ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ನಡೆಗೆ ಯುವ ಕಾಂಗ್ರೆಸ್ ಟೀಕೆ – ಅಭಿವೃದ್ಧಿ ಬಿಟ್ಟು ‘ಪಿಆರ್ ಸ್ಟಂಟ್’ ಆರೋಪ.
ಉಡುಪಿ ಸ.20





ರಸ್ತೆ ಗುಂಡಿಗಳೊಂದಿಗೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ಪ್ರಜಾಪ್ರಭುತ್ವ ರಕ್ಷಣೆ’ಯ ನಾಟಕವಾಡುತ್ತಿರುವ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಅವರ ನಡೆಗೆ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಈ ಕುರಿತು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, “ಬಿಜೆಪಿ ಯುವ ಮುಖಂಡರು ರೋಡ್‌ವೇ ಪಿಆರ್ ಮಾಡುವುದನ್ನು ಬಿಟ್ಟು, ರಸ್ತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚಿಸಬೇಕು” ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಾವುದೇ ಪಕ್ಷಪಾತವಿಲ್ಲದೆ ಪ್ರತಿ ಶಾಸಕರಿಗೂ ₹25 ಕೋಟಿ ಅನುದಾನ ನೀಡಿದೆ. ಈ ಹಣವನ್ನು ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಿಸಲು ನಿಮ್ಮ ಶಾಸಕರನ್ನು ಒತ್ತಾಯಿಸಿ. ಆಗ ಬೇಕಿದ್ದರೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಿ ಎಂದು ಅಜಿತ್ ಕುಮಾರ್ ಶೆಟ್ಟಿ ವ್ಯಂಗ್ಯವಾಡಿದರು.ಹಳೆಯ ಘಟನೆಗಳ ಸ್ಮರಣೆ:ಪೃಥ್ವಿರಾಜ್ ಶೆಟ್ಟಿ ಅವರು ಬಿಜೆಪಿ ಸೇರುವ ಮೊದಲು ಕಾಂಗ್ರೆಸ್‌ನಲ್ಲಿದ್ದಾಗ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ತೇಜೋವಧೆ ಮಾಡಿದ್ದರು ಎಂಬುದನ್ನು ನೆನಪಿಸಿದ ಅವರು, ಈಗ ಬಿಜೆಪಿ ನಿಷ್ಠೆ ಮತ್ತು ಪಾಠಗಳ ಬಗ್ಗೆ ಮಾತನಾಡುವುದು ನಾಟಕೀಯ ಎಂದು ಟೀಕಿಸಿದರು.
ಗೋ ಪ್ರೇಮದ ಬಗ್ಗೆ ವ್ಯಂಗ್ಯ:
ಇತ್ತೀಚೆಗೆ ‘ಗೋ ಪ್ರೇಮ’ದ ಹೆಸರಿನಲ್ಲಿ ಸ್ಟಂಟ್‌ಗಳನ್ನು ಮಾಡುವವರಿಗೂ ತಿರುಗೇಟು ನೀಡಿದ ಅವರು, “ನಮ್ಮ ಯುವ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಮೂರು-ನಾಲ್ಕು ಗೋವುಗಳನ್ನು ಸಾಕಲಾಗುತ್ತಿದೆ. ನೈಜ ಸೇವಾ ಮನೋಭಾವ ಹೇಗಿರುತ್ತದೆ ಎಂದು ನೋಡಲು ಬೇಕಿದ್ದರೆ ನಮ್ಮ ಮನೆಗಳಿಗೆ ಬನ್ನಿ” ಎಂದು ಆಹ್ವಾನ ನೀಡಿದರು.
ವರದಿ:ಆರತಿ.ಗಿಳಿಯಾರು.ಉಡುಪಿ