ಸಾಹಿತ್ಯ ಮತ್ತು ರಂಗಭೂಮಿ ಚಟುವಟಿಕೆಗಳಿಗೆ ಹುನಗುಂದ ನಗರದ ಹಿರಿಮೆ ಬಹುದೊಡ್ಡದು — ಡಾll ವಿಜಯಾನಂದ ಕಾಶಪ್ಪನವರ.
ಹುನಗುಂದ ಆಗಷ್ಟ.28





ಸಾಹಿತ್ಯ,ಕಲೆ,ಸಂಸ್ಕೃತಿ ಹಾಗೂ ರಂಗಭೂಮಿಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದ ಹಿರಿಮೆ ಹುನಗುಂದ ನಗರದ್ದಾಗಿದೆ.ಇಲ್ಲಿನ ಸಾಹಿತ್ಯ ಚಟುವಟಿಕೆಗಳು ಯಾವತ್ತೂ ಮೇಲ್ಮಟ್ಟದ್ದಾಗಿರುತ್ತವೆ.ಇಂತಹ ಚಟುವಟಿಕೆಗಳಿಗೆ ತಮ್ಮ ಸಹಕಾರ ಮತ್ತು ಪ್ರೋತ್ಸಾಹ ಇರುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಪುರಸಭೆ ಮಂಗಲಭವನದಲ್ಲಿ ಸಂಗಮ ಪ್ರತಿಷ್ಠಾನ, ಕನ್ನಡ ಲೇಖಕರ ಪರಿಷತ್ತು, ಸಾಹಿತ್ಯ ಸಮಾವೇಶ, ಸಾರಂಗಮಠ ಸಾಹಿತ್ಯ ಪ್ರತಿಷ್ಠಾನ ಹಾಗೂ ಎಸ್.ಆರ್.ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ ಇಲಕಲ್ಲ ಸಂಯುಕ್ತವಾಗಿ ಭಾನುವಾರ ಹಮ್ಮಿಕೊಂಡ ಸಂಗಮ ಸಾಹಿತ್ಯ ಸಂಭ್ರಮ ದಶಮಾನೋತ್ಸವ ಮತ್ತು ಎಸ್.ಆರ್.ಕೆ. ಜನ್ಮ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಳಕಲ್ಲ ಗುರುಮಹಾಂತ ಶ್ರೀಗಳು ಸಾನಿಧ್ಯ ವಹಿಸಿ ಮಾತನಡಿ ಹುನಗುಂದದ ಸಾಹಿತ್ಯ ಚಟುವಟಿಕೆ ಮತ್ತು ಸಾಹಿತಿಗಳ ಸಾಧನೆಯನ್ನು ಮೆಚ್ಚಿ ಮಾತನಾಡಿದರು.ಅಲ್ಲದೇ ಎಸ್.ಆರ್.ಕಾಶಪ್ಪನವರ ಜನಕಾಳಜಿಯ ವ್ಯಕ್ತಿತ್ವ ಯಾವತ್ತೂ ಮರೆಯಲಾಗದು ಎಂದರು.

ಕೂಡಲಸಂಗಮ ಬಸವಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ಹುನಗುಂದ ತಾಲೂಕಿನ ಸಾಹಿತ್ಯ ಬಳಗದ ಸಾಹಿತ್ಯಕ ಕೊಡುಗೆ ಅಪರಮಿತ.ಇಲ್ಲಿನ ಸಾಹಿತ್ಯ ಕಾರ್ಯಕ್ರಮಗಳು ನಾಡಿನಲ್ಲಿ ಖ್ಯಾತಿ ಪಡೆದಿವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚಿಂತಕ ಮಹೇಶ ತಿಪ್ಪಶೆಟ್ಟಿ ಮಾತನಾಡಿ, ಮಾನವನ ಜೀವನ ವಿಕಾಸದಲ್ಲಿ ಭಾಷೆಯ ಮಹತ್ವ ಹಿರಿದು. ಒಂದು ಜನಾಂಗದ ಶ್ರೇಷ್ಠತೆಗೆ ಭಾಷೆಯ ಕೊಡುಗೆ ಅಪಾರ. ಅಂತೆಯೆ ಕನ್ನಡದ ಸೇವೆಯಲ್ಲಿ ಇಲ್ಲಿನ ಸಾಹಿತಿಗಳು ಹಾಗೂ ಸಂಘಟಕರ ಸೇವೆ ಸ್ಮರಣೀಯ. ಕಳೆದ ನಾಲ್ಕು ದಶಕಗಳಿಂದ ಇಲ್ಲಿನ ನಡೆಯುವ ಕಾರ್ಯಕ್ರಮಗಳು ನಾಡಿಗೆ ಮಾದರಿ ಎಂದರು. ಎಸ್.ಆರ್.ಕೆ.ವ್ಯಕ್ತಿತ್ವದ ಬಗ್ಗೆ ವಕೀಲರಾದ ಮಹಾಂತೇಶ ಅವಾರಿ ಮಾತನಾಡಿದರು. ಹಿರಿಯ ವಕೀಲರಾದ ಕೆ.ಎಂ.ಸಾರAಗಮಠ ಹಾಗೂ ಹಿರಿಯ ಲೇಖಕ ಜಿ.ಬಿ.ಕಂಬಾಳಿಮಠ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಸ್.ಆರ್.ಕೆ.ನೆನಪಿನ ಹಿರಿಯ ಲೇಖಕ ಪ್ರಶಸ್ತಿಯನ್ನು ಹಿರಿಯ ಲೇಖಕ ಮಹೇಶ ತಿಪ್ಪಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ದಶಮಾನೋತ್ಸವ ನುಡಿಗೌರವ ಪ್ರಶಸ್ತಿ, ಸಂಗಮ ಪ್ರಶಸ್ತಿ ಮತ್ತು ವರ್ಷದ ಯುವ ಲೇಖಕ ಪ್ರಶಸ್ತಿ ಪಡೆದ ತಲಾ ಹತ್ತು ಜನರನ್ನು ಸತ್ಕರಿಸಲಾಯಿತು. ಎಂಟು ಜನ ಲೇಖಕರ ಹತ್ತು ಕೃತಿಗಳನ್ನು ಬಿಡಗಡೆ ಮಾಡಲಾಯಿತು. ವಿಜಯಕುಮಾರ ಕುಲಕರ್ಣಿ ಸ್ವಾಗತಿಸಿದರು.ಎಸ್ಕೆ ಕೊನೆಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿದ್ದಲಿಂಗಪ್ಪ ಬೀಳಗಿ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