ಜಾನಪದ ಕೋಗಿಲೆ ಉಮೇಶ್ ನಾಯಕ್ ಶಾಲಾ ಮುಖ್ಯ ಶಿಕ್ಷಕರು ರಾಜೇಶ್ವರಿ ಮೇಡಂ – ಅವರಿಂದ ವಿಶೇಷ ಸನ್ಮಾನ.
ಗಂಗನಕಟ್ಟೆ ಜ.29

ಕ್ರಾಸ್‌ನಲ್ಲಿರುವ ವಿದ್ಯಾಸಾಗರ ಹೈಯರ್ ಪ್ರೈಮರಿ ಶಾಲೆಯಲ್ಲಿ 27/1/2026 ರಂದು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅತ್ಯಂತ ಉತ್ಸಾಹ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಸ್ಮರಣೀಯ ಕ್ಷಣವಾಗಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಸೃಜನ ಶೀಲತೆ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಪ್ರತಿ ಬಿಂಬಿಸಿದರು.
ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳಾಗಿ ಮಾಯಕೊಂಡದ ಪಿಎಸ್‌ಐ ಶ್ರೀ ಅಜ್ಜಪ್ಪ, ದಾವಣಗೆರೆಯ ಶಿಕ್ಷಣ ತಜ್ಞರಾದ ಶ್ರೀ ವಿಜಯಕುಮಾರ್ ಅಂಗಡಿ, ಚಿನ್ನಸಮುದ್ರದ ಜನಪದ ಗಾಯಕ ಶ್ರೀ ಉಮೇಶ್ ನಾಯಕ್ ಹಾಗೂ ನೇರ್ಲಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಶೇಖರ್ ನಾಯಕ್ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಮನ್ವಂತರ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ವಿಜಯಕುಮಾರ್, ವಿದ್ಯಾಸಾಗರ್ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ರಾಜೇಶ್ವರಿ ಚಿದಾನಂದ ಹಾಗೂ ಆರ್ಯಭಟ ಅಬಾಕಸ್ ಮತ್ತು ವೇದಿಕ್ ಗಣಿತ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದು, ಗುಣಮಟ್ಟದ ಶಿಕ್ಷಣ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಥೆ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
ಗೌರವ ಅತಿಥಿಗಳಾದ ಜನಪದ ಗಾಯಕ ಶ್ರೀ ಉಮೇಶ್ ನಾಯಕ್ ಅವರು “ ಬಾರಿಸು ಕನ್ನಡ ಡಿಂಡಿಮವ” ಎಂಬ ಹಾಡನ್ನು ಹಾಡಿ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ವಿಜಯಕುಮಾರ್ ಅಂಗಡಿ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸುಸಂಘಟಿತ ಕಾರ್ಯಕ್ರಮಕ್ಕಾಗಿ ಅಭಿನಂದಿಸಿ, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣ, ಸಂಸ್ಕೃತಿ ಹಾಗೂ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ಪೋಷಕರಿಗೆ ಮಾತನಾಡುತ್ತಾ, “ನೀವು ಅತ್ಯುತ್ತಮ ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಓದಿಸುತ್ತಿದ್ದೀರಿ. ಇದರ ಹಿಂದೆ ರಾಜೇಶ್ವರಿ ಮೇಡಂ ಅವರ ಶ್ರಮವಿದೆ. ಅವರು ಗಣಿತ ವಿಷಯದಲ್ಲಿ ಅತ್ಯಂತ ನಿಪುಣರು. ಅವರ ಮಾರ್ಗದರ್ಶನದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳು” ಎಂದು ಹೇಳಿದರು.

ನೇರ್ಲಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಶೇಖರ್ ನಾಯಕ್ ಅವರು ಸುಂದರವಾದ ಗೀತೆಯನ್ನು ಹಾಡಿ, “ ಬುದ್ಧಿ ಮಾತ ಕೇಳಿ ಓ ಮುದ್ದು ಮಕ್ಕಳೆ” ಎಂಬ ಹಾಡಿನ ಮೂಲಕ ಅತ್ಯಂತ ಅರ್ಥಪೂರ್ಣ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾಸಾಗರ್ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ರಾಜೇಶ್ವರಿ ಚಿದಾನಂದ ಅವರು ಎಲ್ಲಾ ಗಣ್ಯ ಅತಿಥಿಗಳು ಹಾಗೂ ಉಪಸ್ಥಿತರಿದ್ದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶೈಕ್ಷಣಿಕ ಸಾಧನೆ, ವಿಜ್ಞಾನ ಕ್ಷೇತ್ರ ಹಾಗೂ ಕ್ರೀಡಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

