“ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಮೆಚ್ಚಿ ಪ್ರಕಟಿಸಿದ ಎಚ್ ಅಲ್ಲಿಸಾಬ್ ಅವರ ಕನ್ನಡ ನಿಘಂಟು ‘ಸಟೀಕ ಶಬ್ದ ಮಂಜರಿ ಕೋಶವು’ ✍️ ಡಿ.ಶಬ್ರಿನಾ ಮಹಮದ್ ಅಲಿ”…..

“ಟೀಕೆಗಳು ಸಾಯುತ್ತವೆ; ಮಾಡಿದ ಒಳ್ಳೆಯ ಕೆಲಸಗಳು ಉಳಿಯುತ್ತವೆ” ಎಂಬ ಕುವೆಂಪು ಅವರ ಈ ಮಾತಿಗೆ ಸಾಕ್ಷೀಭೂತವಾಗಿ ಎಚ್.ಅಲ್ಲಿಸಾಬ್ ಅವರ ವಿರಚಿತ,ಬೆಳೆಗೆರೆ ಕೃಷ್ಣಶಾಸ್ತ್ರೀಜಿಯವರ ಮನದಾಶಯದಂತೆ ‘ಶ್ರೀ ಶಾರದ ಮಂದಿರ ವಿದ್ಯಾಸಂಸ್ಥೆ’ಯ ಗ್ರಂಥದಾನದಡಿಯಲ್ಲಿ ‘ಅಭಿನವ’ ಪ್ರಕಾಶನದಿಂದ ಪ್ರಕಟಣೆಗೊಂಡ ‘ಸಟೀಕ ಶಬ್ದ ಮಂಜರಿ ಕೋಶವು’ ನಿಂತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಾರಣ,ಕನ್ನಡದ ಒಂದು ಅತ್ಯಮೂಲ್ಯವಾದ ಈ ನಿಘಂಟಿನ ಪುಟಗಳನ್ನು ತೆರೆಯುತ್ತಾ ಹೋದಂತೆ ಮನಸ್ಸು ಭಾರವಾಗುತ್ತಾ ಹೋಯಿತು! ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಪಡಬೇಕಾದ ಇಂತಹ ಕೃತಿಯೊಂದನ್ನ ಸಾಕ್ಷಿಗಳಿಲ್ಲದ ಅಪವಾದಗಳಿಂದ ಮೂಲೆಗುಂಪಾಗಿಸುವ ಪ್ರಯತ್ನ ಆಗಿರುವುದ ಕಂಡು ಹೀಗೂ ಉಂಟೇ? ಈ ನೆಲಕಿಲ್ಲದ ಅಸಹನೆಯ ಭಾವ ಮೂಡಿದ್ದು ಹೇಗೆ? ಎಂಬ ಅನೇಕ ಪ್ರಶ್ನೆಗಳು ನನ್ನೊಳಗೆ ತಾಂಡವವಾಡಿದವು! ಕೃತಿಯ ಓದು ಪೂರ್ಣ ಮುಗಿಯುವ ಹೊತ್ತಿಗೆ ಕುವೆಂಪು ಅವರ ಈ ಮೇಲಿನ ಸಾಲುಗಳು ನೆನಪಾಗಿ ಮನಸ್ಸನ್ನು ಹಗುರಾಗಿಸಿದವು. ಬೆಳೆಗೆರೆ ಕೃಷ್ಣಶಾಸ್ತ್ರಿಗಳು & ಅಲ್ಲಿಸಾಬ್ ಅವರ ಆಶೀರ್ವಾದದಿಂದ ಈ ಗ್ರಂಥದ ಓದು ಒಂದು ವಿಶೇಷವಾದ ಅನುಭೂತಿ ಆನಂದ ನೀಡಿತು. ಅದನ್ನ ತಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಮಾಡುತಿರುವೆ.

🌷ಕೃತಿಕಾರರಾದ ಎಚ್.ಅಲ್ಲಿಸಾಬ್ ಅವರ ಪರಿಚಯ🌷

ಹೆಚ್ ಅಲ್ಲಿಸಾಬ್ ಹುಟ್ಟಿದ್ದು 9 ಆಗಸ್ಟ್ 1907 ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ. ಅಪ್ಪರ್ ಸೆಕೆಂಡರಿ ಮತ್ತು ಕನ್ನಡ ಪಂಡಿತ ಶಿಕ್ಷಣ, ಪ್ರಾಥಮಿಕ ಶಾಲಾ ಶಿಕ್ಷಕರಾಗಿ 1934 ರಿಂದ 1965 ರವರೆಗೆ ಸೇವೆ. ನೂರ್ ಜಹಾನ್, ನವಾಬ್ ನಂದಿನಿ,ಸಂಗೊಳ್ಳಿ ರಾಯಣ್ಣ, ಸೊಹ್ರಾಬ್ ರುಸ್ತುಂ ಮುಂತಾದ ಸಂಗೀತ ನಾಟಕಗಳ ಪ್ರದರ್ಶನ ಸಟೀಕ ಶಬ್ದಮಂಜರಿ ಕೋಶ’ರಚನೆ. ನಿಧನ: 6/ 12/ 1983 ರಂದು.

