🚨 ಬ್ರೇಕಿಂಗ್ ನ್ಯೂಸ್, ಉಡುಪಿಯಲ್ಲಿ ಜಿಲ್ಲಾಡಳಿತದ ವಿರುದ್ಧ – ದಲಿತ ಮುಖಂಡರ ಆಕ್ರೋಶದ ಮಹಾಪೂರ..! 🚨
ಉಡುಪಿ ಫೆ.08

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ (IPS) ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದು ಕೊರತೆಗಳ ಸಭೆಯು ಜಿಲ್ಲಾಡಳಿತದ ವೈಫಲ್ಯಗಳ ವಿರುದ್ಧದ ರಣ ಕಹಳೆಯಾಗಿ ಮಾರ್ಪಟ್ಟಿತು. ಜಿಲ್ಲೆಯ ದಲಿತ ಮುಖಂಡರು ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ಹಾಗೂ ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

💢 ಜಿ.ಪಂ. ಸಿ.ಇ.ಓ ಪ್ರತೀಕ್ ಬಾಯಲ್ ವಿರುದ್ಧ ತೀವ್ರ ವಾಗ್ದಾಳಿ:
“ನಾಲಾಯಕ್ ಸಿ.ಇ.ಓ”:-ಸಭೆಯಲ್ಲಿ ಪೆರ್ಡೂರು PDO ಸುಮನಾ ಅವರಿಗೆ ಆದ ಅನ್ಯಾಯದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಅವರು ತನಗಾದ ಅನ್ಯಾಯದ ಬಗ್ಗೆ ಹಿರಿಯಡ್ಕ ಪಿಎಸ್ಐಗೆ ದೂರು ನೀಡಿದ್ದರೂ ಸಹ, ಪಿಎಸ್ಐ ಉದ್ದಟತನ ದಿಂದ ವರ್ತಿಸಿ ಯಾವುದೇ ಕಾನೂನು ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮುಖಂಡರು ದೂರಿದರು.
ಈ ವಿಷಯವನ್ನು ಜಿಲ್ಲಾ ಪಂಚಾಯತ್ ಸಿ.ಇ.ಓ ಗಮನಕ್ಕೆ ತರಲಾಗಿದೆಯೇ ಎಂದು ಸಭೆಯಲ್ಲಿ ಪ್ರಶ್ನಿಸಿದಾಗ, ಮುಖಂಡರು ಸಿ.ಇ.ಓ ಪ್ರತೀಕ್ ಬಾಯಲ್ ವಿರುದ್ಧ ಕೆಂಡಾ ಮಂಡಲವಾದರು. “ದಲಿತ ನೌಕರರಿಗೆ ದೌರ್ಜನ್ಯವಾದಾಗ ನ್ಯಾಯ ದೊರಕಿಸುವುದನ್ನು ಬಿಟ್ಟು, ದೌರ್ಜನ್ಯ ಮಾಡಿದವರ ಜೊತೆಗೆ ಶಾಮೀಲಾಗುವ ಇವರು ಒಬ್ಬ ನಾಲಾಯಕ್ ಸಿ.ಇ.ಓ” ಎಂದು ತೀವ್ರವಾಗಿ ಆಕ್ರೋಶ ಹೊರ ಹಾಕಿದರು.

🚫 ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಒಕ್ಕೊರಲ ಆಗ್ರಹ:-
ಉಡುಪಿ ಜಿಲ್ಲಾಧಿಕಾರಿಗಳು ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ದೌರ್ಜನ್ಯ ನಡೆದ ಸ್ಥಳಗಳಿಗೆ ಭೇಟಿ ನೀಡುತ್ತಿಲ್ಲ ಮತ್ತು ಕೊರಗ ಸಮುದಾಯದ ಅಹೋರಾತ್ರಿ ಧರಣಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ ಮುಖಂಡರು, ಇಂತಹ ಬೇಜವಾಬ್ದಾರಿ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡ ಬೇಕೆಂದು ಒತ್ತಾಯಿಸಿದರು.

