ಪಡಿತರ ಚೀಟಿ ರದ್ದತಿ ವಿವಾದ, ಶಾಸಕ ಯಶಪಾಲ್ ಸುವರ್ಣ ವಿರುದ್ಧ – ರಮೇಶ್ ಕಾಂಚನ್ ಆಕ್ರೋಶ.
ಉಡುಪಿ ಸ.24





ಪಡಿತರ ಚೀಟಿಗಳ ರದ್ದತಿಗೆ ಸಂಬಂಧಿಸಿ ರಾಜ್ಯ ಸರ್ಕಾರವನ್ನು ದೂಷಿಸುತ್ತಿರುವ ಶಾಸಕ ಯಶಪಾಲ್ ಸುವರ್ಣ ಅವರು ಸತ್ಯವನ್ನು ಜನತೆಗೆ ತಿಳಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ. ಈ ಕ್ರಮವು ರಾಜ್ಯ ಸರ್ಕಾರದ ನಿರ್ಧಾರವಲ್ಲ, ಬದಲಾಗಿ ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆಯ ಮೇರೆಗೆ ನಡೆಯುತ್ತಿರುವ ಪ್ರಕ್ರಿಯೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ 7.76 ಲಕ್ಷಕ್ಕೂ ಹೆಚ್ಚು ಸಂಶಯಾಸ್ಪದ ಪಡಿತರ ಚೀಟಿಗಳನ್ನು ಗುರುತಿಸಿದೆ. ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಸುಳ್ಳು ಮಾಹಿತಿ ನೀಡಿ, ರಾಜ್ಯ ಸರ್ಕಾರವೇ ಈ ಕ್ರಮಕ್ಕೆ ಮುಂದಾಗಿದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಕಾಂಚನ್ ಆರೋಪಿಸಿದ್ದಾರೆ.
ಕೇಂದ್ರದ ನೇರ ತೆರಿಗೆಗಳ ಮಂಡಳಿ (CBDT) ವರದಿ ಪ್ರಕಾರ, ರಾಜ್ಯದಲ್ಲಿ ಸುಮಾರು 5.80 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಅರ್ಹರಲ್ಲ. ಆದಾಯ ತೆರಿಗೆ ಪಾವತಿಸುವವರು, ಕಂಪನಿಗಳ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಮತ್ತು 25 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ಜಿಎಸ್‌ಟಿ ನೋಂದಣಿ ಇರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಸರ್ಕಾರ ಮಾನದಂಡಗಳನ್ನು ನಿಗದಿಪಡಿಸಿದೆ. ಇಂತಹ ಅನರ್ಹ ಕಾರ್ಡ್‌ಗಳನ್ನು ಈ ತಿಂಗಳ 30ರೊಳಗೆ ರದ್ದುಗೊಳಿಸುವಂತೆ ಕೇಂದ್ರ ಸೂಚಿಸಿದೆ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಖಂಡಿಸಿದ ರಮೇಶ್ ಕಾಂಚನ್, ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿ ಸಂಸದರು ಮತ್ತು ಶಾಸಕರು ದೆಹಲಿಗೆ ಹೋಗಿ ಕೇವಲ ಕುರ್ಚಿ ಬಿಸಿ ಮಾಡುವುದನ್ನು ಬಿಟ್ಟು, ಕೇಂದ್ರದ ಈ ನಿರ್ಧಾರವನ್ನು ವಿರೋಧಿಸುವ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಕಾರ್ಡ್ ರದ್ದು ಮಾಡುತ್ತಿದೆ ಎಂದು ಶಾಸಕರು ಹೇಳುತ್ತಿರುವುದು ಹಸಿ ಸುಳ್ಳು. ನಿಜವಾಗಿಯೂ ಬಡವರ ಬಗ್ಗೆ ಕಾಳಜಿಯಿದ್ದರೆ, ಕೇಂದ್ರ ಸರ್ಕಾರದ ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ತಮ್ಮ ‘ದಮ್ಮು-ತಾಕತ್ತು’ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
ವರದಿ:ಆರತಿ ಗಿಳಿಯಾರು ಉಡುಪಿ