ಭ್ರಷ್ಟಾಚಾರದ ವಿರುದ್ಧ ಹೋರಾಡುವ ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಸಿ.ಸಿ ಕ್ಯಾಮರಾ ಬೇಡವೇ? ಪಾರದರ್ಶಕತೆ ಇಲ್ಲದೆ – ಕಾರ್ಯ ನಿರ್ವಹಿಸುತ್ತಿರುವುದು ಯಾವ ಪುರುಷಾರ್ಥಕ್ಕೆ…..?

ಉಡುಪಿ ಸ.04

ಭ್ರಷ್ಟಾಚಾರ ನಿರ್ಮೂಲನೆಯನ್ನು ಮುಖ್ಯ ಉದ್ದೇಶವಾಗಿಟ್ಟು ಕೊಂಡಿರುವ ಲೋಕಾಯುಕ್ತ ಕಚೇರಿಯೇ ರಾಜ್ಯ ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಗಂಭೀರ ಆರೋಪ ಉಡುಪಿಯಲ್ಲಿ ಕೇಳಿ ಬಂದಿದೆ. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸ ಬೇಕು ಎಂಬ ಸರ್ಕಾರದ ಸ್ಪಷ್ಟ ನಿರ್ದೇಶನಗಳಿದ್ದರೂ, ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಮಾತ್ರ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿ.ಸಿ ಕ್ಯಾಮರಾ ಇಲ್ಲದಿರುವುದು ಏಕೆ?ರಾಜ್ಯಾದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಕೋರ್ಟ್‌ಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಪಾರದರ್ಶಕತೆಗಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಆದೇಶಿಸಿದೆ. ಪೊಲೀಸ್ ಇಲಾಖೆ ಹಾಗೂ ಇತರ ತನಿಖಾ ಸಂಸ್ಥೆಗಳು ಯಾವುದೇ ಪ್ರಕರಣಗಳನ್ನು ಭೇದಿಸಲು ಸಿ.ಸಿ ಕ್ಯಾಮರಾ ದೃಶ್ಯಾವಳಿಗಳನ್ನೇ ಪ್ರಮುಖ ಸಾಕ್ಷ್ಯವಾಗಿ ಬಳಸುತ್ತವೆ. ಅಲ್ಲದೆ, ನ್ಯಾಯಾಲಯಗಳು ಕೂಡ ತಮ್ಮ ಕಲಾಪಗಳನ್ನು ನೇರ ಪ್ರಸಾರ ಮಾಡಲು ಆರಂಭಿಸಿವೆ. ಆದರೆ, ಲೋಕಾಯುಕ್ತದಂತಹ ಪ್ರಮುಖ ಭ್ರಷ್ಟಾಚಾರ ನಿಗ್ರಹ ಕಚೇರಿಯಲ್ಲೇ ಸಿ.ಸಿ ಕ್ಯಾಮರಾ ಇಲ್ಲದಿರುವುದು ಸಾರ್ವಜನಿಕರನ್ನು ಕೆರಳಿಸಿದೆ.

ಬೇರೆ ಇಲಾಖೆಗಳಿಗೆ ಭೇಟಿ ನೀಡಿದಾಗ, ಅಲ್ಲಿ ಸಿ.ಸಿ ಕ್ಯಾಮರಾ ಇಲ್ಲದಿರುವುದನ್ನು ಪ್ರಶ್ನಿಸುವ ಉಡುಪಿ ಲೋಕಾಯುಕ್ತ ಪೊಲೀಸರು, ತಮ್ಮದೇ ಕಚೇರಿಯಲ್ಲಿ ಈ ನಿಯಮ ಪಾಲಿಸದಿರುವುದು ಎಷ್ಟರ ಮಟ್ಟಿಗೆ ಸರಿ ? ಸಿ.ಸಿ ಕ್ಯಾಮರಾ ಇಲ್ಲದೆ ನಿಮ್ಮ ಕಚೇರಿಯಲ್ಲಿ ನಡೆಯುವ ಚಟುವಟಿಕೆಗಳನ್ನು ದಿವ್ಯ ದೃಷ್ಟಿಯಿಂದ ನೋಡಲು ‘ನೀವು ದೈವಾಂಶ ಸಂಭೂತರೇ?’ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಗೌಪ್ಯ ಭೇಟಿಗಳನ್ನು ಮತ್ತು ಅಕ್ರಮ ಚಟುವಟಿಕೆಗಳನ್ನು ಮರೆ ಮಾಚುವ ಉದ್ದೇಶದಿಂದಲೇ ಈ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿ ಕೊಂಡಿಲ್ಲಾ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಪ್ರಭಾರ ಉಪಾಧ್ಯಕ್ಷಕ ಹುದ್ದೆ ಮತ್ತು ಸಿಬ್ಬಂದಿಗಳ ಸುದೀರ್ಘ ಸೇವೆ ಬೇರು ಬಿಟ್ಟ ಅಧಿಕಾರಿ ಸಿಬಂದಿಗಳು:

ಉಡುಪಿ ಜಿಲ್ಲೆಯ ಲೋಕಾಯುಕ್ತ ಕಚೇರಿ ಕೇವಲ ಸಿ.ಸಿ ಕ್ಯಾಮರಾ ಸಮಸ್ಯೆಗೆ ಮಾತ್ರ ಸೀಮಿತವಾಗಿಲ್ಲ. ಈ ಕಚೇರಿಯಲ್ಲಿ ಪೂರ್ಣಕಾಲಿಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಿಲ್ಲದೆ, ಮಂಜುನಾಥ್ ಎಂಬುವವರು ಹಲವು ವರ್ಷಗಳಿಂದ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಜವಾಬ್ದಾರಿಯುತ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿಯನ್ನು ನೇಮಕ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

ಇದಲ್ಲದೆ, ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಹಲವು ವರ್ಷಗಳಿಂದ ಬೇರು ಬಿಟ್ಟ ಕೆಲವು ಸಿಬ್ಬಂದಿಗಳೂ ಇದ್ದಾರೆ. ನಿಯಮಗಳ ಪ್ರಕಾರ, ಭ್ರಷ್ಟಾಚಾರದ ಸಾಧ್ಯತೆಗಳನ್ನು ಕಡಿಮೆ ಮಾಡಲು ಮತ್ತು ಅಧಿಕಾರ ದುರುಪಯೋಗವನ್ನು ತಡೆಯಲು ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡುವುದು ಸೂಕ್ತ. ಆದರೆ, ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಈ ನಿಯಮ ಪಾಲನೆ ಯಾಗುತ್ತಿಲ್ಲ. ಸುದೀರ್ಘ ಕಾಲ ಒಂದೇ ಹುದ್ದೆಯಲ್ಲಿರುವವರು ಭ್ರಷ್ಟಾಚಾರದಲ್ಲಿ ತೊಡಗುವ ಸಾಧ್ಯತೆಗಳಿರುತ್ತವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಯಕಲ್ಪಕ್ಕಾಗಿ ಸಾರ್ವಜನಿಕರ ಆಗ್ರಹ ಉಡುಪಿ ಲೋಕಾಯುಕ್ತ ಕಚೇರಿಗೆ ತಕ್ಷಣವೇ ಕಾಯಕಲ್ಪ ಆಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿ.ಸಿ ಕ್ಯಾಮರಾ ಅಳವಡಿಕೆ: ಕೂಡಲೇ ಕಚೇರಿಯ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾ ಕ್ಯಾಮೆರಾಗಳನ್ನು ಅಳವಡಿಸಬೇಕು.

ಪೂರ್ಣಕಾಲಿಕ ಅಧಿಕಾರಿ ನೇಮಕ: ಜವಾಬ್ದಾರಿಯುತ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿಯನ್ನು ನೇಮಿಸಬೇಕು.

ವರ್ಗಾವಣೆ ನಿಯಮ ಪಾಲನೆ: ದೀರ್ಘಕಾಲದಿಂದ ಒಂದೇ ಹುದ್ದೆಯಲ್ಲಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು.ಈ ಕ್ರಮಗಳು ಲೋಕಾಯುಕ್ತ ಕಚೇರಿಯ ಘನತೆ ಮತ್ತು ಪಾರದರ್ಶಕತೆಯನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತವೆ. ಒಂದು ಸರ್ಕಾರಿ ಇಲಾಖೆಯಲ್ಲಿ ನ್ಯಾಯ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಿರೀಕ್ಷಿಸುವ ಸಾರ್ವಜನಿಕರು, ಇದೇ ಇಲಾಖೆಯ ನಿಯಮ ಉಲ್ಲಂಘನೆಗಳನ್ನು ಕಂಡು ನಿರಾಸೆ ಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button