ದಾಂಪತ್ಯ ಕಲಹಕ್ಕೆ ಕೊನೆಯಿಲ್ಲದ ದುರಂತ ಪತ್ನಿಯ – ದೇಹ ತುಂಡರಿಸಿ ಬಾವಿಗೆ ಎಸೆದ ಪತಿ.
ಸಿಂದಗಿ ಆ.27





ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿ ಪರಮಾನಂದ ಎಂಬಾತ ತನ್ನ ಪತ್ನಿ ನೀಲಮ್ಮ (46) ಳನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಬಾವಿಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣದ ವಿವರ ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಮಂಗಳವಾರ ರಾತ್ರಿ ನೀಲಮ್ಮ ಅವರು ತಮ್ಮ ಜಮೀನಿನಲ್ಲಿ ಬೆಳೆದ ಮೆಕ್ಕೆ ಜೋಳದ ಬೆಳೆಯನ್ನು ಹಂದಿಗಳ ಹಾವಳಿಯಿಂದ ರಕ್ಷಿಸಲು ಪಟಾಕಿ ಸಿಡಿಸಲು ಹೊಲಕ್ಕೆ ಹೋಗಿದ್ದರು. ಅದೇ ಸಮಯದಲ್ಲಿ, ಪತಿ ಪರಮಾನಂದ ಅವರು ನೀಲಮ್ಮಳನ್ನು ಹಿಂಬಾಲಿಸಿ ಕೊಂಡು ಹೋಗಿ ಹರಿತವಾದ ಆಯುಧದಿಂದ ಆಕೆಯ ದೇಹವನ್ನು ಕತ್ತರಿಸಿ, ನಂತರ ಶವವನ್ನು ಬಾವಿಗೆ ಎಸೆದಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.

ಬುಧವಾರ ಬೆಳಿಗ್ಗೆ, ಮಗ ಷಣ್ಮುಖ ತಾಯಿಯನ್ನು ಹುಡುಕಿ ಕೊಂಡು ಹೊಲದ ಬಳಿ ಹೋದಾಗ, ಬಾವಿಯ ಸಮೀಪ ರಕ್ತದ ಗುರುತುಗಳನ್ನು ಕಂಡು ತಕ್ಷಣ ಸಿಂದಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.
ದಾಂಪತ್ಯ ಕಲಹವೇ ಕೊಲೆಗೆ ಕಾರಣ? ಸಿಂದಗಿ ಪೊಲೀಸ್ ಠಾಣೆಯ ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಪರಮಾನಂದ ಮತ್ತು ನೀಲಮ್ಮ ಅವರ ನಡುವೆ ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿದ್ದವು. ಸೋಮವಾರ ರಾತ್ರಿ ಸಹ ಇವರಿಬ್ಬರ ನಡುವೆ ದೊಡ್ಡ ಜಗಳ ನಡೆದಿದ್ದು, ಆ ವೇಳೆ ಪರಮಾನಂದ ‘ನಿನ್ನನ್ನು ಕತ್ತರಿಸಿ ಕೊಲೆ ಮಾಡಿ ಮುಗಿಸುತ್ತೇನೆ’ ಎಂದು ನೀಲಮ್ಮಳಿಗೆ ಬೆದರಿಕೆ ಹಾಕಿದ್ದನು ಎಂದು ಮಗ ಷಣ್ಮುಖ ಸ್ಪಷ್ಟ ಪಡಿಸಿದ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಬಾವಿಯಿಂದ ಮೃತ ನೀಲಮ್ಮಳ ದೇಹದ ಅರ್ಧ ಭಾಗ ಮಾತ್ರ ದೊರೆತಿದ್ದು, ಇನ್ನೂಳಿದ ಅರ್ಧ ಭಾಗಕ್ಕಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಪ್ರಕರಣವು ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ನಾಪತ್ತೆ ಯಾಗಿರುವ ಆರೋಪಿ ಪರಮಾನಂದನ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ.ಉಪ್ಪಾರ.ಸಿಂದಗಿ