“ಅದೆಂತಹ ವ್ಯಕ್ತಿತ್ವ”- ಒಂದು ನೆನಪು…..

ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜರು ತಮ್ಮ ದೇಹ ತ್ಯಾಗ ಮಾಡಿ ೨೦ ವರ್ಷ ಕಳೆದರೂನೆನಪು ಮಾತ್ರ ಹಚ್ಚ ಹಸಿರು. ಈ ಸಂದರ್ಭದಲ್ಲಿ ಒಂದು ಘಟನೆ ನೆನಪಿಗೆ ಬರುತ್ತಿದೆ – 2002 ರ ಮೇ ತಿಂಗಳಲ್ಲಿ ಬೆಳಗಾಂನಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದ ‘ಸಾಧು ನಿವಾಸ’ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಬೆಂಗಳೂರಿನಿಂದ ನಾವೆಲ್ಲ ಸುಮಾರು ನೂರಾರು ಭಕ್ತರು ಹೋಗಿದ್ದೆವು. ಸಮಾರಂಭ ಮುಗಿಸಿ ಕೊಂಡು ರೈಲಿನಲ್ಲಿ ಬೆಂಗಳೂರಿಗೆ ಹೊರಟೆವು. ರೈಲಿನ ಒಂದು ಕಂಪಾರ್ಟ್ ಮೆಂಟಿನಲ್ಲಿ ನಾವೆಲ್ಲ ಕೆಲವು ರಾಮಕೃಷ್ಣ ಭಕ್ತರು ಸೇರಿ ಅಲ್ಲಿಯ ಕಾರ್ಯಕ್ರಮದ ಕುರಿತಾಗಿ ಮಾತನಾಡಲು ತೊಡಗಿದೆವು. ಹಾಗೆಯೇ ಯಾರ್ಯಾರಿಗೆ ಹೇಗೆ ಯಾವ ಸಂದರ್ಭದಲ್ಲಿ ಸ್ವಾಮೀಜಿಯವರ ಪರಿಚಯವಾಯಿತು. ಎನ್ನುವ ವಿಷಯದ ಕಡೆಗೆ ತಿರುಗಿತು. ಪ್ರತಿಯೊಬ್ಬರು ಸ್ವಾಮೀಜಿ ತಮಗೆ ಹೇಗೆ ಪರಿಚಯವಾದರು ಹಾಗೂ ಅವರಿಂದ ನಾವು ಹೇಗೆ ಸ್ಪೂರ್ತಿ ಗೊಂಡೆವು ಹಾಗೂ ಶ್ರೀರಾಮಕೃಷ್ಣರ ಬಳಿಗೆ ಬಂದೆವು ಎನ್ನುವುದರ ಕುರಿತು ಉತ್ಸಾಹ ಭರಿತರಾಗಿ ಮಾತನಾಡಲು ತೊಡಗಿದರು.

ಹೀಗೆ ಮಾತನಾಡುವ ಸಂದರ್ಭದಲ್ಲಿ ಒಬ್ಬ ಸ್ತ್ರೀ ಭಕ್ತೆ ಹೇಳಿದ ಮಾತು ಗಮನೀಯವಾದುದು ಹಾಗೂ ಸ್ವಾಮೀಜಿಯವರ ವ್ಯಕ್ತಿತ್ತಕ್ಕೆ ಹಿಡಿದ ಕೈಗನ್ನಡಿಯಂತಿದೆ. ಆ ಸ್ತ್ರೀ ಭಕ್ತೆ ಹೇಳಿದ ಮಾತುಗಳು-ಒಮ್ಮೆ ಬಸವನಗುಡಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿ ಆ ಸಮಯದಲ್ಲಿ ಸ್ವಾಮೀಜಿಯವರ ಉಪನ್ಯಾಸ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿದ ಬಳಿಕ ಸ್ವಾಮೀಜಿಯ ಸುತ್ತ ನೂರಾರು ಜನ ಸುತ್ತುವರಿದಿದ್ದರು. ಅದರಲ್ಲಿ ಕೆಲವು ಸ್ತ್ರೀಯರು ಸ್ವಾಮೀಜಿಯವರಿಗೆ ಪ್ರಣಾಮ ಸಲ್ಲಿಸಿ ಇತ್ತ ಕಡೆ ಬಂದು ಪರಸ್ಪರ ಈ ರೀತಿ ಮಾತನಾಡಿ ಕೊಳ್ಳುತ್ತಿದ್ದರು – ಸ್ವಾಮೀಜಿ ನನ್ನನ್ನು ನೋಡಿ ನಕ್ಕರು, ಹೌದು ನನ್ನನ್ನೂ ನೋಡಿ ನಕ್ಕರು ನನನ್ನು ನೋಡಿ ‘ಜೈರಾಮಕೃಷ್ಣ’ ಎಂದರು. ಹೌದು ನನ್ನನ್ನೂ ನೋಡಿ ಜೈರಾಮಕೃಷ್ಣ ಹೇಳಿದರು.

ಎಂದು ಹಾಗೆ ಮಾತನಾಡುವ ಸಂದರ್ಭದಲ್ಲಿ ಅವರ ಮುಖದಲ್ಲಿ ಆನಂದ ತುಂಬಿ ತುಳುಕುತ್ತಿತ್ತು. ನಾನು ಮನಸ್ಸಿನಲ್ಲೇ ಅಂದು ಕೊಂಡೆ – ಅರೆರೆ! ಒಬ್ಬ ಸಂನ್ಯಾಸಿ ನಕ್ಕ ಮಾತ್ರಕ್ಕೆ ಜೈರಾಮಕೃಷ್ಣ ಎಂದ ಮಾತ್ರಕ್ಕೆ ಇಷ್ಟೊಂದು ಆನಂದ ವುಂಟಾಗಬೇಕಾದರೆ ಆ ಸಂನ್ಯಾಸಿಯ ವ್ಯಕ್ತಿತ್ವ ಅದೆಂತಹದಿರಬಹುದು ಎಂದು ನಾನೂ ಸ್ವಾಮೀಜಿಯವರಿಗೆ ನಮಸ್ಕರಿಸಲು ಹೋದೆ! ಈ ರೀತಿಯಲ್ಲಿ ಸ್ವಾಮೀಜಿಯವರ ಪರಿಚಯವಾಯಿತು ಹಾಗೂ ಶ್ರೀರಾಮಕೃಷ್ಣರ ಸಂಪರ್ಕಕ್ಕೂ ಬಂದೆ ಎಂದು ಹೇಳಿದರು. ಹೀಗೆ ಸ್ವಾಮಿ ಪುರುಷೋತ್ತಮಾನಂದಜೀಯವರು ತಮ್ಮ ಅಯಸ್ಕಾಂತೀಯ ವ್ಯಕ್ತಿತ್ವದಿಂದ ಜನರನ್ನು ದಿವ್ಯತ್ರಯರ ಸಂಪರ್ಕಕ್ಕೆ ಸೆಳೆದರು. ಅಂತಹ ಸ್ವಾಮೀಜಿಯವರಿಗೆ ನನ್ನ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.
ಬರಹ-ಶ್ರೀಮತಿ ಮೀನಾಕ್ಷಿಮಯ್ಯ,
ಗುರು ನರಸಿಂಹ ಸತ್ಸಂಗ ಕೇಂದ್ರ,
ಜಯನಗರ, ಬೆಂಗಳೂರು.
ದೂರವಾಣಿ/9740656504