ಜನಾತ ಹೌಸ್ ಕಾಲೋನಿಯಲ್ಲಿ ಗುಂಪು ಘರ್ಷಣೆ – ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ.
ಮಾನ್ವಿ ನ.19

ಪಟ್ಟಣದ ಹೊರವಲಯದ ಚೀಕಲಪರ್ವಿ ರಸ್ತೆ ಪ್ರದೇಶದಲ್ಲಿರುವ ಜನಾತ ಹೌಸ್ ಕಾಲೋನಿಯಲ್ಲಿ ಅಲ್ಪ ಕಾರಣಕ್ಕಾಗಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯ ಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಸಮಾರಂಭದಲ್ಲಿ ಹಾಕಲಾಗಿದ್ದ ಧ್ವನಿ ವರ್ಧಕದಿಂದ ಬಂದ ಹಾಡಿಗೆ ಮಕ್ಕಳು ನೃತ್ಯ ಮಾಡಿದ್ದಕ್ಕೆ ಒಂದು ಗುಂಪು ವಿರೋಧ ವ್ಯಕ್ತಪಡಿಸಿದ ಪರಿಣಾಮವಾಗಿ ಆರಂಭವಾದ ವಾಗ್ವಾದ ಕ್ಷಣಾರ್ಧದಲ್ಲಿ ದೊಡ್ಡ ಜಗಳಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆ ನಡೆದಿದೆ ಎಂದು ತಿಳಿದು ಬಂದಿದೆ.

ಗಲಾಟೆಯ ವೇಳೆ ಜಗಳವನ್ನು ತಡೆ ಹಿಡಿಯಲು ಮುಂದಾದ ಪುರುಷರು ಹಾಗೂ ಮಹಿಳೆಯರೂ ಸಹ ಸಣ್ಣ ಪುಟ್ಟ ಗಾಯಗಳಿಗೆ ಒಳಗಾಗಿದ್ದು, ಗಾಯಗೊಂಡ ಎಲ್ಲರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಘಟನೆಯ ನಂತರ ಮಾನ್ವಿ ಪೊಲೀಸ್ ಠಾಣೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದು, ಎರಡೂ ಗುಂಪಿನವರ ದೂರು ಹಾಗೂ ಪ್ರತಿ ದೂರುಗಳನ್ನು ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮಕ್ಕಳ ನೃತ್ಯ ವಿಚಾರವೇ ಜಗಳಕ್ಕೆ ಮೂಲ ಕಾರಣ ಎನ್ನುವ ಸುಳಿವುಗಳು ಲಭಿಸಿವೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