🌹ಈ ನಿಘಂಟಿನ ಪ್ರಕಟಣೆಗೆ ಪ್ರೇರಣೆಯಾದ ಬೆಳೆಗೆರೆ ಕೃಷ್ಣಶಾಸ್ತ್ರಿಗಳು& ಎಚ್.ಅಲ್ಲಿಸಾಬ್ ಅವರ ಮೊದಲ ಭೇಟಿ:🌹

ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಬರೆಯುತ್ತಾರೆ, ಸುಮಾರು 1943ನೇ ಇಸ್ವಿ, ನಾನು ಆಗ ಹೆಗ್ಗೆರೆಯಲ್ಲಿ ಟೆಂಪರರಿ ಟೀಚರ್ ಆಗಿ ಸೇರಿದ್ದೆ. ನಮಗೆ ಜಿ ಸಿದ್ದಯ್ಯನವರು ಹೆಡ್ ಮಾಸ್ಟರ್ ಆಗಿದ್ದರು. ಅವರು ಒಂದು ದಿನ ನನ್ನನ್ನು ಕರೆದು ಮಲ್ಲಪ್ಪನಹಳ್ಳಿಯಲ್ಲಿ ‘ಅಲ್ಲಿಗ’ ಎಂಬುವನಿದ್ದಾನೆ ಅವನ ಹತ್ತಿರ ಒಂದು ಪುಸ್ತಕವಿದೆ ನೀನು ಹೋಗಿ ನೋಡಿಕೊಂಡು ಬಾ ಎಂದರು. ನಾನು ಯಾವ ಪುಸ್ತಕ ಸರ್ ಎಂದು ಕೇಳಿದ್ದಕ್ಕೆ,ನಾನು ಹೇಳೋದಿಲ್ಲ ನೀನೇ ನೋಡಿ ಬಂದು ಹೇಳು ಎಂದರು. ಸಿದ್ದಯ್ಯನವರು ಹೇಳುತ್ತಾರೆಂದರೆ ಅದು ಬಹಳ ಮೌಲಿಕವಾದದ್ದೆ ಇರಬೇಕೆಂದು ಒಂದು ಶನಿವಾರ ಮಲ್ಲಪ್ಪನಹಳ್ಳಿಗೆ ಹೊರಟೆ. ಹೆಗ್ಗೆರೆಯಿಂದ ಸುಮಾರು 15 ,20 ಮೈಲಿ ದೂರದ ದಾರಿ ಆಗ ಬಸ್ಸುಗಳಿರಲಿಲ್ಲ. ಕಾಲ್ನಡಿಗೆಯಲ್ಲೇ ನಡೆದು ಸಂಜೆ ಅಲ್ಲಿಸಾಬ್ ರ ಮನೆ ಮುಟ್ಟಿದೆ. ವಾಕಿಂಗ್ ಹೋಗಿದ್ದ ಅಲ್ಲಿ ಸಾಬ್ ಸ್ವಲ್ಪ ಹೊತ್ತಿನ ನಂತರ ಬಂದರು. ಅವರ ಜೊತೆಗೆ ಮಾತನಾಡುತ್ತಿದ್ದಂತೆ ತಿಳಿದುಬಂದ ಸಂಗತಿ ಎಂದರೆ ಅಲ್ಲಿ ಸಾಬ್ ಅವರು ಸಿದ್ದಯ್ಯನವರು ಬಹಳ ಆತ್ಮೀಯ ಸ್ನೇಹಿತರು ಹೋಗೋ ಬಾರೋ ಎನ್ನುವಷ್ಟು ಸಲಗೆ ಅವರಿಬ್ಬರಲ್ಲಿತ್ತು. ಅಲ್ಲಿ ಸಾಬ್ ಅವರು ಸಹ ಪ್ರೈಮರಿ ಸ್ಕೂಲ್ ಮೇಷ್ಟ್ರಾಗಿದ್ದರು.

