ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವದ ಪ್ರಯುಕ್ತ ರಥೋತ್ಸವ.
ಕಾನಾ ಹೊಸಹಳ್ಳಿ ಡಿಸೆಂಬರ್.17

ತಾಲೂಕಿನ ಹಾರಕಬಾವಿ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವ ಪ್ರಯುಕ್ತ ದೀಪೋತ್ಸವ ಹಾಗೂ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಚೌಡೇಶ್ವರಿ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ಸಲ್ಲಿಸಿದರು. ನಂತರ ರುದ್ರಾಭಿಷೇಕ, ಜಂಗಮಾರಾಧನೆ, ಪಲ್ಲಕ್ಕಿ ಉತ್ಸವ, ಪುರಾಣ ಮಂಗಲ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಹೂವು, ತಳಿರು ಹಾಗೂ ವಿವಿಧ ವಿನ್ಯಾಸದ ಬಟ್ಟೆಗಳಿಂದ ಸುಂದರವಾಗಿ ಅಲಂಕರಿಸಿದ್ದ ರಥಕ್ಕೆ ಶ್ರೀ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಿಯ ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯ ಘೋಷಣೆ ಹಾಕಿ. ಬಾಳೆಹಣ್ಣು, ಉತ್ತುತ್ತಿ, ಮಂಡಕ್ಕಿ ಎಸೆದು ಭಕ್ತಿ ಸಮರ್ಪಿಸಿದರು. ಈ ಜಾತ್ರೆಗೆ ಹೊಸಹಳ್ಳಿ, ಬಣವಿಕಲ್ಲು, ಚೌಡಾಪುರ ಸೇರಿದಂತೆ ಸುತ್ತ ಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