ನಕಲಿ ಭತ್ತದ ಬೀಜ ಮಾರಾಟ ವಿರೋಧಿಸಿ – ರೈತರ ಹೋರಾಟ.
ಮಾನ್ವಿ ನ.08

ತಾಲೂಕಿನ ಅನೇಕ ರೈತರಿಗೆ ಈ ಬೆಳೆಗಾಲದಲ್ಲಿ ಆಂಧ್ರ ಪ್ರದೇಶ ಮೂಲದ ನೀಲಕಂಠೇಶ್ವರ ಸೀಡ್ಸ್ ಕಾರ್ಪೊರೇಷನ್ ಕಂಪನಿಯ ಕಳಪೆ ಹಾಗೂ ನಕಲಿ ಗುಣಮಟ್ಟದ ಭತ್ತದ ಬೀಜಗಳು ಮಾರಾಟವಾಗಿರುವ ಹಿನ್ನೆಲೆಯಲ್ಲಿ ಮಾನ್ವಿ ತಾಲೂಕಿನ ವಿವಿಧ ರೈತ ಸಂಘಟನೆಗಳು ಹಾಗೂ ಸಾಮಾಜಿಕ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ತಾಲೂಕು ಪಂಚಾಯತ್ ಆವರಣದಲ್ಲಿ ಭಾರಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷರು ಹಾಗೂ ದಲಿತ ಸೇನೆ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಜಾವೀದ್ ಖಾನ್ ಅವರು, “ದೇಶದಲ್ಲಿ ರೈತನಿಗಿಂತ ದೊಡ್ಡ ವಿಜ್ಞಾನಿ ಯಾರೂ ಇಲ್ಲ. ಅನೇಕ ವರ್ಷಗಳ ಅನುಭವದಿಂದ ಕೃಷಿ ಮಾಡುವ ರೈತನಿಗೆ ನಕಲಿ ಬೀಜ ನೀಡಿ ಮೋಸ ಮಾಡುವುದು ಮಾನವೀಯತೆಯ ವಿರುದ್ಧದ ಕೃತ್ಯ. ಇಂತಹ ಕಂಪನಿಗಳಿಗೆ ಹೃದಯವೇ ಇಲ್ಲದಂತಾಗಿದೆ. ಮೊದಲು ನಮ್ಮ ಗಮನಕ್ಕೆ ಬಂದಾಗಲೇ ತಾಲೂಕು ಘಟಕದಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಬಳಿಕ ಕೃಷಿ ಇಲಾಖೆಯ ಎ.ಡಿ ಗುರುನಾಥ್ ಹಾಗೂ ಎ.ಓ ಅಮರೇಶ್ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ ನಷ್ಟ ಪರಿಶೀಲನೆ ನಡೆಸಿದರು. ಆದರೆ ಈ ತನಕ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ವಿಷಾದನೀಯ,” ಎಂದು ವಿಷಾದ ವ್ಯಕ್ತಪಡಿಸಿದರು.

ಅವರು ಮುಂದುವರಿದು, “ತಾಲೂಕಿನಲ್ಲಿ ಅನೇಕ ಕಂಪನಿಗಳು ಲೈಸೆನ್ಸ್ ನವೀಕರಣವಿಲ್ಲದೇ ಬೀಜ ಮಾರಾಟ ಮಾಡುತ್ತಿವೆ. ಕಾಳಸಂತೆಯಲ್ಲಿ ಅನಧಿಕೃತ ವ್ಯಾಪಾರ ನಡೆಯುತ್ತಿದೆ. ಅಧಿಕಾರಿಗಳ ಮೌನದಿಂದ ರೈತರು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ನಕಲಿ ಬೀಜ ಮಾರಾಟ ಮಾಡಿದ ಕಂಪನಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ,” ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಕೃಷ್ಣ ಮಾರ್ಷಲ್, ಉಪಾಧ್ಯಕ್ಷ ಹೊಳೆಯಪ್ಪ ಊಟಕನೂರು, ಜನಸೇವಾ ಫೌಂಡೇಶನ್ ತಾಲೂಕು ಅಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ, ಹನುಮಂತ ಸೀಕಲ್, ಬಸವರಾಜ ನಾಯಕ, ಮಾರುತಿ ಚಿಕ್ಕಸೂಗೂರು, ನರಸಪ್ಪ ಜೂಕೂರು, ಸಿದ್ದರೆಡ್ಡಿ, ರಾಜಾ ಸಾಬ್ ನೀರಮಾನ್ವಿ, ಹಸನ್ ಚೀಕಲಪರ್ವಿ, ಮೌಲಾ ಸಾಬ್, ಗೋಕುಲ ಸಾಬ್, ಅಜೀತ್ ಸೇರಿದಂತೆ ನೂರಾರು ರೈತರು ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