ಅವರೊಡನೆ ಮಾತನಾಡುತ್ತಾ ಸಿದ್ದಯ್ಯನವರು ಹೇಳಿದ ಪುಸ್ತಕದ ಕುರಿತು ಪ್ರಸ್ತಾಪಿಸಿದೆ ಅದಕ್ಕ ಅವರು “ಹಂಗಂದನೋ ಸಿದ್ದುಗ” ಎಂದರು ಆ ಮಾತಿನಲ್ಲಿ ಅವರಿಬ್ಬರಲ್ಲಿದ್ದ ವಿಶ್ವಾಸ ಸರಳತೆ ಸಲಿಗೆ ಕಾಣುತ್ತಿತ್ತು. ರಾತ್ರಿ ಊಟವಾದ ಮೇಲೆ ಮರದ ಪೆಟ್ಟಿಗೆಯೊಂದನ್ನು ತಂದು ನನ್ನ ಮುಂದಿಟ್ಟರು. ಅದಕ್ಕೆ ಬೀಗ ಹಾಕಿದ್ದು ಅವರೇ ಅದರ ಬೇಗ ತೆಗೆದು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಪುಸ್ತಕವನ್ನು ಬಿಚ್ಚಿ ನನ್ನ ಕೈಗೆ ಕೊಟ್ಟು ಇದು ನೋಡಪ್ಪ ಎಂದರು. ಸುಮಾರು 500 ಪುಟಗಳ ಕೈಬರಹದ ಎಕ್ಸೈಸ್ ಪುಸ್ತಕ ಅದು ಪ್ರಿಂಟ್ ಆದುದಲ್ಲ ಎಲ್ಲಿಯೂ ತಿದ್ದಿರುವ ಹೊಡೆದು ಹಾಕಿರುವ ಗುರುತುಗಳಿರಲಿಲ್ಲ ಅಚ್ಚುಕಟ್ಟಾಗಿ ಸ್ಪುಟವಾಗಿ ಬರೆಯಲಾಗಿತ್ತು. ಅದೇನೆಂದು ಓದಲು ಹೋಗಲಿಲ್ಲ ಸುಮ್ಮನೆ ನೋಡಿ ಇದು ಯಾವ ಪುಸ್ತಕ ಸರ್ ಕೇಳಿದೆ, “ಇದೊಂದು ನಿಘಂಟು ಕಣಪ್ಪ” ಎಂದರು. ತಕ್ಷಣಕ್ಕೆ ನನ್ನ ಮನಸ್ಸಿಗೆ ಬಂದ ವಿಚಾರ ಪ್ರೈಮರಿ ಶಾಲೆ ಮೇಷ್ಟ್ರುಗಳಿಗೆ ಆಗ ಎಂಟು ರೂಪಾಯಿನಿಂದ ಸಂಬಳ ಶುರುವಾಗುತ್ತಿತ್ತು ಡಿಕ್ಷನರಿ ಬೇಕೆನಿಸಿದೆ ಕೊಳ್ಳಲು ಕಾಸ್ ಇಲ್ಲ ಅದಕ್ಕಾಗಿ ಯಾವುದು ಡಿಕ್ಷನರಿಯಿಂದ ಕಾಪಿ ಮಾಡಿ ಇಟ್ಟುಕೊಂಡಿದ್ದಾರೆ ಎಂಬುದಾಗಿತ್ತು.

