“ಸೋಲಿನಿಂದ ಗೆಲುವಿನ ಕಡೆಗೆ ಸೋಲೇ ಗೆಲುವಿನ ಸೋಪಾನ”…..

ಸೋಲು ಗೆಲುವಿನ ಸೋಪಾನ ಈ ಬದುಕು ಬಹಳ ಸ್ಪರ್ಧಾತ್ಮಕವಾದದ್ದು ಇಲ್ಲಿ ಗೆಲ್ಲಲು ಸಾಕಷ್ಟು ಜನ ಪ್ರತಿನಿತ್ಯ ಹೋರಾಟ ಮಾಡುತ್ತಲೇ ಇರುತ್ತಾರೆ. ಆದರೆ ಗೆಲುವೆಂಬುದು ಅಷ್ಟು ಸುಲಭವಾಗಿ ಯಾರ ಕೈಗೂ ಸಿಗದೇ ತುಂಬಾ ಆಟವಾಡಿಸುತ್ತದೆ. ಗೆಲ್ಲಲೇಬೇಕೆಂಬ ಆಸೆ ಮತ್ತು ಸತತ ಪ್ರಯತ್ನ ಹಾಗೂ ಪ್ರಾಮಾಣಿಕವಾದ ಹೋರಾಟದಿಂದ ಗೆಲುವನ್ನು ಪಡೆಯಬಹುದು.

ಸೋಮಾರಿಗಳಿಗೆ ಆಲಸ್ಯ ವ್ಯಕ್ತಿಗಳಿಗೆ ಯಾವತ್ತಿಗೂ ಈ ಗೆಲುವು ಒಲಿಯುವುದಿಲ್ಲ.

ಪರೀಕ್ಷೆಗಳಲ್ಲಿ, ಸಂದರ್ಶನಗಳಲ್ಲಿ ಮತ್ತು ಉದ್ಯೋಗ ಹುಡುಗಾಟದಲ್ಲಿ ಸೋತ ಎಷ್ಟೋ ವ್ಯಕ್ತಿಗಳು ತಮ್ಮ ಬದುಕೆ ಮುಗಿದು ಹೋಯಿತು ಎಂಬಂತೆ ನಿರಾಶರಾಗುತ್ತಾರೆ. ಒಂದು ಸೋಲು ನಿಮಗೆ ಸಾಕಷ್ಟು ನೋವನ್ನು ಕೊಡಬಹುದು, ಆದರೆ ಅದೇ ಅಂತಿಮವಲ್ಲ! ಸೋಲು ಮತ್ತು ಗೆಲುವು ರಾತ್ರಿ ಹಗಲಿನ ಹಾಗೆ, ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರುತ್ತದೆ.

ಹಾಗೆಯೇ ಸೋತನೆಂದು ಕೊರಗದೆ ದೃತಿಗೆಡದೆ ಸೋಲನ್ನು ಒಂದು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ಪ್ರಯತ್ನಿಸಿದರೆ ಗೆಲವು ನಿಶ್ಚಿತ. ಈ ಪ್ರಪಂಚದಲ್ಲಿ ಯಾರೊಬ್ಬರು ಒಮ್ಮೆಲೇ ಗೆದ್ದಿಲ್ಲ! ಸೋತು ಗೆದ್ದವರೇ ಹೆಚ್ಚು. ಸೋಲೆoಬುದು ಅಲ್ಪವಿರಾಮ ಅಂತ ಭಾವಿಸಿ ಗೆಲುವಿನ ದಾರಿಯಲ್ಲಿ ಸಾಗಿ ಗೆಲವು ಸಿಕ್ಕೇ ಸಿಗುತ್ತದೆ.

