ಭಾವೈಕ್ಯತೆಯ ಭಕ್ತಿ ಭಾವದ ಯರೇಶೀಗಮ್ಮ – ದೇವಿ ಕಾರ್ತೀಕೋತ್ಸವ.
ರೋಣ ಡಿ.03
ಸವಡಿ ಗ್ರಾಮವು ತನ್ನದೇ ಆದ ಇತಿಹಾಸ, ಪರಂಪರೆಯನ್ನು ಬಚ್ಚಿಟ್ಟು ಕೊಂಡು ನೋಡುಗರ ಕಣ್ಣಿಗೆ ಅಚ್ಚರಿ ಉಂಟು ಮಾಡುತ್ತದೆ. ಇತಿಹಾಸ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಜೊತೆಗೆ ಉತ್ಸವಗಳ ವಿಶೇಷತೆಯನ್ನೂ ಹೊಂದಿದ್ದು, ಅದಕ್ಕೆ ಸಾಕ್ಷಿ ಯರೇಶೀಗಮ್ಮ ಕಾರ್ತೀಕೋತ್ಸವ, ಯರೇಶೀಗಮ್ಮ ದೇವಿ ಕಾರ್ತೀಕೋತ್ಸವ ಇವದ ಎರಡು ದಿನಗಳ ಹಿಂದಿನ ದಿನ ರೈತರು ಚಕ್ಕಡಿಗಳನ್ನು ಹೂಡಿ ಕೊಂಡು ಚೊಳಚಗುಡ್ಡಕ್ಕೆ ಹೋಗಿ ಬಾಳಿ ಕಂಬಗಳನ್ನು ಹೇರಿಕೊಂಡು, ನಾ ಮುಂದು ತಾ ಮುಂದು ಎಂದು ಎತ್ತುಗಳಿಗೆ ಹುರುಪು ತುಂಬಿ ಗಾಡಿ ಓಡಿಸಿ ಕೊಂಡು ಬರುತ್ತಾರೆ. ಮರುದಿನ ಬಾಳೆ ಕಂಬ ಹೊತ್ತ ಚಕ್ಕಡಿಗಳನ್ನು ಊರಿನ ತುಂಬೆಲ್ಲ ಮೆರವಣಿಗೆ ಮಾಡಿ ಸಂಗಮೇಶ್ವರ ಮಠಕ್ಕೆ ಬಂದು ಪೂಜೆ ಸಲ್ಲಿಸಿ, ಊರಿನ ಎಲ್ಲ ಗುಡಿಗಳಿಗೆ ಬಾಳ ಕಂಬ ಕಳುಹಿಸುತ್ತಾರೆ. ಯರೇಶೀಗಮ್ಮ ದೇವಿ ಕಾರ್ತೀಕೋತ್ಸ ವ ಹಿಂದಿನ ದಿನ ದೂರದ ಊರುಗಳಿಂದ ಬೀಗರು, ನೆಂಟರು ಸವಡಿ ಗ್ರಾಮದ ಕಡೆ ಪಯಣ ಬೆಳೆಸಿರುತ್ತಾರೆ. ಇತ್ತ ಗ್ರಾಮದ ಜನರು ರಾತ್ರಿ ತರಹೇವಾರಿ ಸಿಹಿ ಖಾರ ತಿನಿಸುಗಳನ್ನು ತಯಾರಿ ಮಾಡುತ್ತಾರೆ. ಹೆಣ್ಮಕ್ಕಳು ತಯಾರಿಸಿದ ಅಡುಗೆಯನ್ನು ದೊಡ್ಡ ಬುಟ್ಟಿಯಲ್ಲಿ ಇಟ್ಟು, ಬಿಳಿ ಬಟ್ಟೆಯಲ್ಲಿ ಬುತ್ತಿ ಕಟ್ಟಲಾಗುತ್ತದೆ.
ಹೆಣ್ಣುಮಕ್ಕಳು ಕಟ್ಟಿದ ಬುತ್ತಿಯನ್ನು ತಲೆಯ ಮೇಲೆ ಇಟ್ಟುಕೊಂಡು ಕೊಳ್ಳಾರಿ ಬಂಡಿ ಹತ್ತಿ ಗಿಲ್ ಗಿಲ್ ಅಂತ ಚಕ್ಕಡಿ, ಟ್ರಾಕ್ಟರ್ ಗಾಡಿಗಳ ಮೂಲಕ, ನಡೆದು ಕೊಂಡು ಬರುವಾಗ ಇಡೀ ಕಪ್ಪು ನೆಲದ ತುಂಬ ಹುಲುಸಾಗಿ ಬೆಳೆದ ಬೆಳೆ ದಾರಿಯಲ್ಲಿ ಕಾಣ ಸಿಗುತ್ತದೆ. ಈ ಕಾರ್ಶೀಕೋತ್ಸವಕ್ಕೆ ಸುತ್ತಲಿನ ಹತ್ತಾರು ಹಳ್ಳಿ ಜನರು ಬರುತ್ತಾರೆ.ಯರೇಶೀಗಮ್ಮಗ ಬಂದ ನಂತರ ಬುತ್ತಿ ಬಿಚ್ಚಿ ಗುಡಿಗೆ ಹೋಗಿ ಎಡಿ ಹಿಡಿದು, ದೀಪ ಬೆಳಗಿ ಬಂದ ಮೇಲೆ ಊಟ ಚಾಲು ಆಗುತ್ತದೆ. ಖಡಕ್ ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಹೆಸರಕಾಳಿನ ಪಲ್ಯ, ಶೇಂಗಾ ಚಟ್ಟಿ, ಗುರಳ್ ಚಟ್ಟಿ, ಮೊಸರು, ಮಸರ್ಗಾಯಿ, ಸಂಡಿಗೆ ಹಪ್ಪಳ, ಬಜಿ, ಪಾಪಡೆ, ಜೊತೆಗೆ ಕರ್ಚಿ ಕಡುಬು, ಹುನಗಡುಬು, ಶೇಂಗಾ ಹೋಳಿಗೆ. ಎಳ್ ಹೋಳಿಗೆ, ಎಚ್ಚೆಹೋಳಿಗೆ, ತುಪ್ಪ ಎಲ್ಲ ಬಡಿಸುತ್ತಾರೆ. ಊಟದ ನಂತರ ಎಲ್ಲರೂ ಜಾತ್ರೆ ಹೋಗುತ್ತಾರೆ. ಬಹಳ ದಿನಗಳಿಂದ ನೋಡದ ಸ್ನೇಹಿತರನ್ನು ಭೇಟಿ ಆಗಿ, ಖುಷಿಯಿಂದ ಮಾತನಾಡುತ್ತಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಎಸ್.ವಿ ಸಂಕನಗೌಡ್ರ ರೋಣ