ಇದನ್ನು ಯಾವುದರಿಂದ ಬರೆದುಕೊಂಡಿರಿ ಸರ್ ಎಂದು ಕೇಳಿದೆ ತಕ್ಷಣ ಅವರು ಬಲಗೈನಿಂದ ತಲೆಗೆ ಬಡಿದುಕೊಂಡು ‘ಇಲ್ಲಿಂದ ಕಣಪ್ಪ’ ಎಂದರು. ಹೌದಾ ಸರ್ ನೀವೇ ಬರೆದ್ರಾ ಮತ್ತಷ್ಟು ಅಚ್ಚರಿಯಿಂದ ಕೇಳಿದೆ ‘ಹೂ ಕಣಪ್ಪ’ ಎಂದರು. ಅವರ ಮಾತಿನಲ್ಲಿ ಎಳ್ಳಷ್ಟು ಅಹಂ ಆಗಲಿ ಗರ್ವವಾಗಲಿ ಕಾಣುತ್ತಿರಲಿಲ್ಲ. ಎಷ್ಟು ಶಬ್ದಗಳಿವೆ ಸರ್ ಇಲ್ಲಿ ಕುತೂಹಲದಿಂದ ಕೇಳಿದೆ ಒಂದು 20,000 ಇರಬಹುದು ಅಪ್ಪ ಎಂದರು. ಅದು ದೊಡ್ಡದೇನಲ್ಲ ಎಂಬ ಭಾವನೆಯಿಂದ ವಿನಯ ಸಜ್ಜನಿಕೆ ಎಂಬುದು ಅವರ ಪ್ರತಿಯೊಂದು ಶಬ್ದದಲ್ಲಿ ಕಾಣುತ್ತಿತ್ತು. ನನಗೆ ಪರಮಾಶ್ಚರ್ಯವಾಯಿತು ಹೆಂಗೆ ಬರೆದ್ರಿ ಸರ್, ಹೆಂಗೋ ಅಂಗಿಷ್ಟು ಇಂಗಿಷ್ಟು ಪುರುಸೊತ್ತಾದ ಆದಗೆಲ್ಲ ಬರೆದೆ ಬಿಡಪ್ಪ ಎಂದರು. ನಮ್ಮ ನಿಘಂಟು ರಚನೆಗೆ ದೊಡ್ಡ ದೊಡ್ಡ ವಿದ್ವಾಂಸರನ್ನ ನೇಮಿಸುತ್ತಾರೆ ಅದಕ್ಕೊಂದು ಸಮಿತಿ ಸ್ಥಳ ಲಕ್ಷಾಂತರ ರೂಪಾಯಿ ಹೀಗೆಲ್ಲ ಇರುತ್ತದೆ ಆದರೆ 20,000 ಶಬ್ದಗಳ ನಿಘಂಟನ್ನು ಹಳ್ಳಿಯ ಮೂಲೆಯೊಂದರಲ್ಲಿ ಕುಳಿತು ಪ್ರೈಮರಿ ಸ್ಕೂಲ್ ಮೇಷ್ಟ್ರು ಮಾಡಿದ್ದಾರೆ ಎಂದರೆ ಅದು ಆಶ್ಚರ್ಯಕರವಾದದ್ದೇ. ಮಾರನೇ ಬೆಳಿಗ್ಗೆ ಸಿದ್ದಯ್ಯನವರಿಗೆ ಈ ವಿಷಯ ತಿಳಿಸಿದೆ ಅವರು ಹೇಳಿದರು “ನೋಡಿದಿಯಾ ಅಲ್ಲಿಗನನ್ನು ಅದಕ್ಕೆ ಹಳ್ಳಿಮೇಷ್ಟ್ರು ಅಂತ ತಾತ್ಸಾರ ಮಾಡಬಾರದು” ಎಂದು ಹೇಳಿದರು. ನಿಸ್ಬಾರ್ಥ ಎರಡು ಮನಸ್ಸುಗಳ ಮೊದಲ ಭೇಟಿಯ ಪ್ರಭಾವವೇ ಇಂದು ನಾವು ಹಿಡಿದಿರುವ ಈ ಹೊತ್ತಿಗೆ.

❤️ಎರಡು ಸುಮನಸ್ಸುಗಳ ನಿಸ್ವಾರ್ಥಸೇವೆಗೆ ಬಂದ ಅಪವಾದ & ಆದ ಅವಮಾನ!🤗

ಎಚ್‌.ಅಲ್ಲಿಸಾಬ್ ಅವರ ಈ ಕೃತಿಯ ಪ್ರಕಟಣೆಯ ಜವಾಬ್ದಾರಿಯನ್ನು ಸ್ವಇಚ್ಛೆಯಿಂದ ಶಾಸ್ತ್ರೀಜಿಯವರು ವಹಿಸಿಕೊಂಡು ವಿದ್ವಾಂಸರಾದ ಮಾನ್ಯ ಚತುರ್ವೇದಿಯವರು ಒಳಗೊಂಡಂತೆ ಅನೇಕ ಗಣ್ಯಾತೀಗಣ್ಯರ ಸಮ್ಮುಖದಲ್ಲಿ ಕೃತಿ ಬಿಡುಗಡೆ ಮಾಡಿಸಿದರು. ಕೃತಿ ೩ ನೇ ಮುದ್ರಣವೂ ಕಂಡಿತು.ಜಗತ್ತನ್ನು ಬೆಳಗುವ ಸೂರ್ಯನಿಗೂ ಗ್ರಹಣ ತಪ್ಪಿದ್ದಲ್ಲ’ ಎಂಬ ಮಾತಿನಂತೆ ಎರಡು ನಿರ್ಮಲ ಮನಸ್ಸುಗಳ ನಿಸ್ವಾರ್ಥ ಸೇವೆಗೆ ಅಗ್ನಿಪರೀಕ್ಷೆ ಎದುರಾಯಿತು. ಶ್ರೀ ಕಾರ್ತಿಕ್ ಎಂಬುವವರು, 26 ಫೆಬ್ರವರಿ 2012ರ ಭಾನುವಾರದ ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಲೇಖನದಲ್ಲಿ, ‘ಎಚ್. ಅಲ್ಲಿಸಾಬ್ ಅವರು ಪ್ರತಿ ಮಾಡಿಕೊಂಡಿದ್ದನ್ನೇ ಸ್ವತಂತ್ರ ನಿಘಂಟು ಎಂದು ಸರಿಯಾಗಿ ಪರಿಶೀಲಿಸಿದೆ ಹಚ್ಚು ಮಾಡಿರುವುದು ಶೋಚನೀಯ ಅಂಶವಾಗಿದೆ. ಅಲ್ಲಿಸಾಬರು ಇದರ ಪ್ರತಿಕಾರರು. ಇದನ್ನು ಸರಿಯಾಗಿ ಗಮನಿಸಿದೆ ಹಚ್ಚು ಮಾಡಿಸಲಾಗಿದೆ ಇದು ಖಂಡಿತ ಸಮರ್ಥನೀಯವಲ್ಲ. ನಮ್ಮ ಸಂಶೋಧಕರು ಇದನ್ನು ಇನ್ನು ಮೇಲಾದರೂ ವಸ್ತುನಿಷ್ಠವಾಗಿ ಪರಿಶೀಲಿಸಬೇಕಾಗಿದೆ. ಅಲ್ಲಿಸಾಬ್ ಅವರ ಪ್ರತಿ, ಗಂಗಾಧರ ಮಡಿವಾಳೇಶ್ವರ ತುರಮರಿ ಅವರ ‘ಸಟೀಕ ಶಬ್ದಮಂಜರಿಕೋಶದ’ ಯಥಾವತ್ ನಕಲಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಇದನ್ನು ಓದಿದ ನಂತರ ಡಾ|ಚಿದಾನಂದಮೂರ್ತಿ ಅವರು ಇದೇ ಅಭಿಪ್ರಾಯವನ್ನು ಸಮರ್ಥಿಸಿದ್ದನ್ನು ಗಮನಿಸಿದ ಸಂಬಂಧಿತ ಎಲ್ಲರಿಗೂ ಆಘಾತವಾಯಿತು.

