NH-66 ರಲ್ಲಿ ಗಾಂಜಾ ಸಾಗಿಸುತ್ತಿದ್ದ ಟ್ರಕ್ ಮೇಲೆ ದಾಳಿ, ಲಕ್ಷಾಂತರ ರೂ. ಮೌಲ್ಯದ – ಅಪಾರ ಪ್ರಮಾಣದ ಮಾದಕ ವಸ್ತು ವಶ.
ಉಡುಪಿ ಸ.11





ರಾಜ್ಯದ ಕರಾವಳಿ ಭಾಗವನ್ನು ಮಾದಕ ಮುಕ್ತ ಗೊಳಿಸುವ ಉದ್ದೇಶದಿಂದ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗಾಂಜಾ ಸಾಗಿಸುತ್ತಿದ್ದ ಟ್ರಕ್ ಮೇಲೆ ದಿಢೀರ್ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 65 ಕೆ.ಜಿ ಗೂ ಹೆಚ್ಚು ಗಾಂಜಾವನ್ನು ವಶಪಡಿಸಿ ಕೊಂಡಿದ್ದಾರೆ. ಈ ಘಟನೆಯು ಉಡುಪಿಯ ಕಿನ್ನಿಮೂಲ್ಕಿ ಮೇಲ್ಸೇತುವೆಯ ಕೆಳ ಭಾಗದಲ್ಲಿ ನಡೆದಿದೆ.
ಇದು ಈ ಭಾಗದಲ್ಲಿ ವಶಪಡಿಸಿ ಕೊಂಡ ಬಾರಿ ಪ್ರಮಾಣದ ಮಾದಕ ವಸ್ತುವಾಗಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ, ಸೆನ್ (Cyber, Economic, and Narcotics) ಪೊಲೀಸರ ತಂಡವು ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು. ಲಭ್ಯವಾದ ಖಚಿತ ಮಾಹಿತಿ ಆಧರಿಸಿ, ಪೊಲೀಸರು ಸಂಜೆ 4:30 ರ ಸುಮಾರಿಗೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಅನುಮಾನಾಸ್ಪದ ಟ್ರಕ್ ಅನ್ನು ತಡೆದು ನಿಲ್ಲಿಸಿದರು. ಟ್ರಕ್ ನ 5 ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಸಣ್ಣ ಸಣ್ಣ ಪ್ಯಾಕೆಟ್ ಗಾಂಜಾ ಇರುವುದು ಪತ್ತೆ ಯಾಯಿತು.
ಕಾರ್ಯಾಚರಣೆಯಲ್ಲಿ ಮಲ್ಪೆ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್ ನೇತೃತ್ವ ವಹಿಸಿದ್ದರು ಅವರಿಗೆ ಪೋಲೀಸ್ ಸಿಬ್ಬಂದಿಗಳು ಸಾಥ್ ನೀಡಿದರು. ಪಂಚನಾಮೆ ಅಧಿಕಾರಿಗಳಾಗಿ ಉಡುಪಿ ತಹಶೀಲ್ದಾರ್ ಗುರುರಾಜ್, ಕಡೆಕಾರ್ ಗ್ರಾ.ಪಂ ಪಿ.ಡಿ.ಓ ಸಿದ್ದೇಶ್ ಮತ್ತು ಉದ್ಯಾವರ ಗ್ರಾಮ.ಪಂ ಕಾರ್ಯದರ್ಶಿ ಶಿವರಾಜು.ಎಂ ಇವರುಗಳ ಸಮ್ಮುಖದಲ್ಲಿ ಡಿಜಿಟಲ್ ತೂಕದ ಯಂತ್ರ ಬಳಸಿ ಗಾಂಜಾದ ತೂಕವನ್ನು ದಾಖಲಿಸಿ ಕೊಳ್ಳಲಾಯಿತು. ನಂತರ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಗಾಂಜಾವನ್ನು ಕಾನೂನಿನ ಪ್ರಕ್ರಿಯೆಗಳ ಅಡಿಯಲ್ಲಿ ಸೀಲ್ ಮಾಡಿ ಠಾಣೆಗೆ ಸಾಗಿಸಲಾಯಿತು.ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಟ್ರಕ್ ಚಾಲಕ ಮತ್ತು ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಗಾಂಜಾ ಯಾವ ರಾಜ್ಯದಿಂದ ಸಾಗಾಟವಾಗಿತ್ತು, ಈ ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳು ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆಯ ಪ್ರಕ್ರಿಯೆ ಮುಂದುವರಿದಿದೆ.
ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ:
ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆಯು ಕೈಗೊಂಡ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದಿಂದ ತತ್ತರಿಸಿದ್ದ ಜನರಲ್ಲಿ ಈ ಯಶಸ್ವಿ ಕಾರ್ಯಾಚರಣೆ ಹೊಸ ಭರವಸೆ ಮೂಡಿಸಿದೆ. ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕ ಸಂಘಟನೆಗಳು, ಈ ಜಾಲದ ಮೂಲವನ್ನು ಭೇದಿಸಲು ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್ ನ ಬಳಗ ಕೂಡ ಪೋಲಿಸ್ ಇಲಾಖೆಯ ಕ್ಷೀಪ್ರ ಕಾರ್ಯಾಚರಣೆಯನ್ನು ಹೃದಯ ಪೂರ್ವಕ & ಗೌರವಿಸಿ, ಶುಭ ಹಾರೈಸಿ ಶ್ಲಾಘಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