ದಿವಂಗತ ಕೆಂಗಲ್ ಹನುಮಂತಯ್ಯ ಅವರ ಜನ್ಮ ದಿನೋತ್ಸವದ ಅಂಗವಾಗಿ ಗಾಲಿಬಸಾಹೇಬ ನಾಗಾವಿ ಅವರಿಗೆ – ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಿದರು.
ದೇವಣಗಾಂವ ನ.07




ಕನ್ನಡ ರಾಜ್ಯೋತ್ಸವದ ಸಂಭ್ರಮ ಹಾಗೂ ವಿಧಾನ ಸೌಧ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್ (ನೋಂ.) ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಪುತ್ರರಾದ ಗಾಲಿಬಸಾಹೇಬ ನಾಗಾವಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿನಾಂಕ 05-11-2026 ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಿತ್ನಾಮಂಗಲ, ಕಾಡುಮತ್ತಿಕೆರೆಯ ಶ್ರೀ ಅರೇ ಶಂಕರ್ ಮಠದಲ್ಲಿ ನಡೆದ ಸಮಾರಂಭದಲ್ಲಿ ಪೂಜ್ಯ ಶ್ರೀ. ನಿ.ಪ್ರ.ಸ್ವ. ಜಗದ್ಗುರು ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೂಜ್ಯ ಮಹಾಸ್ವಾಮಿಗಳು ಗಾಲಿಬಸಾಹೇಬ ನಾಗಾವಿ ಅವರನ್ನು ಸನ್ಮಾನಿಸಿ, ಮುಂದಿನ ದಿನಗಳಲ್ಲಿಯೂ ಸಮಾಜ ಸೇವೆ ಹಾಗೂ ಜನಪರ ಕಾರ್ಯಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಆಶೀರ್ವದಿಸಿದರು.
ಗಾಲಿಬಸಾಹೇಬ ನಾಗಾವಿ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ವರದಿಗಾರರಾಗಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಧ್ವನಿ ಯಾಗುತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ ಸಮಾಜ ಸೇವೆ, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ವಿಶೇಷವಾಗಿ ಮಹಿಳೆಯರ ಕಾರ್ಯಕ್ರಮಗಳು, ಯುವಕರ ಚಟುವಟಿಕೆಗಳು ಹಾಗೂ ಸಮಾಜದ ವಿವಿಧ ವರ್ಗಗಳ ಜನಪರ ಕಾರ್ಯಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾ, ಸಮಾಜದಲ್ಲಿ ಒಗ್ಗಟ್ಟು, ಸಹಕಾರ ಮತ್ತು ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಯಾವುದೇ ಸಂಘಟನೆಯ ಉತ್ತಮ ಕಾರ್ಯವಾಗಲಿ, ಸಾಮಾಜಿಕ ಕಾರ್ಯಕ್ರಮವಾಗಲಿ, ಅಲ್ಲಿ ತಮ್ಮ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧರಾಗಿರುವ ವ್ಯಕ್ತಿತ್ವ ಇವರದ್ದಾಗಿದೆ.
ಇವರ ಪತ್ರಿಕೋದ್ಯಮದ ಸೇವೆ, ಸಾಮಾಜಿಕ ಕಾಳಜಿ, ಸಂಘಟನಾ ಚಟುವಟಿಕೆಗಳು ಹಾಗೂ ನಿರಂತರ ಜನ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ದೇವಣಗಾಂವ ಗ್ರಾಮಕ್ಕೆ ಹೆಮ್ಮೆಯ ಸಂಗತಿ ಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಾಲಿಬಸಾಹೇಬ ನಾಗಾವಿ ಅವರು, “ನನಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿರುವುದು ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ಈ ಗೌರವಕ್ಕೆ ಪ್ರೋತ್ಸಾಹ ನೀಡಿದ ಎಲ್ಲ ಹಿರಿಯರು, ಸ್ನೇಹಿತರು, ಆತ್ಮೀಯರು ಹಾಗೂ ಹಿತೈಷಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ವಿಶೇಷವಾಗಿ ನನ್ನ ಹುಟ್ಟೂರಾದ ದೇವಣಗಾಂವ ಗ್ರಾಮದ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಸ್ಮರಿಸುತ್ತೇನೆ. ತಾಯಿಯ ಆಶೀರ್ವಾದದಿಂದಲೇ ನನಗೆ ಈ ಗೌರವ ದೊರೆತಿದೆ ಎಂಬುದು ನನ್ನ ದೃಢವಾದ ನಂಬಿಕೆ ಆಗಿದೆ.
ಶ್ರೀ ಮಹಾಲಕ್ಷ್ಮಿ ದೇವಿಯ ಕೃಪೆ ಸದಾ ನನ್ನ ಮೇಲಿರಲಿ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ಸಾಹದಿಂದ ಜನ ಸೇವೆ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತೇನೆ” ಎಂದು ಭಾವುಕರಾಗಿ ತಿಳಿಸಿದರು.
ದೇವಣಗಾಂವ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು ತಮ್ಮ ಪರಿಶ್ರಮ, ಪತ್ರಿಕೋದ್ಯಮ ಮತ್ತು ಸಮಾಜ ಸೇವೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವುದು ಗ್ರಾಮದ ಯುವ ಜನತೆಗೆ ಪ್ರೇರಣೆ ಯಾಗಿದೆ. ಈ ಸಾಧನೆಗೆ ದೇವಣಗಾಂವ ಗ್ರಾಮದ ಗ್ರಾಮಸ್ಥರು, ಹಿರಿಯರು, ಸ್ನೇಹಿತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ದೇವಣಗಾಂವದ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಿದ ಗಾಲಿಬಸಾಹೇಬ ನಾಗಾವಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