ಈ ಅಪವಾದದಿಂದ ಶಾಸ್ತ್ರೀಗಳ ಮನಸ್ಸು ನೋವಿನಮಡುವಾಗಿಬಿಟ್ಟಿತು. ಆ ಸಮಯದಲ್ಲಿ ಶಾಸ್ತ್ರೀಗಳು ಬರೆಯುತ್ತಾರೆ, ‘ಹಳಗನ್ನಡ ಕಾವ್ಯದ ಆಳವಾದ ಜ್ಞಾನವಿದ್ದ ಅಲ್ಲಿಸಾಬ್ ಅವರ ನಿಘಂಟಿನ ಪ್ರತಿ ನೋಡಿದಾಗ ನನಗಾದ ಅನುಭವ ಮರೆಯಲಾಗದಂತಹದ್ದಾಗಿತ್ತು. ಅಷ್ಟೇಯಲ್ಲದೇ ಅವರು ಅನೇಕ ಬಾರಿ ಹಲವು ಹಳ್ಳಿಗಳಲ್ಲಿ ಐದು ದಿನಗಳ ವ್ರತದಲ್ಲಿದ್ದು,ಕುಮಾರವ್ಯಾಸ ಭಾರತದ ವಿರಾಟಪರ್ವದ ಪಾರಾಯಣ ಮಾಡುತ್ತಿದ್ದರು. ತತ್ಫಲವಾಗಿ ಮಳೆ ಬಂದು ಗ್ರಾಮಸ್ಥರು ಅವರನ್ನು ಮೆರವಣಿಗೆ ಮಾಡಿದ್ದನ್ನು ನಾನು ಕಂಡಿದ್ದೇನೆ. ಅವರ ಇಂಥ ಸಮಾಜ ಸೇವಾ ನಿಷ್ಠೆಯ ಇನ್ನೊಂದು ಸಂಕೇತ ಅವರು ಬರೆದ ಶಬ್ದಕೋಶ. ಅದನ್ನು ಪ್ರಕಟಿಸುವ ಇಚ್ಛೆಯು ಅವರಿಗೆ ಇರಲಿಲ್ಲ ಎಂಬುದು ಅವರ ನಿಸ್ಪೃಹತೆಯನ್ನು ಸೂಚಿಸುತ್ತಾದೆ. ಕೇವಲ ಆತ್ಮತೃಪ್ತಿಗಾಗಿ ಮತ್ತು ತಮ್ಮಂತ ಹಳಗನ್ನಡ ಕಾವ್ಯ ಭಾಷೆಗಳ ಅನುಕೂಲಕ್ಕಾಗಿ ಮಾಡಿಕೊಂಡ ಏರ್ಪಾಡು ಇದಾಗಿತ್ತು. ಅವರ ಸಾತ್ವಿಕತೆಯ ಪರಿಚಯವಿದ್ದ ನಾನು ಅದನ್ನು ಪ್ರಕಟಿಸುವ ಉಪಾದ್ವಾಪಕ್ಕೆ ಕೈ ಹಾಕಿ ಅವರಿಗೆ ಅಪಚಾರ ಮಾಡಿದೆ’ ಎಂದು ಮಮ್ಮಲ ಮರುಗಿ ಒಲ್ಲದ ಮನದಲಿ ಸಾರ್ವಜನಿಕ ವಿಷಾದ ವ್ಯಕ್ತಪಡಿಸಿದರು. ಪ್ರಕಾಶಕರಾದ ಅಭಿನವದ ರವಿಕುಮಾರ್ ಸರ್ ಅವರು ಡಾ.ಚಿದಾನಂದ ಮೂರ್ತಿಯವರ ವಿಜಯ ಕರ್ನಾಟಕ ಪತ್ರಿಕೆಯ ಲಿ ಪ್ರಕಟವಾದ ‘ಸತ್ಯವನ್ನು ಸಾರಿದ ಲೇಖನ’ದ (ಕಾರ್ತಿಕ್ ಅವರ ಅಪವಾದದ ಲೇಖನ ಕುರಿತಂತೆ)ಪ್ರಭಾವದಿಂದ ತಮ್ಮಿಂದ ತಪ್ಪಾಗಿದೆ ಎಂದು ಪತ್ರಿಕೆಗೆ ಪತ್ರ ಬರೆದು ಮಾರುಕಟ್ಟೆಗೆ ನೀಡಿದ ಗ್ರಂಥಗಳನ್ನು ಹಿಂಪಡೆದರು. ಇಷ್ಟನ್ನು ಓದುವ ಹೊತ್ತಿಗೆ ನನ್ನ ಕಣ್ಣುಗಳಿಗೆ ಕತ್ತಲು ಕವಿದಂತೆ ಭಾಸವಾಯಿತು!

