KPTCL ಅಂತಿಮ ಕೀ ಉತ್ತರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಅಭ್ಯರ್ಥಿಗಳ ಆಕ್ರೋಶ…..!
"KPTCL ಗಾಗಿ KEA ನಡೆಸಿದ್ದ ಪರೀಕ್ಷೆಯ ಅಂತಿಮ ಕೀ ಉತ್ತರ ಗಳನ್ನು ತಪ್ಪಾಗಿ ಕೊಟ್ಟಿದ್ದಾರೆ. ತಪ್ಪಾಗಿರೋ ಬಗ್ಗೆ ಪರೀಕ್ಷಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದ್ದೇವೆ. ಅಭ್ಯರ್ಥಿಗಳಿಗೆ ಒಂದೊಂದು ಮಾರ್ಕ್ ಕೂಡ ಇಂಪಾರ್ಟೆಂಟ್ ಆಗಿರುತ್ತೆ. ಇದನ್ನ ಮನವರಿಕೆ ಮಾಡಿ, ದಾಖಲೆಗಳನ್ನು ಇಮೇಲ್ ಮಾಡಿದ್ದೇವೆ. ನೊಂದ ಅಭ್ಯರ್ಥಿಗಳ ಪರ ಇರುತ್ತೇವೆ" - ಭವ್ಯಾ ನರಸಿಂಹಮೂರ್ತಿ, ಕಾಂಗ್ರೆಸ್ ವಕ್ತಾರೆ
ಬೆಂಗಳೂರು:
ಕರ್ನಾಟಕ PSI ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆದಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಅದರ ತನಿಖೆ ನಡೆಯುತ್ತಿರುವಾಗಲೇ KPTCL ಎಕ್ಸಾಂನಲ್ಲೂ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂತು. ಇದೀಗ ಕೆಪಿಟಿಸಿಎಲ್ ಕಿರಿಯ ಸಹಾಯಕ (Junior Assistant) ಹಾಗೂ ವಿವಿಧ ಹುದ್ದೆಗೆ ನಡೆಸಲಾಗಿದ್ದ ಪರೀಕ್ಷಾ ಫಲಿತಾಂಶ (Exam Result) ಪ್ರಕಟಿಸಿದ್ದು, ಅಲ್ಲಿಯೂ ಕೂಡ ನಿರ್ಲಕ್ಷ್ಯ ಮತ್ತು ಕಾಟಾಚಾರಕ್ಕೆ ಪ್ರಕಟಿಸಲಾಗಿದೆ ಎಂಬಂತೆ ಪ್ರಕಟಿಸಿದ್ದು ಈಗ ಇದು ಇದರ ಮೇಲೂ ಆರೋಪ ಕೇಳಿ ಬಂದಿದೆ. KPTCL ಸೂಚನೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಂತಿಮ ಕೀ ಉತ್ತರವನ್ನು (Key Answer) ಪ್ರಕಟಿಸಿದೆ. ಆದರೆ ಅದರಲ್ಲೇ ತಪ್ಪಾದ ಉತ್ತರ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನೊಂದ ಅಭ್ಯರ್ಥಿಗಳು ಹೋರಾಟದ ಹೆಜ್ಜೆ ಇಡುವ ಸೂಚನೆ ಕೊಟ್ಟಿದ್ದಾರೆ.
ತಪ್ಪಾದ ಉತ್ತರ ಒಂದು…
1. ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ?
ಅಂತ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರವಾಗಿ
(A) ಪ್ರಧಾನಮಂತ್ರಿ (B) ಪಾರ್ಲಿಮೆಂಟ್
(C) ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ
(D) ರಾಷ್ಟ್ರಪತಿಗಳು .
ಎಂದು ಆಯ್ಕೆಗಳನ್ನು ನೀಡಲಾಗಿತ್ತು. ಇದಕ್ಕೆ ಸರಿ ಉತ್ತರ (D) ರಾಷ್ಟ್ರಪತಿಗಳು ಎಂದಾಗಬೇಕು. ಆದರೆ ಅಂತಿಮ ಕೀ ಉತ್ತರದಲ್ಲಿ (B) ಪಾರ್ಲಿಮೆಂಟ್ ಅಂತ ತಪ್ಪಾಗಿ ಕೊಡಲಾಗಿದೆ. ಭಾರತದ ಸಂವಿಧಾನದ 324(2) ಅನ್ವಯ ಮುಖ್ಯ ಚುನಾವಣಾ ಆಯುಕ್ತರನ್ನು ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ. ಆದರೆ ಉತ್ತರದಲ್ಲಿ ಪಾರ್ಲಿಮೆಂಟ್ ಅಂತ ಕೊಡಲಾಗಿದೆ.