ಒಂದು ಬಾರಿ ಸೋತರೆ ಅದು ಸೋಲಲ್ಲ. ಆ ಸೋಲಿನಿಂದ ಪಾಠ ಕಲಿಯದಿದ್ದರೆ ಅದು ನಿಜವಾದ ಸೋಲು. ಕತ್ತಲಿದ್ದಾಗಲೇ ಬೆಳಕಿನ ಮಹತ್ವ ಗೊತ್ತಾಗುವುದು. ಕೆಳಗೆ ಬಿದ್ದಾಗಲೇ ಮೇಲೇಳಲು ಛಲ ಬರುವುದು. ಸೋತಾಗಲೇ ಗೆಲುವಿನ ಮಹತ್ವದ ಅರಿವಾಗುವುದು. ಈ ಬದುಕಿನಲ್ಲಿ ಬದುಕಿನಲ್ಲಿ ಯಾವುದೇ ಕೆಲಸವನ್ನು ತೆಗೆದುಕೊಳ್ಳಿ ಮೊದಲನೇ ಪ್ರಯತ್ನದಲ್ಲಿಯೇ ಆ ಕೆಲಸ ಆಗಿಯೇ ತೀರುತ್ತದೆ ಎಂದು ಯಾರು ಎದೆತಟ್ಟಿ ಹೇಳುವಂತಿಲ್ಲ. ಇದರ ಅರ್ಥ ಇಷ್ಟೇ ಸಫಲತೆಗೆ ಬಹುಮುಖ ಪ್ರಯತ್ನ ಬಹು ಮುಖ್ಯ. ಹೀಗಾಗಿ ಒಂದು ಬಾರಿ ಸೋತರೆ ಅದು ಸೋಲಲ್ಲ. ಆ ಸೋಲಿನಿಂದ ಪಾಠ ಕಲಿಯದಿದ್ದರೆ ಅದು ನಿಜವಾದ ಸೋಲು.

ಬದುಕಿನಲ್ಲಿ ಸೋಲು, ಗೆಲುವು ಎರಡೂ ಅನಿವಾರ್ಯ; ಚಕ್ರದಂತೆ ಸುತ್ತುತ್ತಿರುತ್ತದೆ. ಸೋತವನ್ನು ಬೇಸರ ವ್ಯಕ್ತಪಡಿಸುವುದು, ಗೆದ್ದವನು ಹಿಗ್ಗುವುದು ಸರ್ವೇಸಾಮಾನ್ಯ. ಎಲ್ಲರ ಬದುಕಿನಲ್ಲಿಯೂ ಸೋಲೆಂಬುದು ಇದ್ದೇ ಇರುತ್ತದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿಯೂ ಸೋಲು ಗೆಲುವುಗಳು ಇರುತ್ತದೆ. ಮಕ್ಕಳಲ್ಲಿ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿರುತ್ತದೆ. ಆದರೆ ಅದೇ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಆ ಉತ್ಸಾಹ ಎಲ್ಲಿ ಹೋಗುತ್ತದೆ? ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ ಮತ್ತೆ ಗೆಲ್ಲುವುದನ್ನು ಬಿಟ್ಟು ಮತ್ತೇನನ್ನೂ ಚಿಂತಿಸುವುದಿಲ್ಲ. ಆದರೆ ದೊಡ್ಡವರು ಮಾತ್ರ ಬೇಗನೇ ನಿರಾಶರಾಗಿ ಬಿಡುತ್ತಾರೆ.

ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿಗಳೆಲ್ಲರೂ ಸೋಲನ್ನೇ ಕಾಣದವರೇನಲ್ಲ. ಆದರೆ ಅವರು ಸೋಲನ್ನು ಸ್ವೀಕರಿಸಿದ ರೀತಿ ಮಾತ್ರ ಉಳಿದವರಿಗಿಂತ ಭಿನ್ನ. ಬಹಳಷ್ಟು ಮಂದಿಗೆ ಸೋಲು ಎಂಬುದು ಅಂತ್ಯ. ನಿಜಕ್ಕೂ ಸೋಲು ಗೆಲುವಿನೆಡೆಗಿನ ಮೊದಲ ಮೆಟ್ಟಿಲು. ಸೋಲೇ ಗೆಲುವಿನ ಸೋಪಾನ. ಆದರೆ ಸೋಲನ್ನು ಗೆಲುವಿನ ಆರಂಭ ಎಂದುಕೊಳ್ಳುವ ಮಂದಿ ವಿರಳ. ಇದರಿಂದಾಗಿಯೇ ಯಶಸ್ಸು ಎಲ್ಲರಿಗೂ ದಕ್ಕದೆ ಸ್ವಲ್ಪವೇ ಜನರ ಪಾಲಾಗುತ್ತಿರುತ್ತದೆ.

