ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವಡವಡಗಿ – ನೇತೃತ್ವದ ಬಣ ಭರ್ಜರಿ ಗೆಲುವು.
ಮುದ್ದೇಬಿಹಾಳ ಡಿ.11


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ 2025-28 ನೇ. ಸಾಲಿನ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸೇರಿ ಎಲ್ಲ 7 ಸ್ಥಾನಗಳಿಗೆ ಹಿರಿಯ ಪತ್ರಕರ್ತ ಡಿ.ಬಿ ವಡವಡಗಿ ಅವರ ನೇತೃತ್ವದ ಬಣಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಒಟ್ಟು 35 ಸದಸ್ಯರ ಘಟಕಕ್ಕೆ 30 ಅರ್ಹ ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಈ ಪೈಕಿ 28 ಸದಸ್ಯರು ಮತದಾನ ಮಾಡಿದರು. ಇದಕ್ಕೂ ಮುನ್ನ ಹಿರಿಯ ಪತ್ರಕರ್ತರಾದ ಕೆ.ಎಂ ರಿಸಾಲ್ದಾರ್, ಅಲ್ಲಾಭಕ್ಷ ನಿಡಗುಂದಿ, ಎಚ್.ಆರ್ ಬಾಗವಾನ ಅವರ ಉಸ್ತುವಾರಿಯಲ್ಲಿ ಅವಿರೋಧ ಆಯ್ಕೆಗೆ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ ವಿರೋಧಿ ಬಣದವರು ಸ್ಪರ್ಧೆಗೆ ಪಟ್ಟು ಹಿಡಿದಿದ್ದರಿಂದ ಚುನಾವಣೆ ಅನಿವಾರ್ಯವಾಯಿತು.


ಸಂಘದ ರಾಜ್ಯ ಕಾರ್ಯಕಾರಿಣಿ ಹಾಗೂ ತಾಲೂಕು ಘಟಕಗಳ ಚುನಾವಣಾ ಉಸ್ತುವಾರಿ ಪ್ರಕಾಶ ಬೆಣ್ಣೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾ ಕಾರ್ಯದರ್ಶಿ ಅವಿನಾಶ ಬಿದರಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಸಂಪೂರ್ಣ ಪಾರದರ್ಶಕ ಪ್ರಕ್ರಿಯೆಯಡಿ ಸುವ್ಯವಸ್ಥಿತವಾಗಿ ಚುನಾವಣೆ ನಡೆಯಿತು.
ನೂತನ ಪದಾಧಿಕಾರಿಗಳು:-

ಅಧ್ಯಕ್ಷರಾಗಿ ಡಿ.ಬಿ ವಡವಡಗಿ (19 ಮತ), ಉಪಾಧ್ಯಕ್ಷರಾಗಿ ಬಸವರಾಜ ಹುಲಗಣ್ಣಿ (19), ಜಿ.ಎನ್ ಬಿರಗೊಂಡ (ಮುತ್ತು-ಢವಳಗಿ ಭಾಗ-14 ಮತ), ಕಾರ್ಯದರ್ಶಿಗಳಾಗಿ ಲಾಡ್ಲೇಮಶ್ಯಾಕ ಶೇಖ್ (ನದಾಫ-19 ಮತ), ಕಾಶಿನಾಥ ಬಿರಾದಾರ (ನಾಲತವಾಡ ಭಾಗ-21 ಮತ) ಪಡೆದು ಜಯಭೇರಿ ಬಾರಿಸಿದರು. ಇದಕ್ಕೂ ಮುನ್ನ ಎಚ್.ಆರ್ ಬಾಗವಾನ ಅವರು ಪ್ರತಿಸ್ಪರ್ಧಿ ಇಲ್ಲದ್ದರಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅವಿರೋಧವಾಗಿ ಮತ್ತು ಅಮೀನಸಾ ಮುಲ್ಲಾ ಅವರು ಪ್ರತಿಸ್ಪರ್ಧಿ ಪುಂಡಲೀಕ ಮುರಾಳ ನಾಮಪತ್ರ ಹಿಂದಕ್ಕೆ ಪಡೆದು ಕೊಂಡಿದ್ದರಿಂದ ಅವಿರೋಧವಾಗಿ ಆಯ್ಕೆ ಗೊಂಡರು.


