ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಮಾನತೆ ಸಾರುವ ವಿಶೇಷ ಲೇಖನ, ಪ್ರವಾದಿ ಪೈಗಂಬರರ ದೃಷ್ಟಿಯಲ್ಲಿ ಮುಸಲ್ಮಾನರೆಂದರೆ…..

ಡಿ.ಶಬ್ರಿನಾ ಮಹಮದ್ ಅಲಿ, ಕವಯಿತ್ರಿ, ಚಳ್ಳಕೆರೆ ತಾ, ಚಿತ್ರದುರ್ಗ ಜಿಲ್ಲೆ,

ಪ್ರವಾದಿ ಹೇಳುತ್ತಾರೆ ನೆರೆಮನೆಯಲ್ಲಿ ಹಸಿದವರಿದ್ದರೆ ತಾವೊಬ್ಬರೆ ಹೊಟ್ಟೆ ತುಂಬಾ ತಿಂದು ತೇಗುವವರು ಮುಸಲ್ಮಾನರಲ್ಲ; ನೆರೆಮನೆಯವರ ಹಸಿವಿಗೆ ತನ್ನ ಪಾಲಿನ ಅನ್ನವನು ಹಂಚಿಕೊಂಡು ತಿನ್ನುವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ…ವ್ಯಾಪಾರದಲ್ಲಿ ಸುಳ್ಳು ಹೇಳಿ ಗ್ರಾಹಕರಿಗೆ ವಂಚಿಸಿಹಣ, ಅಂತಸ್ತು ಗಳಿಸುವವರು ಮುಸಲ್ಮಾನರಲ್ಲ! ವಸ್ತುವಿಗೆ ತಕ್ಕ ಮೌಲ್ಯ ನಿಗದಿಪಡಿಸಿ ನಿಯ್ಯತ್ತಿನಿಂದ ವ್ಯವಹರಿಸುವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ ಜೂಜು ಮದ್ಯಪಾನ, ಧೂಮಪಾನಕ್ಕೆ ದಾಸರಾಗಿ ತನ್ನ ನಂಬಿದವರನು ಬೀದಿಪಾಲು ಮಾಡುವವರು ಮುಸಲ್ಮಾನರಲ್ಲ!ಮನುಷ್ಯನನ್ನ ಕೀಳಾಗಿಸುವ ಅದ್ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತನ್ನ ನಂಬಿದವರ ಜೊತೆಗೂಡಿ ಗೌರವಯುತವಾಗಿ ಬಾಳುವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ ಬಂಧು-ಬಳಗ ನೆರೆಹೊರೆಯವರ ಏಳ್ಗೆ ನೋಡಿ ಮತ್ಸರ ಪಡುವವರು ಮುಸಲ್ಮಾನರಲ್ಲ; ಬೆಂಕಿಯು ಕಟ್ಟಿಗೆಯನು ನುಂಗುವಂತೆ ಅಸೂಯೆ ಒಳಿತುಗಳನ್ನ ನುಂಗುತ್ತದೆ ಎಂಬುದನ್ನರಿತು ಪರರ ಏಳ್ಗೆಯನು ಸಹಿಸಿ ಸಂತಸದಿ ಮುನ್ನಡೆಯುವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ..ಅನ್ಯಾಯವನ್ನು ನ್ಯಾಯವೆಂದು ಅಸತ್ಯವನ್ನು ಸತ್ಯವೆಂದು ಹೇಳುವವರು ಮುಸಲ್ಮಾನರಲ್ಲ; ಕಟಕಟೆಯಲಿ ಅಪರಾಧಿಯಾಗಿ ನಿಂತವರು ತಮ್ಮ ಆಪ್ತರಾಗಿದ್ದರೂ, ಕರುಳ ಸಂಬಂಧಿಕರಾಗಿದ್ದರೂ ಸತ್ಯ ನುಡಿದು ನ್ಯಾಯ ಎತ್ತಿ ಹಿಡಿವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ ಮಹಿಳೆ ಅಶಕ್ತಳು ಮಹಿಳೆ ಅಸಮಾನಳು ಮಹಿಳೆ ಪುರುಷನ ದಾಸಿ ಎನ್ನುವವರು ಮುಸಲ್ಮಾನರಲ್ಲ; ಅವಳಿಗೆ ಅವಳದೇಯಾದ ಶಿಕ್ಷಣದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು,ಆಸ್ತಿ ಹಕ್ಕು ನೀಡಿ ಅವಳಿಚ್ಛೆಯಂತೆ ಜೀವಿಸಲು ಅನುವು ಮಾಡಿ ಕೊಡುವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ ತನ್ನ ಕೈಕೆಳಗೆ ಕೆಲಸ ಮಾಡುವವರಲ್ಲಿ ಸಹಾನುಭೂತಿ ಇಲ್ಲದೆ ಅನವರತ ದುಡಿಸಿ ಕೊಳ್ಳುವವರು ಮುಸಲ್ಮಾನರಲ್ಲ; ಶ್ರಮಿಕರ ಬೆವರು ಭೂಮಿಗೆ ಬೀಳುವ ಮುನ್ನ ಅವರ ದುಡಿಮೆಯ ಗಳಿಕೆಯನು ಕೊಟ್ಟು ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸುವವರೆ ನಿಜವಾದ ಮುಸಲ್ಮಾನರು!

ಪ್ರವಾದಿ ಹೇಳುತ್ತಾರೆ ಸ್ವಾರ್ಥ ಮೋಹ, ಮದ ಲೋಭ, ಕ್ರೋಧಗಳನು ತಮ್ಮವಾಗಿಸಿಕೊಂಡವರು ಮುಸಲ್ಮಾನರಲ್ಲ; ಮನದಲಿ ಮಮತೆ ಶಾಂತಿ, ಕರುಣೆ, ದಯೆ ತುಂಬಿಕೊಂಡು ನಾಳೆ ಪ್ರಳಯವಾಗುತ್ತದೆ ಎಂಬ ಅರಿವಿದ್ದರೂ ಇಂದು ಗಿಡ ನೆಟ್ಟು ಮನುಕುಲಕೆ ಒಳಿತು ಬಯಸುವವರೆ ನಿಜವಾದ ಮುಸಲ್ಮಾರು..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button