ರೈತರ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ – ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ.
ಆಲಮೇಲ ಅ.31




ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ ₹5,500 ನಿಗದಿಪಡಿಸ ಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಆಲಮೇಲ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಗೌರವಾಧ್ಯಕ್ಷರ ಆದೇಶದ ಮೇರೆಗೆ ವಿಜಯಪುರ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯ ಭಾಗವಾಗಿ ಆಲಮೇಲ ತಾಲೂಕಿನ ರೈತರು ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಲಮೇಲ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಧರ ನಾಯ್ಕೋಡಿ ಮತ್ತು ತಾಲೂಕು ಅಧ್ಯಕ್ಷ ಮಾಂತೇಶ ಕತ್ತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲೂಕಿನ ರೈತ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು. ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರೈತರು, ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಅನ್ನದಾತನ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ..?
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಯಶವಂತರಾಯ ಗೌಡ್ರು ಮಾತನಾಡಿ, “ಅನ್ನದಾತನ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರ ನೋವಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಅನ್ನದಾತನಿಗೆ ಸೂಕ್ತ ಬೆಲೆ ನೀಡಬೇಕು” ಎಂದು ಆಗ್ರಹಿಸಿದರು.
ರೈತರಿಗಾಗಿ ಜೈಲು ಶಿಕ್ಷೆಗೂ ಸಿದ್ಧ:-
ರೈತ ಸಂಘ ಹಾಗೂ ಹಸಿರು ಸೇನೆಯ ಆಲಮೇಲ ತಾಲೂಕು ಗೌರವಾಧ್ಯಕ್ಷ ಶಶಿಧರ ನಾಯ್ಕೋಡಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆಯುವ ವರೆಗೆ ತಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ರೈತರ ಮಾತನಾಡಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
