ದೇಹದ ಆರೋಗ್ಯಕ್ಕೆ ಯೋಗವೊಂದೇ ಶಾಶ್ವತ ಮದ್ದು – ಸ್ವರೂಪ್ ಕೊಟ್ಟೂರು.
ಕೊಟ್ಟೂರು ಜೂನ್.24

ದೇಹದ ಆರೋಗ್ಯ ಸಮಸ್ಯೆ ಇದ್ದರೆ, ಓದಲು ಏಕಾಗ್ರತೆ ಬರದಿದ್ದರೆ, ಓದಿದ್ದು ಜ್ಞಾಪನದಲ್ಲಿ ಉಳಿಯದಿದ್ದರೆ. ಹೀಗೆ ದೇಹ, ಮನಸ್ಸು, ಬುದ್ಧಿಗೆ ಸಂಬಂಧಿಸಿದ ಯಾವುದೇ ತೊಂದರೆಗಳಿದ್ದರೆ ಅದಕ್ಕೆ ನಿರಂತರ ಯೋಗಭ್ಯಾಸ ವೊಂದೇ ಶಾಶ್ವತ ಮದ್ದು ಅಥವಾ ಪರಿಹಾರ ಎಂದು ಹವ್ಯಾಸಿ ಬರಹಗಾರ, ಯೋಗ ಸಾಧಕ ಸ್ವರೂಪ್ ಕೊಟ್ಟೂರು ಮಕ್ಕಳಿಗೆ ಕಿವಿ ಮಾತು ಹೇಳಿದರು. ಇವರು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪಟ್ಟಣದ ಸಮೀಪದ ಗುಂಡಿನಹೊಳೆಯ ಜ್ಞಾನ ಮಂಟಪ ಎಜುಕೇಷನಲ್ ಟ್ರಸ್ಟ್‌ನ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸುವ ಮುನ್ನ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಯೋಗದ ಮಹತ್ವ ಕುರಿತು ಮಾತನಾಡಿದರು. ಇಂದು ಅನುದಿನ ಎಲ್ಲಾ ವಯೋ ಮಾನದವರು ಒತ್ತಡದಲ್ಲಿ ಜೀವಿಸುತ್ತಿದ್ದೇವೆ. ಈ ನಡುವೆ ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ. ಎಲ್ಲಕಿಂತ ಮೊದಲು ದೇಹ ಮತ್ತು ಮನಸ್ಸು ಸ್ವಸ್ಥವಾಗಿರಬೇಕು. ಅದಕ್ಕಾಗಿ ದಿನವೂ ಯೋಗ, ಪ್ರಾಣಾಯಮ, ಧ್ಯಾನ ಮಾಡಬೇಕು.

ಇದನ್ನು ನಿಮ್ಮ ಜೀವನದ ಭಾಗವಾಗಿಸಿ ಕೊಂಡಿದ್ದೇ ಆದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಅಂದಹಾಗೆ ಯೋಗವು ಯಾವುದೇ ಒಂದು ಧರ್ಮ, ಜಾತಿಗೆ ಸೀಮತವಾಗಿದ್ದಲ್ಲ. ಇದೊಂದು ಆಧ್ಯಾತ್ಮಿಕ ಶಿಸ್ತು. ಹಾಗಾಗಿಯೇ ಜಗತ್ತಿನ ಹಲವು ರಾಷ್ಠ್ರಗಳಲ್ಲಿ ಯೋಗ ಇಂದು ಜನಪ್ರೀಯತೆ ಗಳಿಸಿ, ಅಂತರಾಷ್ಠ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಈ ಕಾರಣಕ್ಕೆ ಎಲ್ಲರೂ ದಿನನಿತ್ಯ ಯೋಗ ಮಾಡಿ ನಿರೋಗಿಗಳಾಗಿ ಎಂದರು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಜಿ. ಉಮೇಶ್ ಮಾತನಾಡಿ ದಿನನಿತ್ಯ ಯೋಗ ಮಾಡಿ, ಸಾತ್ವಿಕ ಆಹಾರ ಸೇವಿಸಿ. ಆಗ ನಿಮ್ಮ ದೇಹ ಗಟ್ಟಿ ಮುಟ್ಟಾಗುವುದಲ್ಲದೇ ಮನಸ್ಸು ಸದಾ ಪ್ರಶಾಂತವಾಗಿರುತ್ತದೆ. ಸಹಜವಾಗಿ ನಿಮ್ಮ ಶಿಕ್ಷಣ ಮತ್ತು ಬದುಕಿನಲ್ಲಿ ಏಳಿಗೆ ಕಾಣುತ್ತೀರಿ ಎಂದರು. ಈ ವೇಳೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಾಣಿ ನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಬಣವಿಕಲ್ಲು ಕೆ. ನಾಗರಾಜ್ ಸೇರಿದಂತೆ ಸಂಸ್ಥೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬ. ಸಾಲುಮನೆ. ಕೂಡ್ಲಿಗಿ