿನ ಉಜ್ವಲ ಭವಿಷ್ಯಕ್ಕೆ ಹಗಲಿರುಳು ಎನ್ನದೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ತಾಯಿಯ ಬಗ್ಗೆ ವರ್ಣಿಸಲು ಪದಗಳ ಕೊರತೆ ಬಹಳವಿದೆ. ದಿನ ನಿತ್ಯದ ಬೆಳಗಿನಿಂದ ರಾತ್ರಿಯವರೆಗಿನ ಮನೆಯ ಎಲ್ಲ ಕೆಲಸ ಕಾರ್ಯಗಳ ಜೊತೆಗೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತವಳು ತಾಯಿ. ಅದಕ್ಕಾಗಿಯೇ ಹೇಳಿದ್ದು “ಮಾತೃ ದೇವೋಭವ” ಎಂದು. ಈ ಭೂಮಿಯ ಮೇಲೆ ಬ್ರಹ್ಮ ಬರೆಯುವ ಹಣೆಬರಹವನ್ನು ತಾಯಿ ಏನಾದರೂ ಬರೆದಿದ್ದರೆ ಯಾವ ಕೆಟ್ಟ ಮಕ್ಕಳು ಕೂಡ ಹುಟ್ಟುತ್ತಿರಲಿಲ್ಲ. ತಾಯ್ತನ ಬಂದಮೇಲೆ ಹೆಣ್ಣು ಮಗಳು ದೇವರಾಗಿ ಕಾಣುವಳು.