ತಪ್ಪಾದ ಉತ್ತರ ಎರಡು…
2. ಹಣಕಾಸು ತುರ್ತು ಪರಿಸ್ಥಿತಿಯಲ್ಲಿ ,
(A) ರಾಜಕಾರಣಿಗಳು ಮತ್ತು ಮಂತ್ರಿಗಳು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ.
(B) ಹಣಕಾಸಿನ ನಿಯಮಗಳನ್ನು ಅನುಸರಿಸಬೇಕು
(C) ಎಲ್ಲಾ ನೌಕರರ ವೇತನ ಕಡಿತಗೊಳಿಸಲಾಗುತ್ತದೆ
(D) ನ್ಯಾಯಾಂಗದ ಸದಸ್ಯರ ವೇತನ ಕಡಿಮೆ ಮಾಡಲಾಗುತ್ತದೆ.
ಎಂಬ ಉತ್ತರ ನೀಡಲಾಗಿದೆ. ನಿಯಮದಂತೆ ಇದಕ್ಕೆ ಎಲ್ಲಾ ಉತ್ತರಗಳೂ ಅನ್ವಯಿಸುತ್ತವೆ. ಆದರೆ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದ ಅಂತಿಮ ಕೀ ಉತ್ತರದಲ್ಲಿ (D) ನ್ಯಾಯಾಂಗದ ಸದಸ್ಯರ ವೇತನ ಕಡಿಮೆ ಮಾಡಲಾಗುತ್ತದೆ ಎಂಬ ಉತ್ತರ ನೀಡಲಾಗಿದೆ.
“ಪರೀಕ್ಷೆಯಲ್ಲಿ ಎಡವಟ್ಟುಗಳು ಇದೇ ಮೊದಲಲ್ಲ”
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಭವ್ಯಾ ನರಸಿಂಹಮೂರ್ತಿ, ಈ ರೀತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಜೀವನದಲ್ಲಿ ಹಾಗೂ ಪರೀಕ್ಷೆಯಲ್ಲಿ ಗೋಲ್ಮಾಲ್, ಗೊಂದಲಗಳು ನಡೆಯುತ್ತಿರುವುದು ಇದೇ ಮೊದಲಲ್ಲ ಎಂದಿದ್ದಾರೆ. KPTCL ಗಾಗಿ KEA ನಡೆಸಿದ್ದ ಪರೀಕ್ಷೆಯ ಅಂತಿಮ ಕೀ ಆನ್ಸರ್ಸ್ ತಪ್ಪಾಗಿ ಕೊಟ್ಟಿದ್ದಾರೆ. ತಪ್ಪಾಗಿರೋ ಬಗ್ಗೆ ಪರೀಕ್ಷಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದ್ದೇವೆ. ಅಭ್ಯರ್ಥಿಗಳಿಗೆ ಒಂದೊಂದು ಮಾರ್ಕ್ ಕೂಡ ಇಂಪಾರ್ಟೆಂಟ್ ಆಗಿರುತ್ತೆ. ಇದನ್ನ ಮನವರಿಕೆ ಮಾಡಿ, ದಾಖಲೆಗಳನ್ನು ಇಮೇಲ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ನಾವು ಕೆಪಿಟಿಸಿಎಲ್ ಪರೀಕ್ಷೆ ಕೀ ಆನ್ಸರ್ ಗೊಂದಲದಿಂದಾಗಿ ನೊಂದ ಅಭ್ಯರ್ಥಿಗಳ ಪರ ಇರುತ್ತೇವೆ ಅಂತ ಭರವಸೆ ನೀಡಿದ್ದಾರೆ.
ನೊಂದ ಅಭ್ಯರ್ಥಿಯ ಮಾತು..
ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಈ ರೀತಿ ಪದೇ ಪದೇ ಗೋಲ್ಮಾಲ್ ಆಗುತ್ತಾ ಇದೆ. ಕೆಪಿಟಿಸಿಎಲ್ ಪರೀಕ್ಷೆಯಲ್ಲೇ ಗೋಲ್ಮಾಲ್ ಆಗಿರುವಾಗಲೇ, ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಕೀ ಆನ್ಸರ್ ಕೂಡ ತಪ್ಪಾಗಿದ್ದು ಬೇಜವಾಬ್ದಾರಿಗೆ ಹಿಡಿದ ಕನ್ನಡಿ. ಈ ರೀತಿಯ ಪರೀಕ್ಷೆ ಬರೆದು ಟೆನ್ಶನ್ ಮಾಡಿಕೊಳ್ಳುವುದಕ್ಕಿಂತ ಬರೆಯದೇ ಕೂಲಿ ನಾಲಿ ಮಾಡುವುದೇ ಉತ್ತಮ” – ನೊಂದ ಅಭ್ಯರ್ಥಿ