ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಸಭೆಯಲ್ಲಿ – ಸಚಿವ ರಿಂದ ಅಧಿಕಾರಿಗಳಿಗೆ ತರಾಟೆ.
ಮಾನ್ವಿ ಸ.19





ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಧಿಕಾರಿಗಳು ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದರಿಂದ ಸಚಿವರು ಗರಂ ಆಗಿ “ನಿಮಗೆ ಕೆಲಸದ ಮೇಲೆ ಜವಾಬ್ದಾರಿಯೇ ಇಲ್ಲ. ಜವಾಬ್ದಾರಿ ಇದ್ದಿದ್ದರೆ ಕಾಮಗಾರಿಗಳ ಸ್ಥಳದಲ್ಲಿ ನಿಂತು ಕೆಲಸ ಮಾಡಿಸುತ್ತಿದ್ದಿರಿ. ಜನರಿಗೆ ತೊಂದರೆ ಆಗದಂತೆ ಗುಣಮಟ್ಟ ಕಾಪಾಡಿ. ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಲೋಪ ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಸಚಿವರು ಸಿರವಾರ ಮಾನ್ವಿ ರಸ್ತೆ, ಹಿರೇಕೊಟ್ನೆಕಲ್ ಹಣಗಿ 11 ಕಿಮೀ ರಸ್ತೆ, ಪೋತ್ನಾಳ, ಉದ್ಬಾಳ್ ರಸ್ತೆ, ಬಲ್ಲಟಗಿ, ಗವಿಗಟ್, ಜಂಬಲದಿನ್ನಿ ರಸ್ತೆ, ಸಿರವಾರ ಹಾಗೂ ಕವಿತಾಳ ಕ್ರೀಡಾಂಗಣ ಸೇರಿದಂತೆ ಹಲವು ಕಾಮಗಾರಿಗಳ ಸ್ಥಿತಿಯನ್ನು ಅಧಿಕಾರಿಗಳಿಂದ ವಿವರವಾಗಿ ವಿಚಾರಿಸಿದರು.
ಸಭೆಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, “ಕಾಮಗಾರಿಗಳಲ್ಲಿ ವಿಳಂಬ ಹಾಗೂ ಅರೆಬರೆ ಮಾಹಿತಿ ನೀಡುವುದನ್ನು ನಿಲ್ಲಿಸಿ, ನೈಜ ಸ್ಥಿತಿಯನ್ನು ವರದಿ ಮಾಡಿ” ಎಂದು ಸ್ಪಷ್ಟ ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳ ಕುರಿತು ಸಚಿವರು ವಿಶೇಷವಾಗಿ ಒತ್ತಿ ಹೇಳಿದರು. “ಜನರಿಗೆ ತೊಂದರೆ ಆಗದಂತೆ ತಕ್ಷಣ ಸ್ಪಂದಿಸ ಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಲೋಪ ಬಾರದಂತೆ ಮುಂಜಾಗ್ರತೆ ವಹಿಸಿ” ಎಂದು ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ ಭೀಮರಾಯ, ಲೋಕೋಪಯೋಗಿ ಇಲಾಖೆಯ ಶಾಮಲಪ್ಪ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಖಲೀದ್ ಅಹ್ಮದ್, ಪಿ.ಆರ್.ಇ.ಡಿ ಜೆ.ಇ ವೆಂಕಟೇಶ, ಯೋಜನಾ ನಿರ್ದೇಶಕ ಶರಣಪ್ಪ, ಪರಶುರಾಮ ದೇವರಮನಿ, ಅರಣ್ಯ ಇಲಾಖೆಯ ಆರ್ಎಫ್ಓ ಪುರುಷೋತ್ತಮ ಹಾಗೂ ಕಾಂಗ್ರೆಸ್ ಮುಖಂಡ ಬಿ.ಕೆ ಅಮರೇಪ್ಪ ಸೇರಿ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