ಅಮ್ಮಾ…. ಅದೆಷ್ಟು ಹಿತ ಈ ನುಡಿ ಭೂಮಿಗೆ ಬಿದ್ದಾಕ್ಷಣ ನಾ ಹೇಳಿದ್ದು ಆ ನೋವಿನಲ್ಲೂ ಅದೆಂತಹ ಸಾರ್ಥಕ ನಗು ಹೊರಲು ಭಾರವಿಲ್ಲ, ಹೆರುವ ಕಷ್ಟ ಕಷ್ಟವೇ ಅಲ್ಲ ಎಂದೆಣಿಸಿ ಜೀವ ಕೊಟ್ಟವಳು ಅಮ್ಮ. ತಾಯಿ ಎಂದರೆ ಆಕಾಶದಲ್ಲಿ ಮಿನುಗುತ್ತಾ ಬದುಕು ನೀಡುವ ಬೆಳಕು. ತಾಯಿ ಎಂದರೆ ಹೊಸ ಜೀವಿಯನ್ನು ಅಸ್ತಿತ್ವಕ್ಕೆ ತರುವವಳು ತನ್ನ ದೇಹವನ್ನು ಸಹ ತ್ಯಾಗ ಮಾಡುವ ತ್ಯಾಗಮಹಿ ಅವಳು. ತಾಯಿ ಎಂದರೆ ಎಲ್ಲ ನೋವುಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯಕ್ಕೆ ಜೀವನ ಮುಡಿಪಾಗಿಟ್ಟ ತ್ಯಾಗಮಯಿ. ತಾಯಿ ಎಂದರೆ ತನಗೆ ಹಸಿವಿದ್ದರೂ ಹಸಿವಿಲ್ಲ ನೀವು ಊಟ ಮಾಡಿರಿ ಎಂದು ಹೇಳುವ ಮಾತೃದೇವತೆ ತಾಯಿ. ಒಂದು ವೇಳೆ ಅವಕಾಶವಿದ್ದರೆ ತನ್ನ ಜೀವಿತಾವಧಿಯ ಅರ್ಧ ಆಯುಷ್ಯವನ್ನೇ ಮಕ್ಕಳಿಗೆ ಮೀಸಲಿಡುವ ಕರುಣಾಮಯಿ. ತಾಯಿ ಎಂದರೆ ಎಲ್ಲೇಇರಿ ಹೇಗೇ ಇರಿ ಎಂದೆಂದಿಗೂ ಸುಖವಾಗಿ ನೆಮ್ಮದಿಯಿಂದ ಬದುಕಿರಿ ಎಂದು ಆಶೀರ್ವದಿಸುವ ಕಾಮಧೇನು. ತಾಯಿ ಎಂದರೆ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರು. ನೆನಪಿರಲಿ ಮುಖದ ಕಣ್ಣಿಗೆ ಕಾಣುವ ಸಾವಿರ ದೇವರಿಗಿಂತ ಮನದ ಕಣ್ಣಿಗೆ ಕಾಣುವ ತಾಯಿ ಎಂಬ ಒಬ್ಬ ದೇವರೇ ಶ್ರೇಷ್ಠ. ತನಗೆ ಎಷ್ಟೇ ಕಷ್ಟವಿದ್ದರೂ ತನ್ನ ಮಕ್ಕಳು ಕೆಟ್ಟು ಹೋಗಬಾರದೆಂದು ಬೆಳೆಸುವ ಜವಾಬ್ದಾರಿಯ ವ್ಯಕ್ತಿ ತಾಯಿ. ಕವಿ ಹೇಳುವಂತೆ “ಪ್ರೀತಿ ಯಾವಾಗಲೂ ಗೆಲ್ಬೇಕು, ಗೆಲ್ಲೋ ಪ್ರೀತಿ ತಾಯಿಯ ಪ್ರೀತಿಯಾಗಬೇಕು. ಕಾರಣ ತಾಯಿಯ ಪ್ರೀತಿಗೆ ಯಾವತ್ತೂ ಸಾವೇ ಇಲ್ಲ”. ಅಂತಹ ಸಾವಿರದ ಪ್ರೀತಿಯನ್ನು ಪಡೆದ ನಾವೇ ಧನ್ಯರು. ಇದರೊಂದಿಗೆ ತಾಯಿಯನ್ನು ಪ್ರೀತಿ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾಗಿದೆ.ದೇವರ ಹೋಲಿಕೆಗೆ ಸರಿ ಸಾಟಿ, ದೇವರ ಪ್ರತಿ ರೂಪ ಹೊತ್ತವಳು ಜೀವ ಕೊಟ್ಟಳು ಜೀವನ ನಡೆಸುವಳು ತಾಯಿ. ದೇವರಿಗಿಂತ ದೊಡ್ಡವರು ತಾಯಿ, ಕಾರಣ ದೇವರಿಗೆ ಜನ್ಮ ಕೊಟ್ಟವಳು ತಾಯಿ. ರಾಮ,ಕೃಷ್ಣ, ಬಸವಣ್ಣ,ಬುದ್ಧ ಹಾಗೂ ಮಹಾವೀರ ಇವರೆಲ್ಲ ದೇವರೆಂದ ಮೇಲೆ, ಇವರಿಗೆ ಜನ್ಮ ಕೊಟ್ಟ ತಾಯಿ ಮಹಾನ್ ದೇವರು. ಅದಕ್ಕಾಗಿಯೇ ಹೇಳಿದ್ದು ತಾಯಿಯೇ ದೇವರೆಂದು.

ಯಾವ ಕವಿಯೂ ವರ್ಣಿಸಲಾಗದ, ಯಾವ ಚಿತ್ರಕಾರನು ಚಿತ್ರಿಸಲಾಗದ, ಯಾವ ಕತೆಗಾರನಿಗೂ ಬರೆಯಲಾಗದ, ಯಾರೂ ಊಹಿಸಲಾಗದ, ಯಾರೂ ಬಣ್ಣಿಸಲಾಗದ ವ್ಯಕ್ತಿತ್ವದ ರೂವಾರಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ.ಯಾರೇ ಏನೇ ಕಂಡು ಹಿಡಿದರೂ ಅವಳ ಎದೆಯ ಹಾಲಿಗಿಂತ ಅಮೃತವಿಲ್ಲ! ನಾ ಓದಿ ತಿಳಿದ ಭಾಷೆ ಬೇರೆ ಭಾವವೊಂದೇ ಇನ್ನೂ ಸಂಶೋಧಿಸಿ ಕಂಡು ಹಿಡಿಯಿರಿ ಅವಳು ಯಾರಿಗೂ ನಿಲುಕದ ಮಹಾಜ್ಞಾನಿಯವಳು.

