ಕಡಬ ಪಟ್ಟಣ ಪಂಚಾಯಿತಿ: ಬಿಜೆಪಿಯ ‘ಸೌಜನ್ಯ ರಕ್ಷಣೆ’ ನಾಟಕಕ್ಕೆ – ಮತದಾರರಿಂದಲೇ ಪಾಠ.
ಉಡುಪಿ ಆ.22

ಇತ್ತೀಚಿಗೆ ನಡೆದ ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಬಿಜೆಪಿ ಪಾಲಿಗೆ ಕೇವಲ ರಾಜಕೀಯ ಸೋಲಾಗಿ ಉಳಿದಿಲ್ಲ. ಈ ತೀರ್ಪು ಪಕ್ಷದ ರಾಜಕೀಯ ತಂತ್ರಗಾರಿಕೆಗೆ ಮತ್ತು ಧರ್ಮಸ್ಥಳದ ‘ಸೌಜನ್ಯ ಪ್ರಕರಣ’ ವನ್ನು ಬಳಸಿ ಕೊಂಡ ರೀತಿಗೇ ಜನರಿಂದ ಸಿಕ್ಕ ತೀಕ್ಷ್ಣ ಉತ್ತರ ಎಂದು ವಿಶ್ಲೇಷಿಸಲಾಗಿದೆ. ಬಿಜೆಪಿ ಚುನಾವಣೆಗೆ ಧರ್ಮಸ್ಥಳದ ರಕ್ಷಣೆಯ ಹೆಸರಿನಲ್ಲಿ ಮತ ಯಾಚಿಸಿ ಜನರ ಮನಸ್ಸನ್ನು ಗೆಲ್ಲಲು ವಿಫಲವಾಗಿ, ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ಬಿಟ್ಟುಕೊಟ್ಟಿದೆ.
ಧರ್ಮದ ರಕ್ಷಣೆಯ ನಾಟಕ, ಜನರ ಆಕ್ರೋಶ:-
ಚುನಾವಣೆ ದಿನ ಬಿಜೆಪಿ ನಾಯಕರು ಕಡಬದಲ್ಲಿ ಮತದಾನ ಮುಗಿಯುವ ಹೊತ್ತಿಗೆ ಧರ್ಮಸ್ಥಳಕ್ಕೆ ಹೋಗಿ, ಕಾಲಿಗೆ ಬಿದ್ದು, ತಮ್ಮ ಭಾವ ಚಿತ್ರಗಳನ್ನು ಪ್ರದರ್ಶಿಸಿದ್ದರು. ಆದರೆ, ಮತದಾರರ ಮನಸ್ಸಿನಲ್ಲಿ ಅಂದು ಕೊಂಡಿದ್ದಷ್ಟು ಈ ತಂತ್ರಗಾರಿಕೆ ಪರಿಣಾಮ ಬೀರಲಿಲ್ಲ. ಮತದಾರರು ಈ ಕ್ರಮವನ್ನು ಕೇವಲ ಪ್ರಚಾರದ ಗಿಮಿಕ್ ಎಂದು ಪರಿಗಣಿಸಿದರು. ‘ಸೌಜನ್ಯ ಪ್ರಕರಣ’ ದ ಬಗ್ಗೆ ಮಾತನಾಡಿ, ರಾಜಕೀಯ ಲಾಭ ಪಡೆಯಲು ಯತ್ನಿಸಿದರೆ, ಜನರ ನಿಜವಾದ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ ಎಂಬ ಭಾವನೆ ಮೂಡಿತು.
ಸೌಜನ್ಯನ ಶಕ್ತಿ ವರ್ಸಸ್ ಅಹಂಕಾರದ ರಾಜಕೀಯ:-

ಬಿಜೆಪಿ ನಾಯಕರ ಅಹಂಕಾರದ ವಿರುದ್ಧ, ಜನರ ನಡುವೆ ಇಳಿದು, ಅವರ ಕಷ್ಟಗಳಿಗೆ ಸ್ಪಂದಿಸಿ ದವರನ್ನು ಜನ ಬೆಂಬಲಿಸಿದರು. ಈ ನಿಲುವು ಸೌಜನ್ಯರದ್ದು ಮಾತ್ರವಲ್ಲ, ಅವರ ಪರವಾಗಿ ನ್ಯಾಯಕ್ಕಾಗಿ ನಿಂತವರದು. ಕಡಬದ ಜನತೆಗೆ ಈ ಹೋರಾಟಗಾರರ ಪ್ರಾಮಾಣಿಕತೆ ಮತ್ತು ಧೈರ್ಯ ರಾಜಕೀಯ ನಾಟಕಗಳಿಗಿಂತ ದೊಡ್ಡದಾಗಿ ಕಂಡಿದೆ. ತಮ್ಮದೇ ಕ್ಷೇತ್ರವನ್ನು ರಕ್ಷಿಸಿ ಕೊಳ್ಳಲು ಸಾಧ್ಯವಾಗದ ಬಿಜೆಪಿ, ಬೇರೆಯವರ ರಕ್ಷಣೆಗಾಗಿ ಹೊರಟಿದ್ದು ಮತದಾರರಿಗೆ ನಂಬಲರ್ಹವಾಗಿ ಕಾಣಲಿಲ್ಲ.
ಕಾಂಗ್ರೆಸ್ ಮೇಲುಗೈಗೆ ಕಾರಣಗಳು:-
ಕಡಬದ ಜನತೆ, ಅಹಂಕಾರದ ರಾಜಕಾರಣವನ್ನು ಬದಿಗಿಟ್ಟು, ಸೌಜನ್ಯದ ಹಾಗೂ ಪ್ರಾಮಾಣಿಕ ಹೋರಾಟದ ಪರವಾಗಿ ನಿಂತರು. ಬಿಜೆಪಿ ಅಸ್ತಿತ್ವದ ಬಗ್ಗೆ ಪ್ರಶ್ನೆ ಮೂಡುವಂತೆ ಈ ಫಲಿತಾಂಶ ಬಂದಿದೆ. ಕಾಂಗ್ರೆಸ್ 8 ವಾರ್ಡ್ಗಳಲ್ಲಿ ಮೇಲುಗೈ ಸಾಧಿಸಿ ಅಧಿಕಾರ ಹಿಡಿದಿದೆ. ಈ ಗೆಲುವು ಕೇವಲ ರಾಜಕೀಯ ಗೆಲುವಲ್ಲ.
ಇದು ಜನರ ಆಶಯಗಳ ಮತ್ತು ಪ್ರಾಮಾಣಿಕತೆಗೆ ಸಿಕ್ಕ ಜಯ:-
ಅಂತಿಮವಾಗಿ, ಈ ಚುನಾವಣೆಯಲ್ಲಿ ಗೆದ್ದಿದ್ದು ಪಕ್ಷಗಳಲ್ಲ, ಬದಲಾಗಿ ಸೌಜನ್ಯನ ಶಕ್ತಿಯಂತೆ ಜನರ ವಿವೇಚನಾಶೀಲ ತೀರ್ಪು. ಈ ಫಲಿತಾಂಶ ರಾಜ್ಯದ ರಾಜಕೀಯದಲ್ಲೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ವರದಿ: ಆರತಿ ಗಿಳಿಯಾರು ಉಡುಪಿ