ಮತ ಎಣಿಕೆಯ ನಂತರ ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಿ ತಾಲೂಕು ಘಟಕಕ್ಕೆ ಪ್ರಮಾಣ ಪತ್ರ ವಿತರಿಸಿದರು.ರಾಜ್ಯ ಮಟ್ಟದ ಸಾಧನೆಗೆ ಸಹಕರಿಸಿ ಆಯ್ಕೆ ಪ್ರಕ್ರಿಯೆ ಮುಕ್ತಾಯದ ನಂತರ ಸರ್ವ ಸದಸ್ಯರ ಸಭೆ ನಡೆಸಿ ಮಾತನಾಡಿದ ಡಿ.ಬಿ ವಡವಡಗಿ, ಎಚ್.ಆರ್ ಬಾಗವಾನ ಅವರು ತಾಲೂಕು ಘಟಕವನ್ನು ರಾಜ್ಯ ಮಟ್ಟದಲ್ಲಿ ಬೆಳೆಸುವ ಮತ್ತು ವರ್ಷ ಪೂರ್ತಿ ಹಲವು ಚಟುವಟಿಕೆ ನಡೆಸಿ ಸಂಘದ ಸಾಧನೆಯನ್ನು ರಾಜ್ಯದೆಲ್ಲೆಡೆ ಪಸರಿಸಲು ಸರ್ವ ಸದಸ್ಯರು ಒಮ್ಮತದಿಂದ ಸಹಕಾರ ನೀಡುವಂತೆ ಮನವಿ ಮಾಡಿ ಚುನಾವಣೆಯಲ್ಲಿ ಸ್ಪರ್ಧೆಯ ಸಂದರ್ಭ ಆಗಿರುವ ಕಹಿ ಘಟನೆಗಳನ್ನು ಮರೆತು ಎಲ್ಲರೂ ಸಹೋದರತ್ವ ಭಾವದಿಂದ ಸಂಘದ ಹಿತ ಕಾಪಾಡಲು, ಒಗ್ಗಟ್ಟು ಪ್ರದರ್ಶಿಸಲು ಕೈಜೋಡಿಸುವಂತೆ ಕೋರಿದರು.

ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಮಕ್ಬುಲ್ ಬನ್ನೆಟ್ಟಿ ಅವರು ಮಾತನಾಡಿ ಸಂಘದ ಬೆಳವಣಿಗೆಗೆ, ಚಟುವಟಿಕೆಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು. ಪತ್ರಕರ್ತರಾದ ಅಲ್ಲಾಭಕ್ಷ ನಿಡಗುಂದಿ, ನೂರೇನಬಿ ನದಾಫ, ಮುತ್ತು ವಡವಡಗಿ, ಸಿದ್ದು ಚಲವಾದಿ, ಹಣಮಂತ ಬಿರಗೊಂಡ, ರಾಜಶೇಖರ ಸಜ್ಜನ, ಈಶ್ವರ ಈಳಗೇರ, ಬಸವರಾಜ ಕುಂಬಾರ, ನೂರಹುಸೇನ ನದಾಫ, ರಿಯಾಜ್ ಮುಲ್ಲಾ, ಮಹೆಬೂಬ ಹಳ್ಳೂರ, ಸಾಗರ ಉಕ್ಕಲಿ, ಈರಯ್ಯ ಹಿರೇಮಠ, ಬಸನಗೌಡ ಪಾಟೀಲ ಸರೂರ, ಕೃಷ್ಣಾ ಕುಂಬಾರ, ಎಚ್.ಬಿ.ಟಕ್ಕಳಕಿ, ಬಂದೇನವಾಜ ಕುಮಸಿ, ರವೀಂದ್ರ ನಂದೆಪ್ಪನವರ್ ಇನ್ನಿತರರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