🛑 ಲೋಕಾಯುಕ್ತ ಎಸ್.ಐ ರಾಜೇಂದ್ರ ನಾಯಕ್ ವಿರುದ್ಧ ಸಮರ:-
ಪತ್ರಕರ್ತೆ ಆರತಿ ಗಿಳಿಯಾರು ಅವರು ಉಡುಪಿ ಲೋಕಾಯುಕ್ತ ಎಸ್.ಐ ರಾಜೇಂದ್ರ ನಾಯಕ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಅಧಿಕಾರ ದುರುಪಯೋಗ:-
ಉಪಾಧೀಕ್ಷಕರ ಅಧಿಕಾರವನ್ನು ತಾವೇ ಚಲಾಯಿಸುತ್ತಾ ಪತ್ರಕರ್ತರಿಗೆ ನೋಟಿಸ್ ನೀಡಿ ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ.

ದೂರು ಸಲ್ಲಿಕೆ:-
ಈ ಬಗ್ಗೆ ಎಸ್‌ಪಿ ಹಾಗೂ ಬೆಂಗಳೂರು ಲೋಕಾಯುಕ್ತಕ್ಕೆ ಲಿಖಿತ ದೂರು ಸಲ್ಲಿಸುವುದಾಗಿ ಮತ್ತು ರಾಜೇಂದ್ರ ನಾಯಕ್ ಅಮಾನತು ಆಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

🚫 ಹರೀಶ್ ನಾಯ್ಕ್ ಬಡ್ತಿಗೆ ತೀವ್ರ ವಿರೋಧ:-
ಗೃಹ ಸಚಿವರಿಗೆ ದೂರು ಗಂಗೊಳ್ಳಿ ಠಾಣೆಯ ಮಾಜಿ ಪಿ.ಎಸ್.ಐ ಹರೀಶ್ ನಾಯ್ಕ್ ಅವರಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (CRE Cell) ಇನ್ಸ್‌ಪೆಕ್ಟರ್ ಹುದ್ದೆಗೆ ರೂಲ್ 32 ರ ಅಡಿ ಭಡ್ತಿ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.ದೌರ್ಜನ್ಯದ ದೂರು ದಾಖಲಿಸಲು ನಿರ್ಲಕ್ಷ್ಯ ವಹಿಸಿದ ಇತಿಹಾಸವಿರುವ ಇವರ ನೇಮಕದಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ. ರಾಜೇಂದ್ರ ನಾಯ್ಕ್ ಮತ್ತು ಹರೀಶ್ ನಾಯ್ಕ್ ಸಂಬಂಧಿಕರಾಗಿದ್ದು, ಇವರ ಬಡ್ತಿ ಹಿಂಪಡೆಯಲು ಗೃಹ ಸಚಿವರಿಗೆ ದೂರು ನೀಡಲು ತೀರ್ಮಾನಿಸಲಾಯಿತು.

⚖️ ‘ಬಿ’ ವರದಿ ಹಾಗೂ ತನಿಖಾ ವೈಫಲ್ಯಕ್ಕೆ ಆಕ್ಷೇಪ:-
ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸದೆ ‘ಬಿ’ ವರದಿ ಸಲ್ಲಿಸುತ್ತಿರುವುದಕ್ಕೆ ಮುಖಂಡರಾದ ಉದಯ ಕುಮಾರ್ ತಲ್ಲೂರು, ಜಯನ್ ಮಲ್ಪೆ ಮತ್ತು ಶ್ರೀನಿವಾಸ್ ವಡ್ಡರ್ಸೆ ಆಕ್ಷೇಪಿಸಿದರು. ಹನೆಹಳ್ಳಿ ಕೃಷ್ಣ ಶೂಟೌಟ್ ಪ್ರಕರಣವು ಪ್ರಸ್ತುತ ಸಿ.ಓ.ಡಿ (COD) ತನಿಖೆಯಲ್ಲಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

📋 ಪ್ರಮುಖ ಬೇಡಿಕೆಗಳು:-
ತರಬೇತಿ: ದೌರ್ಜನ್ಯ ಕಾಯ್ದೆಗಳ ಬಗ್ಗೆ ಅರಿವಿಲ್ಲದ ಅಧಿಕಾರಿಗಳಿಗೆ ತಕ್ಷಣ ತರಬೇತಿ ನೀಡಬೇಕು.

