ಬೆಟಗೇರಿ ಭಾಗದಲ್ಲಿ ಬಡ್ಡಿ ದಂಧೆಕೋರರ ಮನೆ ಮೇಲೆ – ಪೊಲೀಸರ ದಾಳಿ ಮುಂದುವರಿಕೆ.
ಗದಗ ಫೆ.13

ಬೆಟಗೇರಿ ಭಾಗದಲ್ಲಿ ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರು ದಾಳಿ ಮುಂದುವರಿಸಿದ್ದು, ಅಕ್ರಮ ಲೇವಾದೇವಿ ನಡೆಸುತ್ತಿದ್ದ ಬೆಟಗೇರಿ ಭಾಗದ 17 ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ.ಈ ವೇಳೆ ಭಾರೀ ನಗದು ಪತ್ತೆಯಾಗಿದ್ದ ರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದಾಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ, “ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಮತ್ತು ಅವರ ಸಂಬಂಧಿತರ ಮನೆ, ಫೈನಾನ್ಸ್, ತೋಟದ ಮನೆ ಸೇರಿದಂತೆ 17 ಕ್ಕೂ ಅಧಿಕ ಕಡೆ ದಾಳಿ ನಡೆಸಲಾಗಿದೆ. ಅಶೋಕ ಗಣಾಚಾರಿ ಎಂಬುವರು ದೂರು ನೀಡಿದ್ದರು. 2016 ರಲ್ಲಿ ಆರೋಪಿ ಯಲ್ಲಪ್ಪ ಮಿಸ್ಕಿನ್ ಅವರಿಂದ ಒಂದು ಕೋಟಿ ಹಣ ಸಾಲ ಪಡೆದಿದ್ದೆ. ಈ ವರೆಗೂ 1.40 ಕೋಟಿ ರೂ. ಮರು ಪಾವತಿ ಮಾಡಿದ್ದೇನೆ. ಇನ್ನೂ ಹಲವು ಆಸ್ತಿಗಳನ್ನು ಅಡ ಇಟ್ಟಿದ್ದೇನೆ. ಆದರೂ ಮಿಸ್ಕಿನ್ ಅವರು ನನಗೆ ಇನ್ನೂ ಹಣಕ್ಕಾಗಿ ಪೀಡಿಸುತ್ತಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಅವರ ದೂರು ಆಧರಿಸಿ ಮಂಗಳವಾರ ಮಿಸ್ಕಿನ್ ಅವರಿಗೆ ಸಂಬಂಧಿಸಿದ ಹಲವಡೆ ದಾಳಿ ನಡೆಸಿದ್ದೇವೆ. ಇತ್ತೀಚೆಗೆ ದಾಳಿ ನಡೆಸುತ್ತಿದ್ದನ್ನು ಮಿಸ್ಕಿನ್ ಗಮನಿಸಿ ಅವರು ಸಂಬಂಧಿತರ ಮನೆಗೆ ಹಣ ಸಾಗಿಸಿದ್ದು ದಾಳಿ ವೇಳೆ ಕಂಡು ಬಂದಿದೆ. ದಾಳಿ ವೇಳೆ 1.50 ಕೋಟಿಗೂ ಹೆಚ್ಚು ನಗದು, ನೂರಾರು ಕೋಟಿ ರೂ. ಆಸ್ತಿ ದಾಖಲೆ ಪತ್ರಗಳನ್ನು ವಶ ಪಡಿಸಿ ಕೊಳ್ಳಲಾಗಿದೆ. ಖಾಲಿ ಬಾಂಡ್, ಚೆಕ್, ಚಿನ್ನಾಭರಣ ಸಿಕ್ಕಿದೆ. ಒಂದು ಸೂಟಕೇಸ್ ಬಾಂಡ್‌ಗಳು ಪತ್ತೆಯಾಗಿವೆ,” ಎಂದು ಮಾಹಿತಿ ನೀಡಿದರು.”ಯಲ್ಲಪ್ಪ ತೇಜುಸಾ ಮಿಸ್ಕಿನ್, ವಿಕಾಶ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ, ಮೋಹನ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದರು. ಈ ಕಾರ್ಯಾಚರಣೆಯಲ್ಲಿ 12 ತಂಡದಲ್ಲಿ 50 ಪೊಲೀಸ್ ಸಿಬ್ಬಂದಿ ಭಾಗಿ ಆಗಿದ್ದರು. ಸಿಪಿಐ ಧೀರಜ್ ಶಿಂದೆ, ಸಂಗಮೇಶ ಶಿವಯೋಗಿ, ಡಿವೈಎಸ್‌ಪಿ ಇನಾಮದಾರ ಇತರರು ನೇತೃತ್ವ ವಹಿಸಿದ್ದರು ಎಂದು ನೇಮಗೌಡ ತಿಳಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