ಚರಿತ್ರೆಯಲ್ಲಿ ಗೆದ್ದವನಿಗೆ “ಗೆದ್ದವನು ಎನ್ನುವ ಜಾಗವಿದೆ!” ಸೋತವನಿಗೂ ಕೂಡ ಇಂತವರೊಂದಿಗೆ ಸೆಣಸಾಡಿ “ಸೋತ ಎನ್ನುವ ಜಾಗವಿದೆ!” ಆದರೆ ನಿಂತುಕೊಂಡು ನೋಡುವವರಿಗೆ, ಆಡಿಕೊಂಡು ನಗುವವರಿಗೆ ಚರಿತ್ರೆಯಲ್ಲಿ ಕೂಡ ಜಾಗವಿಲ್ಲ. ನಮ್ಮ ಗೆಲುವಿನ ಪ್ರಯಾಣದಲ್ಲಿ ಹೊರಟು ಸೋತಾಗ ನಮ್ಮನ್ನು ನೋಡಿ ಆಡಿಕೊಳ್ಳುವವರು, ನಗುವವರು ಇದ್ದೇ ಇರುತ್ತಾರೆ. ಅಂಥವರ ಎದರು ನಾವು ಹೆಚ್ಚು ಮಾತನಾಡಲು ಹೋಗಬಾರದು. ಅಂಥವರಿಗೆ ನಮ್ಮ ಗೆಲುವೇ ಉತ್ತರವಾಗಬೇಕು. ಗೆಲುವಿಗಾಗಿ ಕಾಯುವ ತಾಳ್ಮೆ ನಮ್ಮದಾಗಬೇಕು. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳುವಂತೆ ‘ತಾಳ್ಮೆ ಕಹಿಯಾದರೂ ಅದು ನೀಡುವ ಪ್ರತಿಫಲ ಮಾತ್ರ ಸಿಹಿಯಾಗಿರುತ್ತದೆ.

