ಜೀವನದಲ್ಲಿ ಶಿಸ್ತು ಅಳವಡಿಸಿ ಕೊಳ್ಳಲು ಸಲಹೆ ನೀಡಿದ – ಅಕ್ಷಯ.ಐ. ಪಾಟೀಲ.
ನರೇಗಲ್ ಸ.22

ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಸದೃಢ ಆರೋಗ್ಯ ಹೊಂದಿ ಸಶಕ್ತ ರಾಷ್ಟ್ರ ನಿರ್ಮಾಣ ಮಾಡುವುದರ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸ ಬೇಕೆಂದು ಯುವ ಮುಖಂಡ ಅಕ್ಷಯ.ಐ. ಪಾಟೀಲ ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗಜೇಂದ್ರಗಡ ತಾಲ್ಲೂಕು ಪಂಚಾಯಿತಿ ಹಾಗೂ ನರೇಗಲ್‌ನ ಚೈತನ್ಯ ಕ್ರೀಡಾ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ಅನ್ನದಾನೇಶ್ವರ ಕಾಲೇಜಿನ ಆವರಣದಲ್ಲಿ ಹಮ್ಮಿ ಕೊಂಡಿದ್ದ ಗಜೇಂದ್ರಗಡ ತಾಲ್ಲೂಕು ಮಟ್ಟದ ಎರಡು ದಿನಗಳ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಯುವ ಜನತೆ ಮೊಬೈಲ್ ಗೀಳಿನಿಂದ ಹೊರಬಂದು ಕ್ರೀಡೆಗಳಲ್ಲಿ ಭಾಗವಹಿಸುವುದರ ಜೊತೆಗೆ ಉತ್ತಮ ಆರೋಗ್ಯ ಹೊಂದಬೇಕು. ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆಗಳು ಮಹತ್ವ ಪಡೆದು ಕೊಳ್ಳುತ್ತವೆ. ಆದ್ದರಿಂದ ಕ್ರೀಡೆಗಳಲ್ಲಿ ಭಾಗವಹಿಸುವವರ ಜೀವನ ಪರಿ ಪೂರ್ಣವಾಗಿರುತ್ತದೆ ಎಂದರು. ಕ್ರೀಡಾಪಟುಗಳಿಗೆ ಆಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಕ್ರೀಡೆಯಲ್ಲಿ ಶಿಸ್ತು ಮೈಗೂಡಿಸಿ ಕೊಳ್ಳುವುದು ಮುಖ್ಯ, ಹಾಗೆ ಮಾಡುವುರಿಂದ ಕ್ರೀಡೆಯಲ್ಲಿ ಯಶಸ್ಸಿನ ಜತೆ ಜೀವನದಲ್ಲಿ ಸಾಧನೆ ಮಾಡಿದಂತಾಗುತ್ತದೆ ಎಂದರು.

ಗಜೇಂದ್ರಗಡ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ. ಆಟದಲ್ಲಿ ಸೋಲು ಗೆಲುವು ಸಹಜ ಅವುಗಳಿಗೆ ಅಂಜದೇ ಪ್ರತಿಯೊಬ್ಬರು ಕ್ರೀಡಾ ಸ್ಪೂರ್ತಿ ಬೆಳೆಸಿಕೊಂಡು ಭಾಗವಹಿಸಬೇಕು. ಇಲ್ಲಿ ಗೆದ್ದಂತಹ ಕ್ರೀಡಾಪಟುಗಳು ಎಲ್ಲಾ ಕಡೆ ಗೆಲುವು ಸಾಧಿಸಿ ಕೀರ್ತಿ ತರಬೇಕು ಎಂದರು. ವಿವಿಧ ಕ್ರೀಡೆಯಲ್ಲಿ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಅವರಿಗೆ ಕ್ರೀಡಾ ತೀರ್ಪುಗಳಿಗೆ ಬದ್ದರಾಗಿ, ಕ್ರೀಡಾ ಮನೋಭಾವನೆ ಯಿಂದ ನಿಯಮಗಳನ್ನು ಪಾಲಿಸುವಂತೆ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ವೈ ಸಿ. ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಎಂ. ಬಿ. ಸಜ್ಜನರ, ಆಯೋಜಕ ನಿಂಗರಾಜ ಬೇವಿನಕಟ್ಟಿ, ಶಿವನಗೌಡ ಪಾಟೀಲ, ಮೈಲಾರಪ್ಪ ಚಳ್ಳಮರದ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಸಂಗಮೇಶ ಹೂಲಗೇರಿ ಇದ್ದರು. ನರೇಗಲ್ ಪಟ್ಟಣದ ಅನ್ನದಾನೇಶ್ವರ ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ ಗಜೇಂದ್ರಗಡ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅಕ್ಷಯ.ಐ ಪಾಟೀಲ ಚಾಲನೆ ನೀಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ತೋಟಗುಂಟಿ.ಗದಗ.