ಕಾರ್ಮಿಕ ದಿನಾಚರಣೆಯಲ್ಲಿ ಕಿರಣ್ ಹೆಗ್ಡೆ ಮನುವಾದ ಸಿದ್ಧಾಂತದಿಂದ – ಶ್ರಮಿಕರ ಘನತೆಗೆ ಧಕ್ಕೆ.
ಕಾರ್ಕಳ ಸ.04





ಇತ್ತೀಚೆಗೆ ನಡೆದ ಮೇ 1 ರ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷರಾದ ಕಿರಣ್ ಹೆಗ್ಡೆ ಮಾತನಾಡಿದ್ದು, ಕಳೆದ ಎರಡು ದಶಕಗಳಿಂದ ಕರಾವಳಿ ಪ್ರದೇಶದಲ್ಲಿ ಪ್ರಭಾವ ಬೀರುತ್ತಿರುವ ‘ಮನುವಾದ’ ಸಿದ್ಧಾಂತವು ಶ್ರಮಿಕ ವರ್ಗ ಮತ್ತು ದಲಿತರ ಘನತೆಗೆ ಧಕ್ಕೆ ತರುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಭಾಷಣದಲ್ಲಿ, ಕಿರಣ್ ಹೆಗ್ಡೆ ಅವರು ಕಾರ್ಮಿಕರ ಹೋರಾಟದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದರು. ಹಿಂದಿನ ಕಾಲದಲ್ಲಿ ದಕ್ಷಿಣ ಕನ್ನಡದಂತಹ ಪ್ರದೇಶಗಳಲ್ಲಿ ದಲಿತರು ಮತ್ತು ಶ್ರಮಿಕರ ಶ್ರಮಕ್ಕೆ ಅಪಾರ ಗೌರವವಿತ್ತು.
ಭೂತಾರಾಧನೆಯಂತಹ ಸ್ಥಳೀಯ ಆಚರಣೆಗಳು ಈ ವರ್ಗದವರಿಗೆ ಸಾಮಾಜಿಕ ಮನ್ನಣೆಯನ್ನು ತಂದುಕೊಟ್ಟಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇವರು, ಪೂಜೆ ಮತ್ತು ಧಾರ್ಮಿಕ ವಿಷಯಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡುವುದರಿಂದ, ಕಾರ್ಮಿಕರ ನಿಜವಾದ ಕಲ್ಯಾಣವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಯಾವುದೇ ಸಂಘಟನೆ ಅಥವಾ ಪಕ್ಷಕ್ಕೆ ಸೇರಿದವರಾಗಿರಲಿ, ದಲಿತರನ್ನು ಅವಹೇಳನ ಮಾಡಿದ ಅಂತಹ ನಾಯಕರನ್ನು ಸಮಾಜದಿಂದಲೇ ಹೊರಹಾಕುವ ಕೆಲಸವನ್ನು ಶ್ರಮಿಕವರ್ಗದವರು ಮಾಡಬೇಕು ಎಂದು ಕಿರಣ್ ಹೆಗ್ಡೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಶ್ರಮಿಕರು ತಮ್ಮ ಹಕ್ಕುಗಳು ಮತ್ತು ಗೌರವವನ್ನು ಉಳಿಸಿಕೊಳ್ಳಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಅವರು ಒತ್ತಿ ಹೇಳಿದರು.ಕಿರಣ್ ಹೆಗ್ಡೆ ಅವರ ಈ ಹೇಳಿಕೆಗಳು ಕಾರ್ಮಿಕ ವಲಯ ಮತ್ತು ಸಾಮಾಜಿಕ ಹೋರಾಟಗಾರರಲ್ಲಿ ಚರ್ಚೆಗೆ ಗ್ರಾಸವಾಗಿವೆ.
ವರದಿ:ಆರತಿ.ಗಿಳಿಯಾರು.ಉಡುಪಿ