ನಿಜವಾದ ವಿಶ್ವ ಮಾನವವರಿರುವುದು ಸ್ಮಶಾನದಲ್ಲಿ – ಎಸ್.ಎಚ್ ಶಫಿಉಲ್ಲಾ ಅಭಿಮತ.

ಹಿರಿಯೂರು ಡಿ.31

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಹಾಗೂ ಕುವೆಂಪು ಗೆಳೆಯರ ಬಳಗ ಹಿರಿಯೂರು ಇವರ ವತಿಯಿಂದ ತಡರಾತ್ರಿ ಸ್ಮಶಾನದಲ್ಲಿ ವಿಶ್ವ ಮಾನವ ದಿನಾಚರಣೆ ಸರಳವಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಯಾವುದೇ ಭೇದ ಭಾವ ಹಮ್ಮುಬಿಮ್ಮು ಅಂತಸ್ತು ಅಸೂಯೆ ಮುಂತಾದ ಸಂಕುಚಿತ ಭಾವಗಳಿಲ್ಲದ ನಿಜವಾದ ವಿಶ್ವ ಮಾನವರಿರುವ ಜಾಗ ಸ್ಮಶಾನ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಕುವೆಂಪು ಗೆಳೆಯರ ಬಳಗದ ಅಧ್ಯಕ್ಷರಾದ ಎಸ್.ಎಚ್ ಶಫಿಉಲ್ಲಾ ಅಭಿಪ್ರಾಯ ಪಟ್ಟರು. ನಗರದ ನಂಜಯ್ಯನ ಕೊಟ್ಟಿಗೆ ಸ್ಮಶಾನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಕುವೆಂಪು ಗೆಳೆಯರ ಬಳಗ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ಕುವೆಂಪು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಸ್ಮಶಾನ ಎಂದರೆ ಜನಗಳಿಗೆ ಭಯ ಭೀತಿಯನ್ನು ಉಂಟು ಮಾಡುವ ಜಾಗ ಭೂತ ಪ್ರೇತಗಳಿರುವ ಸ್ಥಳವೆಂಬ ತಪ್ಪು ಕಲ್ಪನೆಯಿದೆ.

ಕುವೆಂಪು ಅವರು ಸ್ಮಶಾನ ಮತ್ತಿತರ ತಪ್ಪು ಕಲ್ಪನೆಗಳ ವಿರುದ್ಧ ಅನೇಕ ವೈಚಾರಿಕ ಬರಹಗಳನ್ನು ಬರೆದು ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಂತಹ ಒಂದು ವೈಜ್ಞಾನಿಕ ಸಂದೇಶವನ್ನು ಸಾರಲು ಕುವೆಂಪು ಅವರ ತತ್ವ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಕೊಳ್ಳಲು ನಾವೆಲ್ಲ ಸೇರಿ ಇಂದು ರಾತ್ರಿ ಈ ಸ್ಮಶಾನದಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಬದುಕಿದ್ದಾಗ ಮಾನವ ಸಂಕುಚಿತ ಭಾವನೆಗಳ ಕಂದಕಗಳನ್ನು ನಿರ್ಮಿಸಿ ಕೊಂಡು ನಾನು ನನ್ನದು ಜಾತಿ ಮತಗಳಲ್ಲದೆ ಮತ್ತಿತರ ಸಂಕುಚಿತ ಭಾವಗಳಲ್ಲಿ ಮನುಷ್ಯತ್ವವನ್ನೇ ಮರೆತು ಬಾಳುತ್ತಾನೆ. ಇದು ತಾತ್ಕಾಲಿಕ ವಾದುದಷ್ಟೇ, ಕೊನೆಗೆ ಮನುಷ್ಯ ಎಲ್ಲವನ್ನು ಬಿಟ್ಟು ಸಾಯ ಬೇಕಾಗುತ್ತದೆ. ಸತ್ತಾಗ ಮಣ್ಣನ್ನೇ ಹಾಸಿ ಹೊದ್ದು ಸ್ಮಶಾನದಲ್ಲಿ ಮಲಗುತ್ತಾರೆ, ಆಗ ಎಲ್ಲರೂ ಒಂದೇ. ಈ ಸತ್ಯ ಮನುಷ್ಯನಿಗೆ ಅರಿವಾಗಲು ಸ್ಮಶಾನಕ್ಕೆ ಬರ ಬೇಕಾಗುತ್ತದೆ.

