ದಿನಗೂಲಿ ನೌಕರರ ಬಾಕಿ ವ್ಯತ್ಯಾಸ ವೇತನ ಬಟವಡೆ ಮಾಡಲು ಒತ್ತಾಯ.
ವಿಜಯಪುರ ಜುಲೈ.7

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರ ಅಡಿ ನೇಮಕವಾದ ನೌಕರರು ಬಾಕಿ ವ್ಯತ್ಯಾಸದ ವೇತನವನ್ನು ಬಟವಡೆ ಮಾಡಬೆಕೆಂದು ಒತ್ತಾಯಿಸಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕದಡಿ ನೇಮಣೂಕಿಯಾದ ನೌಕರರ ಒಕ್ಕೂಟ ಹಾಗೂ ಸಿಐಟಿಯು ಸಂಯೋಜಿತದಿಂದ ಅಪರ್ ಜಿಲ್ಲಾಧಿಕಾರಿ ಮಹಾದೇವ ಮುರಗಿಯವರ ಮುಖಾಂತರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಬುರಾಣಪೂರ ಮಾತನಾಡಿ, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ-2012 ರಡಿ ನೇಮಕವಾದ ನೌಕರರಿಗೂ ಕೊಡಬೇಕೆಂದು ಆದೇಶವಿರುತ್ತದೆ. ಆದರೆ 06ನೇ ವೇತನ ಆಯೋಗದ ಸಮಯದಲ್ಲಿ ಕ್ಷೇಮಾಭಿವೃದ್ಧಿ ನೌಕರರಿಗೆ ಅಲ್ಲಗಳೆದಿದ್ದು, ಮತ್ತೆ ಸರ್ಕಾರಕ್ಕೆ ಎಲ್ಲಾ ಸಿಬ್ಬಂದಿಗಳು ಪದೇ ಪದೇ ತೊಂದರೆಕೊಟ್ಟು ಮನವಿ ಸಲ್ಲಿಸಿದಾಗ ದಿನಾಂಕ : 01-08-2018 ರಿಂದ ಜಾರಿಗೆ ಬರುವ ಹಾಗೆ 06ನೇ ವೇತನವನ್ನು ಬಟವಡೆ ಮಾಡಿರುತ್ತಾರೆ. ಸದ್ಯದಲ್ಲಿ ಉಲ್ಲೇಖ 03 ರ ಪ್ರಕಾರ ಸರ್ಕಾರಿ ನೌಕರರಿಗೆ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಟ್ಟಿರುತ್ತಾರೆ. ಈ ಆದೇಶದಲ್ಲಿ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕ್ಷೇಮಾಭಿವೃದ್ಧಿ ನೌಕರರಿಗೂ ಕೊಡಬೇಕಾಗಿತ್ತು ಆದರೆ ಕ್ಷೇಮಾಭಿವೃದ್ಧಿ ನೌಕರರಿಗೂ ಕೊಡಬೇಕೆಂದು ಉಲ್ಲೇಖಿಸದ ಕಾರಣ ಕ್ಷೇಮಾಭಿವೃದ್ಧಿ ನೌಕರರಿಗೆ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಡುತ್ತಿಲ್ಲ. ಹಾಗೂ ಉಲ್ಲೇಖ-02 ಪತ್ರದನ್ವಯ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಇವರು ದಿನಾಂಕ : 15-02-2013 ರಿಂದ ಬಾಕಿ ವ್ಯತ್ಯಾಸದ ವೇತನ ಬಟವಡೆ ಮಾಡಿದರೆ ಆರ್ಥಿಕ ಪರಿಣಾಮದ ಬಗ್ಗೆ ಮಾಹಿತಿ ಕೇಳಿರುತ್ತಾರೆ. ಉಲ್ಲೇಖ 2 ರ ರನ್ವಯ ಈಗಾಗಲೇ ಕಲಬುರ್ಗಿ, ರಾಯಚೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಾಕಷ್ಟು ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ದಿನಾಂಕ : 15-02-2013 ರಿಂದ 07-05-2014ರ ವರೆಗೆ ಬಾಕಿ ವ್ಯತ್ಯಾಸದ ವೇತನವನ್ನು ಪಡೆದಿರುತ್ತಾರೆ.ಸರ್ಕಾರಿ ಸೇವೆಯಲ್ಲಿರುವ ನೌಕರರ ಸಮನಾಗಿಯೇ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುತ್ತೇವೆ. ಆದರೂ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ಸೇವೆಯಲ್ಲಿದ್ದಾಗ ಯಾವುದೇ ಸಹಾಯ-ಸೌಲಭ್ಯ ಸಿಗದೇ ವಂಚಿತರಾಗಿರುತ್ತಾರೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಕೊಂಡಗೂಳಿ ಮಾತನಾಡಿ, ಅಧಿಕಾರಿಗಳು ವಹಿಸಿಕೊಟ್ಟ ಕೆಲಸವನ್ನು ಚಾಚೂ ತಪ್ಪದೇ ನಿಷ್ಠೆಯಿಂದ ಕೆಲಸ ನಿರ್ವಹಿಸಿ ಕೆಲವು ದಿನಗೂಲಿ ನೌಕರರು ಮರಗಿ ಮರಗಿ ನಿವೃತ್ತಿ / ಮರಣ ಹೊಂದಿರುತ್ತಾರೆ. ಈಗಲಾದರೂ ಮಾನ್ಯರು ಕರ್ನಾಟಕ ರಾಜ್ಯದ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರಿಗೆ ಹಾಲಿ ಮತ್ತು ನಿವೃತ್ತಿ/ಮರಣ ಹೊಂದಿದ ನೌಕರರ ಕುಟುಂಬಸ್ಥರಿಗೆ ದಿನಾಂಕ : 15-02-2013 ರಿಂದ 07-05-2014 ರ ವರೆಗೆ ಬಾಕಿ ವ್ಯತ್ಯಾಸದ ವೇತನವನ್ನು ಬಟವಡೆ ಮಾಡಲು ಹಾಗೂ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕ್ಷೇಮಾಭಿವೃದ್ಧಿ ನೌಕರರಿಗೂ ಕೊಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಎಮ್ ಕೆ ಕುಲಕರ್ಣಿ ರವಿ ಡಾಮನಕರ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು: ರಾಜಶೇಖರ್.ಸಿಂಧೆ.ಶಿರಾಗುರ