ಬೆಟ್ಟದೂರು ಗ್ರಾಮದಲ್ಲಿ ಗಣಿಗಾರಿಕೆ ವಿರುದ್ಧ – ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ.
ಬೆಟ್ಟದೂರು ಅ.15





ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದ ಪಕ್ಕದಲ್ಲಿರುವ ಎಂ/ಎಸ್. ಸುಚಿತ್ ಮಿಲೇನಿಯಮ್ ಪ್ರೈ.ಲಿ ಕಂಪನಿಯು ನಡೆಸುತ್ತಿರುವ ಕಲ್ಲಿನ ಗಣಿಗಾರಿಕೆಯ ಬ್ಲಾಸ್ಟಿಂಗ್‌ನಿಂದಾಗಿ ಗ್ರಾಮಸ್ಥರ ಮನೆಗಳು ಬಿರುಕು ಬಿಟ್ಟಿದ್ದು, ಶಿಥಿಲಗೊಂಡಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಕಂಪನಿ ಮುಂಭಾಗದಲ್ಲಿ ಧರಣಿ ನಡೆಸಿ ಗಣಿಗಾರಿಕೆ ಮತ್ತು ಬ್ಲಾಸ್ಟಿಂಗ್ ಚಟುವಟಿಕೆ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.ಗ್ರಾಮದ ಪ್ರತಿನಿಧಿಗಳು ಮಾತನಾಡುತ್ತಾ “ಸುಚಿತ್ ಮಿಲೇನಿಯಮ್ ಪ್ರೈ.ಲಿ ಕಂಪನಿಯು ಬೆಟ್ಟದೂರು ಗ್ರಾಮದಿಂದ ಕೇವಲ 400 ರಿಂದ 500 ಮೀಟರ್ ದೂರದಲ್ಲೇ ಕಲ್ಲಿನ ಗಣಿಗಾರಿಕೆ ನಡೆಸುತ್ತಿದೆ. ಕಳೆದ ಒಂದು ವರ್ಷ ಆರು ತಿಂಗಳಿಂದ ಪ್ರತಿ ದಿನ ನಡೆಯುತ್ತಿರುವ ಬ್ಲಾಸ್ಟಿಂಗ್‌ನ ಪರಿಣಾಮವಾಗಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ, ವೃದ್ಧರು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾತ್ರಿ ವೇಳೆ ಬ್ಲಾಸ್ಟಿಂಗ್‌ನಿಂದ ಉಂಟಾಗುವ ಭಾರೀ ಶಬ್ದದಿಂದ ನಿದ್ರೆ ತಪ್ಪುತ್ತಿದೆ. ಹಲವಾರು ಬಾರಿ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮಸ್ಥರು ಮುಂದುವರಿದು ಹೇಳಿದರು “ಈ ಗಣಿಗಾರಿಕೆ ನೀರಮಾನ್ವಿ ಸೀಮಾಂತರದಲ್ಲಿರುವುದರಿಂದ ಪರವಾನಿಗೆ ಆ ಗ್ರಾಮ ಹೆಸರಲ್ಲಿ ನೀಡಲಾಗಿದೆ.

ಆದರೆ ಬೆಟ್ಟದೂರು ಗ್ರಾಮವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ನೀರಮಾನ್ವಿ 1 ರಿಂದ 1.5 ಕಿಲೋಮೀಟರ್ ದೂರದಲ್ಲಿದೆ, ಆದರೂ ಬೆಟ್ಟದೂರು ಕೇವಲ 400–500 ಮೀಟರ್ ಅಂತರದಲ್ಲಿರುವುದರಿಂದ ನೇರ ಪರಿಣಾಮ ಎದುರಿಸುತ್ತಿದೆ. ಗಣಿಗಾರಿಕೆಯಲ್ಲಿ ಅತಿಯಾಗಿ ಸಿಡಿಮದ್ದು ಬಳಕೆ ಮಾಡುವುದರಿಂದ ಗ್ರಾಮ ಕಂಪಿಸುತ್ತಿದ್ದು, ಬೆಟ್ಟದಲ್ಲಿರುವ ಭಾರಿ ಕಲ್ಲುಗಳು ಉರುಳುವ ಭೀತಿ ಇದೆ. ಕಂಪನಿಯ ವಾಹನಗಳು ನಿರಂತರವಾಗಿ ಓಡಾಡುವುದರಿಂದ ರಸ್ತೆಯ ಪಕ್ಕದ ಬೆಳೆಗಳು ದೂಳಿನಿಂದ ಆವೃತವಾಗಿವೆ, ರೈತರ ಬೆಳೆಗಳು ಅರ್ಧದಷ್ಟು ಹಾನಿಗೊಳಗಾಗಿವೆ. ವಿದ್ಯಾರ್ಥಿಗಳು ಮತ್ತು ರೈತರಿಗೆ ವಾಹನ ಸಂಚಾರದಿಂದ ತುಂಬಾ ತೊಂದರೆ ಉಂಟಾಗಿದೆ.”ಇದಲ್ಲದೆ, ಸ್ಫೋಟದಿಂದ ಬರುವ ಅನಿಲ ಮತ್ತು ದೂಳಿನ ಕಾರಣದಿಂದ ಊರಿನ ಜನರಲ್ಲಿ ಉಸಿರಾಟ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಹೇಳಿದರು. “ಕಳೆದ 5 ತಿಂಗಳಿಂದ ಕಂಪನಿಗೆ ಪರಿಹಾರ ಕೇಳುತ್ತಿದ್ದೇವೆ, ಆದರೆ ಯಾವುದೇ ರೀತಿಯ ನಷ್ಟ ಪರಿಹಾರ ಹಣ ನೀಡಿಲ್ಲ. ಈ ಗಣಿಗಾರಿಕೆಯಿಂದ ಹಾನಿಗೊಳಗಾದ ಮನೆಗಳು ಮತ್ತು ಜಮೀನುಗಳಿಗೆ ತಕ್ಷಣ ಪರಿಹಾರ ನೀಡಬೇಕು. ಜೀವಹಾನಿ ಸಂಭವಿಸಿದರೆ ಸರ್ಕಾರ ಮತ್ತು ಕಂಪನಿ ನೇರವಾಗಿ ಹೊಣೆಗಾರರಾಗ ಬೇಕು,” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.ಕೊನೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡು “ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಂಪನಿಯ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲು ನಾವು ಸಿದ್ಧರಾಗಿದ್ದೇವೆ,” ಎಂದು ತಿಳಿಸಿದರು.ಧರಣಿಯಲ್ಲಿ ಬೆಟ್ಟದೂರು ಗ್ರಾಮದ ಸಾರ್ವಜನಿಕರು, ಮಹಿಳೆಯರು, ಹಿರಿಯರು, ಯುವಕರು, ರೈತರು ಹಾಗೂ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