ಹಾಗಾಗಿ ಈ ಸತ್ಯವನ್ನು ನಮ್ಮ ಕ್ರಿಯಾಶೀಲ ಸಮಾಜಕ್ಕೆ ಅರ್ಥೈಸಲು ಸ್ಮಶಾನದಲ್ಲಿ ವಿಶ್ವ ಮಾನವ ದಿನಾಚರಣೆಯ ಆಚರಿಸುವ ಮೂಲಕ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ತಮ್ಮ ಮಾತಿನ ಕೊನೆಯಲ್ಲಿ ನಿಜವಾದ ವಿಶ್ವ ಮಾನವರು ಎಂಬ ತಮ್ಮ ಸ್ವರಚಿತ ಕವನವನ್ನು ವಾಚಿಸಿದರು. ಉಪನ್ಯಾಸಕ ಶಿವಾನಂದ್ ಬಂಡೆಮೇಗಳಹಳ್ಳಿ ಮಾತನಾಡಿ ಕುವೆಂಪು ಅವರ ಕಾವ್ಯಗಳಲ್ಲಿನ ಪಾತ್ರಗಳ ಮೂಲಕ ಹೇಗೆ ವೈಜ್ಞಾನಿಕ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ ಸಮಾಜದ ಅಸಮಾನತೆಯನ್ನು ವಿರೋಧಿಸುವ ಧ್ವನಿಯಾಗಿದ್ದಾರೆ ಎಂಬುದನ್ನು ತಿಳಿಸಿದರು. ಹಾಗೆ ಕನ್ನಡದ ಅಭಿಮಾನವನ್ನು ಕುರಿತು ತಮ್ಮ ಸ್ವರಚಿತ ಕವನವನ್ನು ವಾಚಿಸಿದರು. ಯಜ್ಞವಲ್ಕ್ಯ್ ಕಾಲೇಜಿನ ಪ್ರಾಂಶುಪಾಲರಾದ ವೇಣು ಕುಮಾರ್, ಕನ್ನಡ ಶಿಕ್ಷಕರಾದ ಚಿತ್ರಗಿರಿ ಶಿವಮೂರ್ತಿ.ಟಿ ಕೋಡಿಹಳ್ಳಿ ಗಂಗಾ ಸೆಂಟ್ರಲ್ ಶಾಲೆಯ ಕನ್ನಡ ಶಿಕ್ಷಕ ಹನುಮಂತರಾಯ ಈ ವಿದ್ಯಾರ್ಥಿ ಹರೀಶ್, ಮಾತನಾಡಿದರು. ಕವಿ ಬೆಳಕುಪ್ರಿಯ ಕವನ ವಾಚಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಕುವೆಂಪುರವರ ಓ ನನ್ನ ಚೇತನ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಗಣಿತ ಉಪನ್ಯಾಸಕ ಪ್ರವೀಣ್ ಕುಮಾರ್ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕ ಮಹಾಂತೇಶ್ ಸ್ವಾಗತಿಸಿದರು. ಬೆಳಕು ಪ್ರಿಯ ವಂದಿಸಿದರು. ಕುವೆಂಪು ಅಭಿಮಾನಿ ನರೇಂದ್ರ ಸೇರಿದಂತೆ ನಂಜಯ್ಯನ ಕೊಟ್ಟಿಗೆ ನಿವಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ : ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button