‘ಕಲ್ಲುಗಳನ್ನೇ ಮೈಲಿಗಲ್ಲುಗಳನ್ನಾಗಿಸಿಕೊಳ್ಳಿ ಈ ಸಮಾಜ ಹೇಗೆ ಎಂದರೆ, ಒಬ್ಬ ಮನುಷ್ಯ ಕೆಳಗೆ ಬೀಳುತ್ತಾನೆ ಎಂದಿಟ್ಟುಕೊಳ್ಳಿ. ಜನ ಆಳಿಗೊಬ್ಬರಂತೆ ಕಲ್ಲು ಹೊಡೆಯುತ್ತಾರೆ. ಅಲ್ಲಿಯವರೆಗೂ ಸ್ನೇಹಿತರಾಗಿದ್ದವರೆಲ್ಲ ಅವನ ವಿರುದ್ಧ ತಿರುಗಿ ಬೀಳುತ್ತಾರೆ. ಇನ್ನು ಅವನಿಗೆ ಆಗದಿದ್ದವರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಹಿಂದೆ ಯಾವತ್ತೋ ಆದ ಘಟನೆ, ಆಡಿದ ಮಾತು, ಮಾಡಿದ ತಪ್ಪುಗಳನ್ನು ತಂದು ಎಷ್ಟು ಸಾಧ್ಯವಾಗುತ್ತದೋ, ಅಷ್ಟು ನೋಯಿಸಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದವರು, ಇನ್ನಷ್ಟು ಕುಸಿಯುತ್ತಾರೆ. ಕೆಲವರಿಗೆ ಅದರಿಂದ ಆಚೆ ಬರುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಆದರೆ, ಒಂದು ವಿಷಯ ನೆನಪಿರಲಿ. ಜೀವನ ಅಷ್ಟಕ್ಕೇ ಮುಗಿದು ಹೋಯಿತು ಎಂದರ್ಥವಲ್ಲ. ಅದರಾಚೆಗೂ ಬದುಕು ದೊಡ್ಡದಿದೆ. ಹೀಗಾಗಿ, ಎಷ್ಟೇ ನೋವಾದರೂ, ಅವಮಾನಗಳಾದರೂ ಎಲ್ಲವೂ ಮುಗಿಯಿತು ಎಂಬ ತೀರ್ಮಾನಕ್ಕೆ ಬರಬೇಡಿ. ಅದರ ಬದಲಿಗೆ ಪುಟಿದೇಳುವುದಕ್ಕೆ ಕಲಿಯಿರಿ. ಯಾರು ನಿಮ್ಮತ್ತ ಕಳ್ಳುಗಳನ್ನು ಎಸೆಯುತ್ತಾರೋ, ಆ ಕಲ್ಲುಗಳನ್ನೇ ಮೈಲಿಗಲ್ಲುಗಳನ್ನಾಗಿ ಮಾಡುವ ಹಂತಕ್ಕೆ ಬೆಳೆಯಬೇಕು. ಇದು ಸೇಡು ಎನ್ನುವುದಕ್ಕಿಂತ ನೀವೇನು? ನಿಮ್ಮ ಸಾಮರ್ಥ್ಯವೇನು? ಎಂಬುದನ್ನು ತೋರಿಸುವುದಕ್ಕೆ ಒಂದೊಳ್ಳೆಯ ಅವಕಾಶ. ಹೀಗಾಗಿ, ಕಲ್ಲು ಹೊಡೆದವರೆದುರು ಶರಣಾಗಬೇಡಿ. ತಲೆ ಎತ್ತಿ ನಿಲ್ಲಿ ಮತ್ತು ನಿಮ್ಮ ಸಾಮರ್ಥ್ಯವೇನು ಎಂಬುವುದನ್ನು ಜಗಜ್ಜಾಹೀರು ಮಾಡಿ.

ಹೀಗೆ ಗೆಲುವು ಸೋಲಿನಲ್ಲಿಯೇ ಇದೆ. ಸೋಲೆ ಆ ಗೆಲುವಿನ ಸೋಪಾನ. ಹೀಗಾಗಿ ಎಂತದ್ದೇ ಪರಿಸ್ಥಿತಿ ಬರಲಿ, ಸೋಲೆಂದು ಮನಸಲ್ಲಿ ಅಂದುಕೊಳ್ಳದೇ, ಸೋಲಿನಲ್ಲಿ ಅವನೆಂತ ಭಂಡ ಎಂಬುದು ನಮಗೆ ಪ್ರೇರಣೆಯಾಗಲಿ. ಸೋಲೇ ಗೆಲುವಿನ ಸೋಪಾನವಾಗಲಿ.

ಸೋಲೆ ಗೆಲುವಿನ ಸೋಪಾನ ಅಂತ ಹಿರಿಯರು ಹೇಳಿದ್ದು ಏಕೆ ಅಂತ ತಿಳಿಯಿತಲ್ಲ? ಗೆಲುವು ಸಿಗುವವರೆಗೂ ಛಲ ಬಿಡದೆ ಮುನ್ನುಗಿ, ಆಗ ಯಶಸ್ಸು ನಿಮ್ಮನ್ನು ಬೇಡವೆಂದರೂ ಬೆನ್ನಟ್ಟಿ ಬಂದೇ ಬರುತ್ತದೆ.

ಕು. ಜ್ಯೋತಿ ಆನಂದ ಚಂದುಕರ ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button