ವೆಂಕಟೇಶ ದೇವಾಲಯಕ್ಕೆ ಶ್ರೀ ಸತ್ಯಾತ್ಮತೀರ್ಥ ಗುರುಗಳು – ಸಂದೇಶ ನೀಡಿದರು.

ಇಲಕಲ್ಲ ಡಿ.28

“ಪಶುಗಳಂತೆ ಬಾಳದೇ ಮನುಷ್ಯ ಧರ್ಮವನ್ನು ಅರಿತು ಬಾಳುವುದೇ ಶ್ರೇಷ್ಠ ಧರ್ಮ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತಿಳಿಸಿದಂತೆ ಅಸುರಿ ಗುಣಗಳನ್ನು ತ್ಯಜಿಸಿ ದೈವೀ ಗುಣಗಳನ್ನು ಸ್ವೀಕರಿಸಬೇಕು. ನಮ್ಮ ಉತ್ತಮ ಗುಣಗಳು ನಮ್ಮ ಸಂಪತ್ತುಗಳಾಗಬೇಕು. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ನಮ್ಮ ಅಂತರಂಗವನ್ನು ಶುದ್ಧಗೊಳಿಸಿ ಕೊಳ್ಳುವ ಅವಶ್ಯಕತೆ ಇದೆ.”

ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು. ಇಳಕಲ್ ಬ್ರಾಹ್ಮಣ ಸಮಾಜ, ಬಾಗಲಕೋಟೆಯ ವಿಶ್ವಮಾಧ್ವ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ಗೀತಾ ಅಭಿಯಾನ ಸಮರ್ಪಣಾ ಸಮಾರಂಭದಲ್ಲಿ ಗುರುಗಳು ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಸಂಯೋಜಕರಾದ ಬಂಡು ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಳಕಲ್ ಬ್ರಾಹ್ಮಣ ಸಮಾಜವು ಆಯೋಜಿಸಿದ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ಸಭೆಗೆ ತಿಳಿಸಿದರು. ಡಾ, ಸುಶೀಲ ಸು. ಕಾಖಂಡಕಿ, ಹಾಗೂ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪಾಂಡುರಂಗ ಕುಲಕರ್ಣಿ ಅವರು ಗುರುಗಳಿಗೆ ಪಾದಪೂಜೆ ಸಲ್ಲಿಸಿ ಅಭಿಯಾನ ಸಮರ್ಪಣಾ ಸಮಾರಂಭವನ್ನು ನೆರವೇರಿಸಿದರು.

ಹಿರಿಯ ಅರ್ಚಕರಾದ ನಾರಾಯಣಾಚಾರ್ಯ ಪೂಜಾರ, ಹಾಗೂ ಪ್ರವಚನ ಕಾರ್ಯಕ್ರಮಗಳ ಪ್ರಾಯೋಜಕರಾದ ಡಾ, ಸುಶೀಲ ಕಾಖಂಡಕಿ, ಡಾ, ಅಭಿಜಿತ್ ಗುರುರಾಜ ಕಾಖಂಡಕಿ, ಪ್ರೊ. ರಮೇಶ ಕೆ. ಕುಲಕರ್ಣಿ, ಭಾಸ್ಕರ ಪಾಟೀಲ, ಅಶೋಕ ಗೊಂಬಿ ಅವರನ್ನು ಗುರುಗಳು ಶೇಷವಸ್ತ್ರ ಹಾಕಿ ಗೌರವಿಸಿದರು.

ಬಾಗಲಕೋಟೆಯ ವಿಶ್ವಮಾಧ್ವ ಪರಿಷತ್‌ನಿಂದ ಪಂ. ರಘೂತ್ತಮಾಚಾರ್ಯ ಹಾಗೂ ಪಂ. ಬಿಂಧುಮಾಧವಾಚಾರ್ಯ ನಾಗಸಂಪಿಗಿ ಸಹೋದರರು ಆಗಮಿಸಿದ್ದರು. ಗುರುಗಳ ಆಗಮನವನ್ನು ನಿರೀಕ್ಷಿಸುತ್ತಾ ಭಕ್ತರು ಸುಮಾರು ಮೂರೂವರೆ ಗಂಟೆಗಳ ಕಾಲ ದೇವಸ್ಥಾನದಲ್ಲಿದ್ದರು. ಹನುಮಸಾಗರ, ಕುಷ್ಟಗಿ ಮುಂತಾದ ಊರುಗಳಿಂದ ಭಕ್ತರು ಆಗಮಿಸಿದ್ದರು. ಉತ್ತರಾದಿಮಠ ಸಂಸ್ಥಾನದ ಪ್ರಸ್ತುತ ದಿವಾನರಾದ ಶಶಿ ಆಚಾರ್ಯರು ಸಂಯೋಜಕರಿಗೆ ಕಾರ್ಯಕ್ರಮದ ಮಾರ್ಗ ದರ್ಶಕರಾಗಿದ್ದರು. ಸಮಾಜದ ಪದಾಧಿಕಾರಿಗಳಾದ ವಿಜಯ ಕಾರ್ಕಳ, ಕಾಶೀನಾಥ ದೇಶಪಾಂಡೆ, ಗಿರಿಧರ ದೇಸಾಯಿ ಮುಂತಾದವರು ಸಮಾರಂಭದ ಉಸ್ತುವಾರಿಯನ್ನು ನಿರ್ವಹಿಸಿದರು.

ಸಮಕಾಲೀನ ಪೀಠಾಧಿಪತಿಗಳಲ್ಲಿ ವಿಶಿಷ್ಟ ಸ್ಥಾನದಲ್ಲಿರುವ ಶ್ರೀ ಸತ್ಯಾತ್ಮತೀರ್ಥರು ಅಭಿನವ ರಘೂತ್ತಮತೀರ್ಥ ರೆಂದು ಪ್ರಸಿದ್ಧರಾಗಿದ್ದಾರೆ. ಅವರು ನೀಡುವ ವಿದ್ವತ್ಪೂರ್ಣ ಅನುಗ್ರಹ ಸಂದೇಶಗಳಿಗಾಗಿ ಜನರು ದಾರಿ ಕಾಯುತ್ತಾರೆ. ವರ್ಷಗಳಿಂದ ಗುರುಗಳ ಆಗಮನವನ್ನು ನಿರೀಕ್ಷಿಸುತ್ತಿದ್ದ ಸ್ಥಳೀಯ ಭಕ್ತರ ಹರ್ಷವು ಗುರುಗಳ ಆಗಮನ ದಿಂದ ಮುಗಿಲು ಮುಟ್ಟಿತ್ತು. ದೇವಾಲಯದಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button