ಚಾಂತಾರಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ, ಪೊಲೀಸರ ಸಮಯೋಚಿತ ಪ್ರಯತ್ನಕ್ಕೆ – ಸಾರ್ವಜನಿಕ ಮೆಚ್ಚುಗೆ.
ಉಡುಪಿ ಸ.06

ಸೆಪ್ಟೆಂಬರ್ 06, 2025 ಮಾದಕ ವ್ಯಸನ ದಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆ, ಉಡುಪಿ ಜಿಲ್ಲೆಯ ಚಾಂತಾರು ಗ್ರಾಮದಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆಯ ಈ ಸಮಯೋಚಿತ ಪ್ರಯತ್ನವು ಯುವ ಜನರನ್ನು ಮಾದಕ ವ್ಯಸನದ ಅಪಾಯಗಳಿಂದ ದೂರ ವಿಡಲು ನೆರವಾಗಲಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ಉಪ ನಿರೀಕ್ಷಕ (S.I.) ಅಶೋಕ್, “ಜೀವನ ಅಮೂಲ್ಯವಾದ ಕೊಡುಗೆ, ಅದನ್ನು ಮಾದಕ ವಸ್ತುಗಳಿಗಾಗಿ ಹಾಳು ಮಾಡ ಬೇಡಿ” ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು. ಅವರ ಈ ಮಾತುಗಳು ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಪರಿಣಾಮಕಾರಿ ಜಾಗೃತಿ ಮೂಡಿಸಿದವು.
ಭಾರತದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ಸೇವನೆಯನ್ನು ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985 (NDPS ಕಾಯಿದೆ) ಅಡಿಯಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸಣ್ಣ ಪ್ರಮಾಣದ ಸೇವನೆಗೆ ಒಂದು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ₹20,000 ವರೆಗೆ ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದರೆ, 10 ರಿಂದ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಲಕ್ಷಾಂತರ ರೂಪಾಯಿಗಳ ದಂಡ ವಿಧಿಸುವ ಅವಕಾಶವಿದೆ.
ಪೊಲೀಸ್ ಇಲಾಖೆಯು ಇಂತಹ ಚಟುವಟಿಕೆಗಳನ್ನು ತಡೆಯಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯಕ್ರಮವು ಕೇವಲ ಎಚ್ಚರಿಕೆ ನೀಡುವುದಲ್ಲದೆ, ಮಾದಕ ವ್ಯಸನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕ ಸಹಕಾರ ಅತಿ ಮುಖ್ಯ ಎಂಬುದನ್ನು ಒತ್ತಿ ಹೇಳಿದೆ. ಯಾವುದೇ ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಈ ಕ್ರಮವು ಜನರಲ್ಲಿ ವಿಶ್ವಾಸ ಮೂಡಿಸಿದೆ.
ಪೊಲೀಸ್ ಇಲಾಖೆಯ ಈ ಜಾಗೃತಿ ಕಾರ್ಯಕ್ರಮವನ್ನು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಪೊಲೀಸ್ ಮತ್ತು ಸಾರ್ವಜನಿಕರ ಸಹ ಭಾಗಿತ್ವದಿಂದ ಮಾತ್ರ ಇಂತಹ ಸಾಮಾಜಿಕ ಪಿಡುಗುಗಳನ್ನು ನಿಯಂತ್ರಿಸಬಹುದು ಎಂಬ ಸಂದೇಶವನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಸಾರ್ವಜನಿಕರಲ್ಲಿ ಎಚ್ಚರ ವಹಿಸಿಲು ಕೋರಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