ಪಾಳು ಬಾವಿಯಲ್ಲಿ ಬಿದ್ದ ಬೆಕ್ಕಿನ ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದ – ಅಗ್ನಿಶಾಮಕ ಸಿಬ್ಬಂದಿ, ಗ್ರಾಮಸ್ಥರು.
ಜಕ್ಕಲಿ ನ.19

ಗದಗ ಜಿಲ್ಲೆಯ ರೋಣ ತಾಲೂಕಿನ ಸಮೀಪದ ಜಕ್ಕಲಿ ಗ್ರಾಮದ ಮೆಣಸಗಿಯವರ ಓಣಿಯ ಮಹೇಶ ಮೇಟಿ ಇವರ ಮನೆ ಹತ್ತಿರದ ಪಾಳುಬಿದ್ದ ಬಾವಿಯಲ್ಲಿ ಕಳೆದ ಒಂದು ವಾರದಿಂದ ಸಾಕು ಬೆಕ್ಕೊಂದು ಬಿದ್ದು ಸಾವು ಬದುಕಿನ ಮಧ್ಯೆ ಮೇಲಕ್ಕೆ ಬಾರದೇ ಹೋರಾಟ ನಡೆಸುತ್ತಿತ್ತು. ಈ ವಿಷಯ ಗೊತ್ತಾಗಿ ರೋಣ ಅಗ್ನಿ ಶಾಮಕ ಠಾಣಾಧಿಕಾರಿಗೆ ಸ್ಥಳೀಯ ಪತ್ರಕರ್ತ ಸಂಗಮೇಶ ಮೆಣಸಗಿ ರವಿವಾರ ಫೋನ್ ಕರೆ ಮಾಡಿ ಬೆಕ್ಕಿನ ಪ್ರಾಣ ರಕ್ಷಿಸುವಂತೆ ಮನವಿ ಮಾಡಿ ಕರೆಸಿ ಕೊಂಡಿದ್ದಾರೆ. ತಡಮಾಡದೆ ರೋಣ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಗ್ಯಾನಪ್ಪ ಹನಮಪ್ಪ ಮಾಗಿಯವರು ತಮ್ಮ ಸಿಬ್ಬಂದಿ ಚಾಲಕ ಎಫ್.ಡಿ ನಂ. ೩೯೧೬ ಗೋವಿಂದ ಪೂಜಾರಿ ಯವರೊಂದಿಗೆ ಇವರು ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಸಹಕಾರ ದೊಂದಿಗೆ ಕಾರ್ಯಾಚರಣಿಗೆ ಮುಂದಾಗಿ ಬೆಕ್ಕನ್ನು ಬಾವಿಯಿಂದ ರಕ್ಷಿಸಿ ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದ್ದಿದಾರೆ.

ಗ್ರಾಮದ ನಿವಾಸಿ ಕಳಕಪ್ಪ ಹೊಗರಿ ಮುಂದಾಗಿ ಸುಮಾರು ೬೦ ಅಡಿ ಆಳದ ಈ ಬಾವಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಬಾವಿ ಒಳಗೆ ಇಳಿದು ಅಲ್ಲಲ್ಲಿಗೆ ಜಿಗಿಯುತ್ತಿದ್ದ ಬೆಕ್ಕು ಕೊನೆಗೆ ಪಡಕಿನಲ್ಲಿ ಸಿಲುಕಿದಾಗ ಅದಕ್ಕೆ ಗಟ್ಟಿಯಾಗಿ ಚೀಲ ಹಿಡಿದು ಒಳಕ್ಕೆ ತಳ್ಳಿಹಾಕಿ ಅದರ ಪ್ರಾಣ ಉಳಿಸಿದ್ದಾರೆ. ಓಣಿಯ ಜನ ಬೆಕ್ಕಿನ ಗೋಳಾಟ ನೋಡಿ ಆಹಾರವಾಗಿ ನಿತ್ಯ ಹಾಲು ಮತ್ತು ಅನ್ನವನ್ನು ಬಕೀಟ ಮೂಲಕ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಕ್ಕಿನ ರಕ್ಷಣಾ ಕಾರ್ಯದ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ತುಣುಕುಗಳನ್ನು ಪತ್ರಕರ್ತ ಸಂಗಮೇಶ ಮೆಣಸಗಿ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಪ್ರತಿ ನಿಧಿಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ಶನಿವಾರ ಸ್ಥಳೀಯ ನಿವಾಸಿ ಶೇಖರ ಯಾವಗಲ್ಲ ಇವರು ಪತ್ರಕರ್ತನಿಗೆ ವಿಷಯ ತಿಳಿಸಿದ್ದಾರೆ. ಆಗ ಸಂಗಮೇಶ ಅವರು ಗದಗ ಅರಣ್ಯಾಧಿಕಾರಿಗೆ ಫೋನ್ ಕರೆ ಮಾಡಿ ವಿನಂತಿಸಿದರು.

ಅವರ ಮಾರ್ಗದರ್ಶನದಂತೆ ತಕ್ಷಣ ಅಗ್ನಿಶಾಮಕ ಅಧಿಕಾರಿಗಳಿಗೆ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಕಳಕಪ್ಪ ಹೊಗರಿ ಪ್ರಾಣ ಪಣಕ್ಕಿಟ್ಟು ಸುರಕ್ಷಿತವಾಗಿ ಬೆಕ್ಕಿನ ಪ್ರಾಣ ರಕ್ಷಿಸಿದ ಸಾಹಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಬಾವಿಯಿಂದ ಮೇಲೆತ್ತಿದ ಬೆಕ್ಕು ಚೀಲದಿಂದ ಹೊರ ತೆಗೆದ ತಕ್ಷಣ ದಿಕ್ಕೆಟ್ಟು ಓಡಿ ಹೋಗಿದೆ. ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳವರೊಂದಿಗೆ ಗ್ರಾಮಸ್ಥರಾದ ಶೇಖರ ಯಾವಗಲ್ಲ, ವಿನಾಯಕ ಉಮತಾರ, ವಿನಾಯಕ ಅಥಣಿ, ರವಿ ಆದಿ, ಸಮರ್ಥ ಮೇಟಿ, ಪ್ರಭುರಾಜ ರೇಣುಕಮಠ, ಮುತ್ತುರಾಜ ಮೇಟಿ, ವಿಶ್ವನಾಥ ಬುಳ್ಳಾ ಶಿವಾನಂದ ಯಾವಗಲ್ಲ ಸೇರಿದಂತೆ ಇನ್ನು ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