ಅದ್ದೂರಿಯಾಗಿ ನಡೆದ ಕೋಡಿಕೊಪ್ಪದ – ಶ್ರೀ ವೀರಪ್ಪಜ್ಜನ ರಥೋತ್ಸವ.
ಕೋಡಿಕೊಪ್ಪ ಫೆ.08

ಗಜೇಂದ್ರಗಡ ತಾಲೂಕಿನ ನರೇಗಲ್ಲಿನ ಕೋಡಿಕೊಪ್ಪದ ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು ಎಂಬ ಸರ್ವಕಾಲಿಕ ಸತ್ಯ ಸಂದೇಶ ನೀಡಿದ ಹಠಯೋಗಿ ಶ್ರೀ ಹುಚ್ಚಿರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವದ ಈ ಸಂದರ್ಭದಲ್ಲಿ ಕೋಡಿಕೊಪ್ಪದ ಶ್ರೀ ಹಠಯೋಗಿ ಶ್ರೀ ವೀರಪ್ಪಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಜರುಗಿದವು. ಸಂಜೆ 5.30 ಕ್ಕೆ. ಸಹಸ್ರಾರು ಭಕ್ತರ ಮಧ್ಯೆ ಮಹಾ ರಥೋತ್ಸವವು ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ತೇರಿನ ಹಗ್ಗವು ಸಿದ್ವೇಕೊಪ್ಪ ದಿಂದ ಭಜನೆ, ಡೊಳ್ಳು, ಕಹಳೆ ಹಾಗೂವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿತು. ರಥದಕಳಸವು ಬಂದನಗೌಡ್ರ ಸಂಕನಗೌಡ್ರ ಮನೆಯಿಂದ ಮೆರವಣಿಗೆ ಮೂಲಕ ವೀರಪ್ಪಜ್ಜನ ಮಠವನ್ನು ತಲುಪಿತು. ನೆರೆದ ಭಕ್ತರ ಸಮೂಹ ಹಠಯೋಗಿ ವೀರಪ್ಪಜ್ಜನಿಗೆ ಜಯವಾಗಲಿ, ಹರ ಹರ ಮಹಾದೇವ ಎಂಬ ಜಯ ಘೋಷಣೆಗಳು ಮುಗಿಲು ಮುಟ್ಟುವಂತೆ ಕೇಳುತ್ತಿತ್ತು. ಸಕಲ ವಾದ್ಯ ಮೇಳದೊಂದಿಗೆ ತೇರು ಬೇವಿನ ಗಿಡದ ಪಾದಗಟ್ಟಿ ವರೆಗೆ ತಲುಪಿ ಮರಳಿ ಮೂಲ ಸ್ಥಳಕ್ಕೆ ಬಂದು ತಲುಪಿತು. ಜಾತ್ರೆಯಲ್ಲಿ ವಿವಿಧ ಭಾಗಗಳಿಂದ ಅಂದಾಜು 15 ಸಾವಿರಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಯಾವುದು ಹೌದು, ಅದು ಅಲ್ಲ. ಯಾವುದು ಅಲ್ಲ, ಅದು ಹೌದು’ ಎನ್ನುವ ಆತ್ಮಾನುಭಾವದ ಅಮೃತವಾಣಿ ಸಾರಿದ ನರೇಗಲ್‌ನ ಮಜರೆ ಕೋಡಿಕೊಪ್ಪ ಗ್ರಾಮದ ವೀರಪ್ಪಜ್ಜನ ರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ನಡುವೆ ಸಡಗರ ದಿಂದ ಜರುಗಿತು.ಶ್ರೀ ಮಠ ದಿಂದ ಪಾದಗಟ್ಟಿಯ ವರೆಗೆ ರಥ ಎಳೆದರು. ಮೆರವಣಿಗೆ ಉದ್ದಕ್ಕೂ ‘ಹಠಯೋಗಿ ವೀರಪ್ಪಜ್ಜಗೆ ಜೈ, ತ್ರಿಲೋಕ ಜ್ಞಾನಿ ಹುಚ್ಚರಪ್ಪಜ್ಜಗೆ ಜೈ…’ ಎಂದು ಜಯ ಘೋಷ ಹಾಕಿದರು. ರಥೋತ್ಸವದಲ್ಲಿ ಭಜನೆ, ಜಾಂಜ್ ಮೇಳ, ಡೊಳ್ಳು ಕುಣಿತ, ಕರಡಿ ಮಜಲು, ನಂದಿಕೋಲು ಗಮನ ಸೆಳೆಯಿತು. ಭಕ್ತರು ಉತ್ತುತ್ತಿ, ಬಾಳೆಹಣ್ಣು ಎಸೆದು ನಮಿಸಿದರು.ರಥವು ಸ್ವಸ್ಥಾನಕ್ಕೆ ಮರಳಿದಾಗ, ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು, ನೈವೇದ್ಯ ಅರ್ಪಿಸಿದರು ನರೇಗಲ್ ಹಾಗೂ ಕೋಡಿಕೊಪ್ಪ ಸುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಗೊಂಡಿತ್ತು. ಮನೆ, ರಸ್ತೆಗಳನ್ನು ರಂಗೋಲಿಯಿಂದ ಸಿಂಗರಿಸಲಾಗಿತ್ತು. ಈ ಸಮಯದಲ್ಲಿ ಗಜೇಂದ್ರಗಡ, ಗದಗ, ರೋಣ, ಗುಜಮಾಗಡಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ತೋಟಗಂಟಿ, ಡ.ಸ. ಹಡಗಲಿ, ಯರೆಬೇಲೇರಿ, ನಿಡಗುಂದಿ ಕೊಪ್ಪದ, ರೋಣ, ಕೊತಬಾಳ, ಅಣ್ಣಿಗೇರಿ, ಯಲಬುರ್ಗಾ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು, ಟ್ರ್ಯಾಕ್ಟರ್, ಎತ್ತಿನ ಬಂಡಿ ಮತ್ತು ಪಾದಯಾತ್ರೆ ಮೂಲಕ ಬಂದು ವೀರಪ್ಪಜ್ಜನ ದರ್ಶನ ಪಡೆದು, ಹರಕೆ ತೀರಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