🌖ಬೆಳಕಿಗಂಟಿದ ಗ್ರಹಣವನ್ನು ಕಳೆಯುವ ಪ್ರಯತ್ನಕೆ ಯಶಸ್ಸು.🌞

ಕತ್ತಲಿನ ಅವಧಿ ಮುಗಿಯಿತು,ಈಗ ಬೆಳಕಿನ ಸರದಿ. ಎಚ್.ಅಲ್ಲಿಸಾಬ್ ಅವರ ಈ ಕೃತಿ ನಕಲೆಂದು ಒಪ್ಪದ ಮನಸ್ಸುಗಳು ಸುಮ್ಮನೆ ಕೂರದೇ ಕಳಂಕ ತೊಡೆದುಹಾಕುವಲ್ಲಿ ಕಾರ್ಯನಿರತರಾದವು. ಪ್ರಕಾಶಕರಾದ ರವಿಕುಮಾರ್ ಸರ್ ಅವರು,ಹಿರಿಯ ಇತಿಹಾಸಕಾರರಾದ ಷ.ಶೆಟ್ಟರ್, ಅವರನ್ನು ಭೇಟಿ ಮಾಡಿದಾಗ,” ನೀವು ವಾಪಸ್ ತೆಗೆದುಕೊಳ್ಳ ಬಾರದಿತ್ತು,ಯಾವಾಗಲೂ ಹಿಂದಿನ ನಿಘಂಟನ್ಮುಆಧರಿಸಿಯೇ ಹೊಸ ನಿಘಂಟುಗಳು ಪ್ರಕಟಗೊಳ್ಳುವುದು. ನೀವು ಹಿಂಪಡೆದುಕೊಳ್ಳುವ ಅವಶ್ಯಕತೆ ಇರಲಿಲ್ಲ” ಎಂದರಂತೆ. ಅವರ ಆ ಮಾತಿಗೆ ಬಲ ತುಂಬುವಂತೆ ಜಿ.ವೆಂಕಟಸುಬ್ಬಯ್ಯನವರು ಸಹ ‘ಇದು ನಕಲಲ್ಲ’ ಎಂದಿದ್ದರ ಪರಿಣಾಮದ ಫಲವಾಗಿ ಸತ್ಯಶೋಧನೆಯ ಕಾರ್ಯ ಪ್ರಾರಂಭಿಸಲು ರವಿಕುಮಾರ್ ಸರ್ ಅವರೊಂದಿಗೆ ಅನೇಕ ಕನ್ನಡದ ಸುಮನಸ್ಸಗಳು ಜೊತೆಯಾದವು. ಅದರಲ್ಲಿ ಗಟ್ಟಿಯಾಗಿ ನಿಂತು ಎರಡು ನಿಘಂಟುಗಳ ಅಧ್ಯಯನ ಮಾಡಿದವರು ಶ್ರೀಪಾದ ಪೂಜಾರ್ ಅವರು. ಪ್ರತಿ ಅಕ್ಷರ ಕೂಲಂಕುಷವಾಗಿ ತುಲನೆ ಮಾಡಿದ ಶ್ರೀಪಾದರಿಗೆ ಎಚ್.ಅಲ್ಲಿಸಾಬ್ ಅವರ ನಿಘಂಟು ಗಂಗಾಧರ ಅವರ ನಿಘಂಟಿನ ನಕಲಲ್ಲ ಎಂಬುದು ಸ್ಪಷ್ಟವಾಗಲು ತುಂಬಾ ಸಮಯ ಬೇಕಾಗಲಿಲ್ಲ. ಸಾಬೀತಿಗಾಗಿ ಎರಡರಲ್ಲಿರುವ ವ್ಯತ್ಯಾಸಗಳ ಕಂಡುಕೊಂಡು ಯಾವುದೇ ಆಯಾಮದಲ್ಲೂ ಅಲ್ಲಿಸಾಬ್ ಅವರ ನಿಘಂಟು ಗಂಗಾಧರ ಅವರ ನಿಘಂಟಿನ ತದ್ವತ್ ನಕಲಲ್ಲ ಎನ್ನುವುದನ್ನ ಖಚಿತಪಡಿಸಿಕೊಂಡರು. ಇದರಿಂದ ಸಂತಸಗೊಂಡ ರವಿಕುಮಾರ್ ಅವರು ಹೆಮ್ಮೆಯಿಂದ, “ಆಧುನಿಕ ಕಾಲದ ಯಾವ ವ್ಯವಸ್ಥೆ,ಸೌಕರ್ಯ & ಗೌರವಧನವಿಲ್ಲದೆ ಮಾಡಿದ ಎಚ್.ಅಲ್ಲಿಸಾಬ್ ಅವರ ಕೈಂಕರ್ಯವೂ ಜನಪರವಾದುದಾಗಿದೆ ಮಾತ್ರವಲ್ಲ,ಸ್ಪಟಿಕಶಲಾಕದಂತಿದೆ”ಎಂದು ತಮ್ಮ ಮಾತುಗಳಲ್ಲಿ ತಿಳಿಸಿದ್ದಾರೆ.

ಕೂಲಂಕೂಷ ಅಧ್ಯಯನದ ನಂತರ ಶ್ರೀಪಾದ ಪೂಜಾರ್ ಅವರು ತಮ್ಮ ಅನೇಕ ಸ್ಪಷ್ಟ ಕಾರಣಗಳೊಂದಿಗೆ ಈ ನಿಘಂಟಿನ ನಿರೂಪಣೆ ಮಾಡಿದ್ದಾರೆ ಹಾಗೂ ಅದನ್ನ ಪ್ರಕಾಶಕರಾದ ರವಿಕುಮಾರ್ ಅವರು ಪ್ರಕಟಿಸಿ, ಶಾಸ್ತ್ರೀಗಳ ಜನ್ಮದಿನವಾದ ಮೇ 22, 2023 ರಂದು ಭಾರತೀಯ ವಿದ್ಯಾಭವನ & ಶ್ರೀಶಾರದ ಮಂದಿರದ ಸಹಯೋಗದಲ್ಲಿ ಭಾರತದ ಆತ್ಮಸಾಕ್ಷಿಯಂತಿರುವ ನ್ಯಾಯಮೂರ್ತಿ ಶ್ರೀ.ಎಂ.ಎನ್.ವೆಂಕಟಾಚಲಯ್ಯನವರಿಂದ ಬಿಡುಗಡೆಗೊಳಿಸಿ ನಿಘಂಟಿಗಂಟಿದ ಕಳಂಕವನ್ನ ತೊಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಓದುವ ಸಮಯಕ್ಕೆ,ಪ್ರಾರಂಭದ ಓದಿನಲ್ಲಿ ನನ್ನ ಕಣ್ಣುಗಳಿಗೆ ಕವಿದ ಕತ್ತಲು ಸರಿದು ಬೆಳಕು ಹರಿದಂತೆ ಭಾಸವಾಯಿತು.