ಒಂಬತ್ತು ತಿಂಗಳು ಹೊತ್ತು ನೋವಿನಲ್ಲಿ ಹೆತ್ತು ಸುಮಾರು ವರ್ಷಗಳ ಕಾಲ ಲಾಲನೆ ಪಾಲನೆ ಮಾಡಿ ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ ಮಾಡಿದ ತಾಯಿಯನ್ನು ಎಂದೆಂದಿಗೂ ತಿರಸ್ಕರಿಸದೆ ಉಸಿರಿರೋವರೆಗೂ ತಾಯಿಯೇ ಸೇವೆ ಮಾಡಿ ಅವಳ ಪ್ರೀತಿಗೆ ಪಾತ್ರರಾಗೋಣ. ಎಷ್ಟೋ ಜನ ಮಕ್ಕಳಿಗೆ ತಾಯಿ ಇರುವುದಿಲ್ಲ, ಎಷ್ಟೋ ಜನ ತಾಯಂದಿರಿಗೆ ಮಕ್ಕಳು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವೆಷ್ಟು ಪುಣ್ಯವಂತರು ಎಂಬುದನ್ನು ಯೋಚಿಸಬೇಕಾಗಿದೆ. ಭೂಮಿಯಲ್ಲಿರುವ ಎಲ್ಲಾ ಪ್ರೀತಿಯಲ್ಲಿ ಮೋಸವಿದೆ ಆದರೆ ತಾಯಿಯ ಪ್ರೀತಿಯಲ್ಲಿ ಮೋಸವಿಲ್ಲ. ಕರುಣೆ,

ಮಮತೆ,ನಂಬಿಕೆ,ವಾತ್ಸಲ್ಯ ಮೇಲಾಗಿ ಭಾವನೆ ಇದೆ. ಮುಕ್ಕೋಟಿ ದೇವರಿಗೂ ಮಿಗಿಲಾದವಳು ಮಹಾತಾಯಿ. ಎಷ್ಟೇ ಜನ್ಮ ಹುಟ್ಟಿ ಬಂದರು ತಾಯಿಯ ಋಣ ತೀರಿಸಲಾಗದು. ಜಗತ್ತಿನಲ್ಲಿ ತಾಯಿಯ ಮಡಿಲಿಗಿಂತ ಪವಿತ್ರ ಸ್ಥಳವಿಲ್ಲ. ತಾಯಿಯ ಕೈಗಳ ಸ್ಪರ್ಶಕ್ಕಿಂತ ಬೇರೆ ಸಂತೋಷವಿಲ್ಲ. ತಾಯಿಯನ್ನು ಪ್ರೀತಿಸೋಣ. ಪೂಜಿಸೋಣ. ತಾಯಿಯ ಪ್ರೀತಿಯನ್ನು ಬೇರೆಯವರಿಗೆ ಹೋಲಿಸುವುದು ಸೂರ್ಯನ ಮುಂದೆ ದೀಪವನ್ನು ಬೆಳಗಿಸಿದಂತೆ. ತಾಯಿಯ ಪ್ರೀತಿಗೆ ಆಕಾಶದಷ್ಟು ಮಿತಿಯುoಟೆ ? ತಾಯಿಯ ಕರ್ತವ್ಯಕ್ಕೆ ದೇವರೇ ಕೈಮುಗಿದಿದ್ದು ಗೊತ್ತೇ? ಎಲ್ಲಾ ಸಂಬಂಧಗಳಿಗೂ ಕೇಂದ್ರ ಬಿಂದು ತಾಯಿ. “ತಾಯಿ” ಎನ್ನುವ ಎರಡು ಅಕ್ಷರಕ್ಕೆ ಸಾಕ್ಷಿಯಾದವಳು. ತಾಯಿಯ ಬಗ್ಗೆ ಎಷ್ಟೇ ವರ್ಣನೆ ಮಾಡಿದರೂ ಸಾಲದು.

ಶ್ರೀ ಮುತ್ತು ಯ. ವಡ್ಡರ ಶಿಕ್ಷಕರು

(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿ)

ಬಾಗಲಕೋಟ 9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button