ಕಂದಗಲ್ಲ ಬಿಸಿಎಂ ವಸತಿ ನಿಲಯದ ಪರಿಸರ ಪ್ರೇಮಿ ಸಿಬ್ಬಂದಿ ಹೀರೆಅಮರೆಗೌಡರ.
ಕಂದಗಲ್ಲ ಜೂನ್.18

ಸರಕಾರಿ ಕೆಲಸ ದೇವರ ಕೆಲಸವೆಂದು ನಿಷ್ಠೆಯಿಂದ ಕೆಲಸ ಮಾಡುವ ಜೊತೆಗೆ ಪರಿಸರ ಸೇವೆ ಮಾಡುವ ಸರಕಾರಿ ನೌಕರ ಹುಚ್ಚಪ್ಪ ಎಚ್. ಹಿರೇಅಮರೇಗೌಡರ ಪರಿಸರ ಪ್ರೇಮ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಕಂದಗಲ್ಲ ಡಿ. ದೇವರಾಜ ಅರಸು ಸರಕಾರಿ ಹಿಂದುಳಿದ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹುಚ್ಚಪ್ಪ ಹಿರೇಅಮರೇಗೌಡ. ಪರಿಸರ ಸಂರಕ್ಷಣೆ ಮಾಡುತ್ತಿರುವುದು ಜನ ಮೆಚ್ಚುವಂತಹ ಕಾರ್ಯವಾಗಿದೆ, ಅಲ್ಲಿ ಇಲ್ಲಿ ಹುಡುಕಿ ಸಸಿಗಳನ್ನು ತಂದು ಅವುಗಳನ್ನು ನಾಟಿ ಮಾಡುವುದು ಸಸಿಗಳ ಪಾಲನೆ ಪೋಷಣೆಯೊಂದಿಗೆ ಗಿಡ ಮರಗಳನ್ನು ಬೆಳೆಸುವುದು ಅವರ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 1985 ರಲ್ಲಿ ಇಳಕಲ್ಲ ತಾಲೂಕು ಕಂದಗಲ್ಲ ಗ್ರಾಮದಲ್ಲಿ ಸ್ಥಾಪನೆಯಾದ ಮೊದಲ ಬಿ.ಸಿ.ಎಂ ವಸತಿ ನಿಲಯ ಇದಾಗಿದೆ. ವಸತಿ ನಿಲಯ ಬಾಡಿಗೆ ಮನೆಯಲ್ಲಿ ಆರಂಭವಾಗಿ 25 ವರ್ಷ ಕಳೆದ ನಂತರ 2008 ರಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸರಕಾರಿ ಪ್ರೌಢಶಾಲೆ ಹತ್ತಿರ ಸುಂದರ ಕಟ್ಟಡ ನಿರ್ಮಾಣ ಗೊಂಡಿತು. 2010 ನವೆಂಬರ್ ನಲ್ಲಿ ನೂತನ ಕಟ್ಟಡಕ್ಕೆ ವರ್ಗಾವಣೆಗೊಂಡ ಈ ಕಟ್ಟಡದಲ್ಲಿ 50 ವಿದ್ಯಾರ್ಥಿಗಳು ಇದ್ದಾರೆ. ಕಂದಗಲ್ಲ ಇಲಕಲ್ಲ ರಸ್ತೆಗೆ ಹೊಂದಿ ಕೊಂಡಿರುವ ವಸತಿ ನಿಲಯದ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸುವಲ್ಲಿ ಹುಚ್ಚಪ್ಪ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಸಸಿಗಳಿಗೆ ಜೋಡು ಕೊಡ ಹೊತ್ತು ನಿರುಣಿಸಿದ ಹುಚ್ಚಪ್ಪ ಮೊಳಕೆ ನಾಟದ ಕಡುಕಲ್ಲಿನಂತಹ ಬರಡು ಭೂಮಿಯಲ್ಲಿ ಕಷ್ಟ ಪಟ್ಟು ಗುಂಡಿ ತೋಡಿ ಸಸಿಗಳನ್ನು ನೆಟ್ಟಿದ್ದಾರೆ. ನೆಟ್ಟ ಸಸಿಗಳಿಗೆ ಕೊಳವೆ ಬಾವಿಯ ನೀರು ಸಾಲದಿದ್ದಾಗ ಬೇರೆ ಕಡೆಯಿಂದ ಜೋಡು ಕೊಡ ಹೊತ್ತು ನೀರು ತಂದು ಸಸಿಗಳನ್ನು ಪೋಷಿಸಿದ್ದಾರೆ. ವಸತಿ ನಿಲಯದ ಆವರಣದಲ್ಲಿ ತೆಂಗು, ನುಗ್ಗಿ, ಪಪ್ಪಾಯಿ , ಲಿಂಬೆ, ಬೇವು, ಕರಿಬೇವು ಗಿಡಗಳೊಂದಿಗೆ ಹೂಬಳ್ಳಿ ವಿವಿಧ ಹೂಗಳು ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳ ಅಡುಗೆಗೆ ಬೇಕಾದ ವಿವಿಧ ಬಗೆಯ ತರಕಾರಿಗಳನ್ನು ಸಹ ಬೆಳೆಸಿದ್ದಾರೆ ಹುಚ್ಚಪ್ಪ ಅವರ ಕಾರ್ಯಕ್ಕೆ ವಸತಿ ನಿಲಯದ ಸಿಬ್ಬಂದಿ ಬಿಡುವಿನ ವೇಳೆ ವಿದ್ಯಾರ್ಥಿಗಳು ಸಹ ಪರಿಸರ ಬೆಳೆಸಲು ಹಿರಿಯ ಅಮರೇಗೌಡರಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಇಲಾಖೆಯ ಮೇಲಾಧಿಕಾರಿಗಳು, ಮೇಲ್ವಿಚಾರಕರು ಸಹಕಾರ ನೀಡಿದ್ದಾರೆ. ನೀರಿನ ವ್ಯವಸ್ಥೆ:- ವಸತಿ ನಿಲಯದಲ್ಲಿ ಕೊಳವೆಬಾವಿ ಇದ್ದು ಆ ನೀರನ್ನು ಮರಗಳಿಗೆ ಬಿಡಲಾಗುತ್ತದೆ. ಜೊತೆಗೆ ಊಟದ ಪಾತ್ರೆಗಳ ತೊಳೆದು ನೀರು ಕೂಡ ಗಿಡಗಳಿಗೆ ಹೋಗುತ್ತದೆ. ಪ್ರತಿವಾರ ನಿಲಯದ ವಿದ್ಯಾರ್ಥಿಗಳಿಂದ ಶ್ರಮಧಾನ ಮಾಡುವ ಮೂಲಕ ಪರಿಸರ ಸ್ವಚ್ಛತೆ ಹಾಗೂ ಗಿಡಗಳಿಗೆ ನೀರುಣಿಸುವ ಕೆಲಸ ನಡೆಯುತ್ತಿದೆ. ವಸತಿ ನಿಲಯದ ಆವರಣದಲ್ಲಿ ಹಸಿರು ಬೆಳೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ. ಬೇಸಿಗೆಯಲ್ಲಿಯೂ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ನಿಲಯದ ಆವರಣ ಹಚ್ಚ ಹಸಿರುನಿಂದ ಕಂಗೊಳಿಸುತ್ತಿದೆ. ಪ್ರಾಣಿ-ಪಕ್ಷಿಗಳಿಗೆ ಪ್ರೀತಿಯ ಧಾಮವಾಗಿದೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆಯನ್ನು ಹಿರೇಅಮರೇಗೌಡರು ಮಾಡುತ್ತಿದ್ದಾರೆ . ತೆಂಗಿನ ಗಿಡಗಳಿಗೆ ಸೀಮಂತ ಕಾರ್ಯ:- ವಸತಿಗಳ ಆವರಣದಲ್ಲಿ ತೆಂಗಿನ ಗಿಡಗಳನ್ನು ಬೆಳೆಸಲಾಗಿದೆ ತೆಂಗಿನ ಗಿಡಗಳು ಪ್ರಥಮವಾಗಿ ಫಲ ಕೊಡುವ ಮುನ್ನ ಬಸರಿದ್ದ ಸ್ತ್ರೀಯರಿಗೆ ಸೀಮಂತ ಕಾರಣ ಮಾಡುವಂತೆ ಹಿರಿಯ ಅಮರೇಗೌಡರು ತೆಂಗಿನ ಗಿಡಗಳಿಗೆ ಸೀಮಂತ ಕಾರಣ ಮಾಡುತ್ತಿದ್ದಾರೆ ಗಿಡಗಳಿಗೆ ಹೊಸ ಸೀರೆ ಸುತ್ತಿ ಬಂಗಾರದ ಆಭರಣ ಧರಿಸಿ ಸ್ತ್ರೀಯರಿಗೆ ಸೀಮಂತ ಮಾಡುವ ಹಾಗೆ ಮುತ್ತೈದೆಯರಿಂದ ಸೀಮಂತಕಾರಣ ಮಾಡಿಸಿ ಸುಮಾರು 25 ಮುತ್ತೈದೆಯರಿಗೆ ಹುಡಿತುಂಬಿ ಹೋಳಿಗೆ ಊಟ ಮಾಡಿಸಿ ಸೀಮಂತ ಕಾರಣ ಮಾಡಿ ಪರಿಸರ ಪ್ರೇಮ ಮೆರೆದಿದ್ದಾರೆ. ಪರಿಸರ ಕಾಪಾಡಿ, ಕಾಡು ಬೆಳೆಸಿ ನಾಡು ಉಳಿಸಿ ಅನ್ನುತ್ತಾ ಕೇವಲ ಭಾಷಣ ಮಾಡಿ ಹೋಗೋ ಮಂದಿಗಿಂತ ಯಾವುದೇ ಫಲಾಪೇಕ್ಷೆ ಇಲ್ಲದೆ ಪರಿಸರ ಸೇವೆ ಮಾಡುತ್ತಿರುವ ಹುಚ್ಚಪ್ಪ ಹಿರೇಅಮರೇಗೌಡರು ನಿಜಕ್ಕೂ ಪರಿಸರ ಪ್ರೇಮಿ. ಜಿಲ್ಲಾಡಳಿತ ಪ್ರತಿವರ್ಷ ಆಚರಿಸುತ್ತಿರುವ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಉತ್ತಮ ಅಡುಗೆ ಸಹಾಯಕ ಮತ್ತು ಪರಿಸರ ಪ್ರೇಮಿ ಅಂತ ಪ್ರಶಸ್ತಿ ನೀಡಿ ಹಿರೇಅಮರೇಗೌಡರನ್ನು ಗೌರವಿಸುವಂತಾಗ ಬೇಕು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ ಇಲಕಲ್ಲ