ನಿಘಂಟಿನ ಕೊನೆಯ ಪುಟ, ಬೆನ್ನುಡಿಯಲ್ಲಿ, ಪ್ರೊ, ಜಿ‌.ವೆಂಕಟಸುಬ್ಬಯ್ಯ, ಹಿರಿಯ ವಿದ್ವಾಂಸರು “ಅಲ್ಲಿ ಸಾಬ್ ಅವರ ಈ ನಿಘಂಟಿನ ಹಸ್ತ ಪ್ರತಿಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇದು ಒಬ್ಬ ಪ್ರಾಥಮಿಕ ಶಾಲೆಯ ಉಪಾಧ್ಯಾಯನ ಪ್ರಯತ್ನವೆಂದರೆ ಆಶ್ಚರ್ಯವಾಗದೆ ಇನ್ನೇನು? ಇದು ಇನ್ನಾವ ನಿಘಂಟನ್ನು ಅನುಸರಿಸಿ ಮಾಡಿರುವ ಸಂಕಲನವಲ್ಲ. ಹಳಗನ್ನಡದ ಕಾವ್ಯಗಳ ಅಭ್ಯಾಸದಲ್ಲಿ ತಲೆದೂರಿದ ಕ್ಲಿಷ್ಟತೆಯನ್ನು ನಿವಾರಿಸಲು ಮಾಡಿದ ಸ್ವಂತ ಪ್ರಯತ್ನ ಹೆಚ್ಚೆಂದರೆ ಕಿಟೆಲ್ಲರ ನಿಘಂಟನ್ನು ನೋಡಿರಬಹುದು. ಶಾಕಶಕಟ ಮುಂತಾದ ಶಬ್ದಗಳಿಂದ ಅದು ಗೋಚರವಾಗಿರುತ್ತದೆ. ಶಬ್ದ ಮೂಲವನ್ನು ನಿರ್ಧರಿಸುವುದರಲ್ಲಿ ಸಂಸ್ಕೃತದ ಗಾಢವಾದ ಪರಿಚಯ ಇರುವುದು ತಿಳಿಯುತ್ತದೆ. ಶಬ್ದ ಸಂಗ್ರಹ ವಿಫುಲವಾಗಿದೆ ಈಗ ಇರುವ ಹಾಗೆ ಇದು ‘ಕನ್ನಡದ ವಿದ್ವಾಂಸನೊಬ್ಬನು ನಿಘಂಟು ರಚನೆಯಲ್ಲಿ ಆಸಕ್ತನಾಗಿ ಸಿದ್ಧಪಡಿಸಿದ ಮೊದಲ ಹಸ್ತ ಪ್ರತಿ’ ಎಂದು ತಿಳಿಯಬೇಕು ಚಾರಿತ್ರಿಕ ದೃಷ್ಟಿಯಿಂದ ಈ ನಿಘಂಟಿಗೆ ಮಹತ್ವವಿದೆ. ಇದನ್ನು ಬೆಳಕಿಗೆ ತಂದ ಶ್ರೀ ಬೆಳಗೆರೆ ಕೃಷ್ಣ ಶಾಸ್ತ್ರಿಗಳಿಗೆ ನಾಡು ಕೃತಜ್ಞವಾಗಿರಬೇಕು. ಇದು ವಿದ್ಯಾರ್ಥಿಗಳಿಗೂ ಹಳೆಗನ್ನಡ ಕಾವ್ಯಸಕ್ತರಿಗೂ ಉಪಯೋಗವಾಗಲೆಂದು ಆಶಿಸುವೆ”ಎಂದಿರುವುದನ್ನು ಓದಿದಾಗಲಂತೂ ಎತ್ತ ನೋಡಿದರೂ ಪ್ರಕಾಶಮಾನವಾದ ಬೆಳಕು!

‘ಬೆಳೆಗೆರೆ ಕೃಷ್ಣಶಾಸ್ತ್ರಿಗಳು & ಅಲ್ಲಿಸಾಬ್ ಅವರ ನಿಸ್ವಾರ್ಥ ಸೇವೆಗೆ ಕೊನೆಗೂ ಜಯ ಲಭಿಸಿದ ಕಂಡ ನನ್ನ ಮನ,ನಿಘಂಟಿಗಂಟಿದ ಕಳಂಕ ತೊಳೆಯುವಲ್ಲಿ ಸಹಕರಿಸಿದ ಎಲ್ಲಾ ಸುಮನಸ್ಸುಗಳಿಗೆ ಶರಣು ಶರಣಾರ್ಥಿಗಳನ್ನ ಸಮರ್ಪಿಸಿತ್ತು! ಕೊನೆ ಮಾತು,”ಟೀಕೆಗಳು ಸಾಯುತ್ತವೆ,ಮಾಡಿದ ಒಳ್ಳೆಯ ಕೆಲಸಗಳು ಉಳಿಯುತ್ತವೆ”

🌹🙏🌹🙏🌹🌹

ಧನ್ಯವಾದಗಳುಡಿ.ಶಬ್ರಿನಾ ಮಹಮದ್ ಅಲಿ

ಲೇಖಕಿ,ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button