ಜಾನಪದ ಕಲಾವಿದೆ – ಶರಣಮ್ಮ ಪರಿ ಸಜ್ಜನ.

ಹೊನ್ನಕಿರಣಗಿ ಜೂನ್.14

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ಜಾನಪದ ಲೋಕಸಿರಿ ಪ್ರಶಸ್ತಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಿಂದ ಕಲಾವಿದರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಜಾನಪದ ಕಲಾವಿದೆ ಶ್ರೀಮತಿ ಶರಣಮ್ಮ ಪಿ ಸಜ್ಜನ ಅವರು ಹೆಸರಿಗೆ ತಕ್ಕಂತೆ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ, ಅದ್ಭುತ ಕಂಠಸಿರಿ ದೇಶಿ ಪರಂಪರೆಯ ಮೂಲ ಜಾನಪದ ಕಲಾವಿದೆ. ಇವರ ಧೈರ್ಯ, ಛಲ, ಸ್ವಾಭಿಮಾನ ಹಲವರಿಗೆ ಮಾದರಿ ಯಾಗಬಲ್ಲದು. ಸಂತಾನ ಭಾಗ್ಯವಿಲ್ಲದ ಇವರ ಆಧ್ಯಾತ್ಮಿಕ ಒಲವು ಊಹೆಗೆ ಮೀರಿದ್ದು. ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ದಿ.ಶ್ರೀ ಪ್ರಭು ಸಜ್ಜನ ರವರ ಧರ್ಮಪತ್ನಿಯಾದ ಶರಣಮ್ಮ ನವರು ಮೂಲತಃ ಅರಳಗುಂಡಗಿ ಗ್ರಾಮದ ಶ್ರೀ ಶರಣಪ್ಪ ಮತ್ತು ಸಂಗಮ್ಮ ಸಜ್ಜನ ರವರ 9 ಜನ ಮಕ್ಕಳಲ್ಲಿ 6 ನೇಯವರಾಗಿ 1947 ರಲ್ಲಿ ಜನಿಸಿದರು. ಬಾಲ್ಯದಿಂದಲೇ ಜನಪದ ಹಾಡು ಬಳುವಳಿಯಾಗಿ ಬಂದಿದೆ. ಅನಕ್ಷರಸ್ಥರಾಗಿದ್ದು ಕೃಷಿ ಕಾಯಕ ಮಾಡಿ ಕೊಂಡಿದ್ದು ಹೊಲದಲ್ಲಿ ಕೆಲಸ ಮಾಡುತ್ತಾ ಚಿಕ್ಕ ವಯಸ್ಸಿನಿಂದಲೇ ಭಜನೆ, ಕುಟ್ಟುವ ಪದ, ಬೀಸುವ ಪದ, ಎಣ್ಣೆ ಹಚ್ಚುವ ಪದ, ತತ್ವಪದ ಸಂಪ್ರದಾಯದ ಪದಗಳು ಹೀಗೆ ಹಲವಾರು ಹಾಡುಗಳನ್ನು ಹಿರಿಯರ ಮಾರ್ಗದರ್ಶನ ದಿಂದ, ಸ್ವಪ್ರೇರಿತರಾಗಿ ಜಾನಪದ ಕಲೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೊನ್ನಕಿರಣಗಿ ಗ್ರಾಮದಲ್ಲಿ ಅಕ್ಕಮಹಾದೇವಿ ಭಜನಾ ಮಂಡಳಿ ಇದ್ದು, ಸುಮಾರು 45 ವರ್ಷಗಳಿಂದ ಭಜನೆ ಹಾಡುಗಳ ಕಾರ್ಯಕ್ರಮಗಳನ್ನು ಸುತ್ತಲಿನ ಪ್ರದೇಶಗಳಲ್ಲಿ ಬೇರೆ ಬೇರೆ ನಗರಗಳಲ್ಲಿ ನೀಡುತ್ತಾ ಈ ಮಂಡಳಿಯಲ್ಲಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದಾರೆ. ಇವರು ಸಹೃದಯಿ ಸ್ನೇಹ ಬಳಗ ಕಲಬುರಗಿ, ವಿಶ್ವಜ್ಯೋತಿ ಪ್ರತಿಷ್ಠಾನ ಕಲಬುರಗಿ, ವಿಶ್ವ ಜನಸೇವಾ ಸಂಸ್ಥೆ ಚಿತ್ತಾಪೂರ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಸಗರ ನಾಡು ಸೇವಾ ಪ್ರತಿಷ್ಠಾನ ಸುರಪುರ, ಸ್ಪಂದನಾ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಮಂದೇವಾಲ, ಕನ್ನಡ ಸಂಸ್ಕ್ರತಿ ಇಲಾಖೆ ಬೆಂಗಳೂರು ಹಾಗೂ ಭಾರತ ಸರಕಾರದ ಕ್ಷೇತ್ರ ಪ್ರಚಾರಕ ನಿರ್ದೇಶನಾಲಯ ಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ವತಿಯಿಂದ ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ಪಡೆದ ಕಲಾವಿದರಾಗಿದ್ದಾರೆ.

ಹಲವಾರು ಸಾಹಿತ್ಯ ಸಂಭ್ರಮ, ಸಮ್ಮೇಳನ, ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. 2019 ರಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಇವರನ್ನು ರಾಜ್ಯೋತ್ಸವ ಗೌರವ ನೀಡಿ ಸನ್ಮಾನಿಸಿದೆ. ಇವರ ಜಾನಪದ ಕಲೆಯನ್ನ ಗುರುತಿಸಿ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಆಹೇರಿ ವತಿಯಿಂದ ಕೊಡ ಮಾಡುವ 2020 ನೇ ಸಾಲಿನ ಪ್ರತಿಷ್ಠಿತ ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯವರು 2021 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ಕೊಡ ಮಾಡುವ 2022 ನೇ ಸಾಲಿನ ಜಾನಪದ ಲೋಕಸಿರಿ ಪ್ರಶಸ್ತಿ ನೀಡಿ ಇವರ ಕಲೆಗೆ ಪ್ರೋತ್ಸಾಹ ನೀಡಿದೆ. ಹೀಗೆ ಹತ್ತು ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ಪಡೆದ ಇವರ ಜಾನಪದ ಕಲಾ ಸೇವೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ. ಸರಕಾರ ಕಲಾವಿದರಿಗೆ ನೀಡುವ ಮಾಶಾಸನ ಸೌಲಭ್ಯ ಬೇಗನೆ ಸಿಗುವಂತಾಗಲಿ. ವಯಸ್ಸು 75 ಆದರೂ ನಡುಗದ ಇವರ ಕಂಠಸಿರಿ ದಿಂದ ಹೊರ ಹೊಮ್ಮುವ ಹಾಡುಗಳು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ. ಇಂತಹ ಅಪರೂಪದ ಜಾನಪದದ ಸಂಸ್ಕೃತಿಯನ್ನು ಮುಂದಿನ ತಲೆಮಾರುಗಳಿಗೆ ಕೊಂಡ್ಯೊಯುತ್ತಿರುವ ಇವರ ಕಲಾ ಪ್ರೇಮಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು. ಇನ್ನು ಹೆಚ್ಚಿನ ಗೌರವ ಮತ್ತು ಸನ್ಮಾನಗಳು ದೊರೆಯಲಿ ಎಂದು ಶುಭ ಹಾರೈಸುತ್ತೇನೆ.

*****

ಪ್ರಕಾಶ ಅಂಗಡಿ ಕನ್ನಳ್ಳಿ ಮಾಜಿ ಸದಸ್ಯರು

ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು

ಮೊ. 9900863333

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button