ಅಪ್ಪಣ್ಣ ನವರ ಚಿಂತನೆಗಳು ಮನುಕುಲದ ಉದ್ದಾರಕ್ಕೆ ದಾರಿದೀಪ – ಸಂತೋಷ ಬಂಡೆ.
ಹಿರೇರೂಗಿ ಜು.10





’12ನೇ ಶತಮಾನ ಶರಣರ ಶತಮಾನ. ತುಳಿತಕ್ಕೆಒಳಗಾಗಿದ್ದ ಸಮಾಜಗಳಲ್ಲಿ ಸಮಾನತೆ ಬಯಸಿದ್ದ ಹಡಪದ ಅಪ್ಪಣ್ಣ ನವರು ಸಾಮಾಜಿಕ ತಾರತಮ್ಯ, ಮೌಢ್ಯಗಳನ್ನು ತೊಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ಗುರುವಾರ ದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಹಡಪದ ಅಪ್ಪಣ್ಣ ಅವರ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರಾಂತಿಕಾರಕ ಧೋರಣೆ, ವೈಚಾರಿಕ ಪ್ರಜ್ಞೆಯ ಅಪ್ಪಣ್ಣ ನವರ ವಚನಗಳು ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿ ತಪ್ಪಿದ ಸಮಾಜವನ್ನು ಬಂಡಾಯದ ಧ್ವನಿ ಮೂಲಕ ಸರಿ ದಾರಿಗೆ ತರುವ ಪ್ರಯತ್ನ ಮಾಡಿವೆ.

ಅವರ ಚಿಂತನೆಗಳು ಮನುಕುಲದ ಉದ್ದಾರಕ್ಕೆ ದಾರಿ ದೀಪಗಳಾಗಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್.ಎಸ್ ಅರಬಮಾತನಾಡಿ, ಅಪ್ಪಣ್ಣ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಇವರು ವಚನಗಳಲ್ಲಿ ಶರಣರಿಗೆ ಇರಬೇಕಾದ ಕಾಯಕ ನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದರು. ಶಿಕ್ಷಕರಾದ ಎನ್.ಬಿ ಚೌಧರಿ, ಎಸ್.ಪಿ ಪೂಜಾರಿ ಹಾಗೂ ಮಕ್ಕಳು ಭಾಗವಹಿಸಿದ್ದರು.