ಮೀಸಲಾತಿ ರಕ್ಷಣೆ:-
ಮತಾಂತರ ಹೊಂದಿದವರು ಎಸ್.ಸಿ ಪ್ರಮಾಣ ಪತ್ರ ಬಳಸಿ ಸೌಲಭ್ಯ ಪಡೆಯುವುದನ್ನು ತಡೆದು ನೈಜ ದಲಿತರಿಗೆ ನ್ಯಾಯ ಒದಗಿಸ ಬೇಕು.

ಇಲಾಖಾ ನಿರ್ಲಕ್ಷ್ಯ:-
ಸಿ.ಆರ್ ಸೆಲ್‌ನಲ್ಲಿ ಅಧಿಕಾರಿಗಳ ಕೊರತೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.

ಸ್ಥಳೀಯ ಸಮಸ್ಯೆ:-
ಬ್ರಹ್ಮಾವರ ಸರ್ವಿಸ್ ರಸ್ತೆಯಲ್ಲಿ ಅಕ್ರಮ ಪಾರ್ಕಿಂಗ್, ವಡ್ಡರ್ಸೆ ಅಂಬೇಡ್ಕರ್ ಭವನದ ಸಮಸ್ಯೆ ಹಾಗೂ ಗಂಗೊಳ್ಳಿ ಸೊಸೈಟಿ ಮೀನುಗಾರರ ಸದಸ್ಯತ್ವ ಗೊಂದಲಗಳ ಬಗ್ಗೆ ಚರ್ಚಿಸಲಾಯಿತು.

🤝 ಎಸ್‌ಪಿ ಹರಿರಾಮ್ ಶಂಕರ್ ಅವರ ಕಾರ್ಯ ವೈಖರಿಗೆ ಶ್ಲಾಘನೆ:-
ದಲಿತ ಮುಖಂಡರ ಅಹವಾಲುಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಎಸ್‌ಪಿ ಹರಿರಾಮ್ ಶಂಕರ್ ಅವರು, ಬಾಕಿ ಇರುವ ಪ್ರಕರಣಗಳ ಮರುತನಿಖೆಗೆ ಹಾಗೂ ಇತರ ಇಲಾಖೆಗಳ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಿದರು.
ಎಸ್.ಪಿ ಅವರ ಈ ಜನಪರ ನಡೆಯನ್ನು ಸಭೆಯಲ್ಲಿದ್ದ ನೂರಾರು ಮುಖಂಡರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಭೆಯಲ್ಲಿ ಭಾಗವಹಿಸಿದ ಪ್ರಮುಖರು.ಜಯನ್ ಮಲ್ಪೆ, ಸುಂದರ್ ಮಾಸ್ತರ್, ಶ್ಯಾಮ್ ರಾಜ್ ಬಿರ್ತಿ, ಶ್ರೀನಿವಾಸ್ ವಡ್ಡರ್ಸೆ, ಉದಯಕುಮಾರ್ ತಲ್ಲೂರು, ಮಂಜುನಾಥ ಬಾಳ್ಕುದ್ರು, ವಾಸುದೇವ ಮುದ್ದೂರು, ರಮೇಶ್ ಕೋಟ್ಯಾನ್, ಸತೀಶ್ ಕುಂದಾಪುರ, ಗಣೇಶ್ ನೆರ್ಗಿ, ಪರಮೇಶ್ವರ ಉಪ್ಪೂರು, ಚಂದ್ರಮಾ ತಲ್ಲೂರು, ಚಂದ್ರ ಆಲ್ತಾರು, ವಿಶ್ವನಾಥ ಪೇತ್ರಿ, ಕೃಷ್ಣಾ ಬಂಗೇರ ಪಡುಬಿದ್ರಿ, ಹರೀಶ್ ಸಲ್ಯಾನ್, ರವಿರಾಜ್ ಲಕ್ಷ್ಮೀನಗರ, ವಸಂತ ಪಾದೆಬೆಟ್ಟು, ಸುಜಿತ್ ಪಡುಬಿದ್ರಿ, ಸಂಜೀವ ಬಳ್ಕೂರು, ಸುರೇಶ ಹಕ್ಲಾಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ:ಆರತಿ.ಗಿಳಿಯಾರು.ಉಡುಪಿ

