ಪ್ರತಿಯೊಬ್ಬರು ನೆಲ.ಜಲ ರಕ್ಷಣೆಗೆ ಬದ್ಧರಾಗಿ — ಮಾಜಿ ಸೈನಿಕ ತಿಮ್ಮಾಪುರ.
ಇದ್ದಲಗಿ ಆಗಷ್ಟ.15
ಪ್ರತಿಯೊಬ್ಬರು ನೆಲ, ಜಲ ರಕ್ಷಣೆಯನ್ನು ಮಾಡಿದಾಗ ಮಾತ್ರ ದೇಶ ಸದೃಢವಾಗಿರಲು ಸಾಧ್ಯವೆಂದು ಮಾಜಿ ಸೈನಿಕ ಶಶಿಕಾಂತ್ ತಿಮ್ಮಾಪುರ ತಿಳಿಸಿದರು.ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇದ್ದಲಗಿ ಗ್ರಾಮದಲ್ಲಿ ಅಮೃತ ಸರೋವರ ದಡದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇವಲ ಪುರುಷರಷ್ಟೇ ದೇಶದ ಗಡಿ ಕಾಯುತ್ತಿಲ್ಲ, ಮಹಿಳೆಯರು ಕೂಡ ದೇಶದ ರಕ್ಷಣೆಯಲ್ಲಿ ನಿಂತಿದ್ದಾರೆ. ಹೀಗೆ ಪ್ರತಿಯೊಬ್ಬರು ನೆಲ, ಜಲ ರಕ್ಷಣೆ ಮಾಡಿದಾಗ ಸದೃಢ ದೇಶ ಕಟ್ಟಲು ಸಾಧ್ಯ ಎಂದು ತಿಳಿಸಿದರು.ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಂಗಾಧರ ಹನಮಸಾಗರ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ಜಾತಿ, ಧರ್ಮ, ಭೇದ-ಭಾವ ಹೊಂದದೆ ಎಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಅವರನ್ನು ಸದಾ ಸ್ಮರಿಸೋಣ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎನ್. ಕೆ ಮುಲ್ಲಾ, ತಮ್ಮ ಕುಟುಂಬವನ್ನು ತ್ಯಜಿಸಿ ದೇಶದ ರಕ್ಷಣೆಗೆ ನಮ್ಮ ಸೈನಿಕರು ಸದಾ ನಿಂತಿರುತ್ತಾರೆ. ಅಂತಹ ಯೋಧರ ತ್ಯಾಗ, ಬಲಿದಾನದಿಂದಲೇ ನಾವು ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರುಬಳಿಕ ಮಾಜಿ ಸೈನಿಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಜೊತೆಗೆ ರಂಗೋಲಿ, ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಇನ್ನು ಅಮೃತ ಸರೋವರದ ದಡದ ಮೇಲೆ ನಿರ್ಮಿಸಲಾದ ಶಿಲಾಫಲಕವನ್ನು ಅನಾವರಣಗೊಳಿಸಿ, ಪಂಚ ಪ್ರಾಣ ಪ್ರತಿಜ್ಞಾ ವಿಧಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬೋಧಿಸಿದರು. ಕೆರೆಯ ದಡದ ಮೇಲೆ ವಿವಿಧ ಜಾತಿಯ ಸಸಿಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಮಕ್ಕಳು ನೆಟ್ಟು ನೀರುಣಿಸಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ ಹನಮಸಾಗರ, ಕಾರ್ಯದರ್ಶಿ ಅಮರೇಶ್ ಲೋಕಾಪುರ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಬಡಿಗೇರ, ಅಧ್ಯಕ್ಷೆ ಸಂಗಮ್ಮ ಶಿರಹಟ್ಟಿ, ಉಪಾಧ್ಯಕ್ಷ ಎನ್ ಕೆ ಮುಲ್ಲಾ, ಕಾಯಕ ಮಿತ್ರ ಆಸ್ಮಾಬೇಗಂ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಮಾಜಿ ಯೋಧರು, ಶಾಲಾ ಸಿಬ್ಬಂದಿ ವರ್ಗ, ಕಾಯಕ ಬಂಧುಗಳು, ಮಕ್ಕಳು ಉಪಸ್ಥಿತರಿದ್ದರು.