ಗ್ರಾಮ ಗ್ರಾಮಗಳಲ್ಲಿ ಕೈಅಭ್ಯರ್ಥಿ ಡಾ ಎನ್. ಟಿ.ಶ್ರೀನಿವಾಸ್ ಪರ ಬಿಸಿಲೆನ್ನದೆ ಬಿರುಸಿನ ಪ್ರಚಾರ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು.
ಖಾನಹೊಸಹಳ್ಳಿ ಮೇ.6

ಖಾನಹೊಸಹಳ್ಳಿ ಹೂಡೇಂ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಾ ಎನ್.ಟಿ. ಶ್ರೀನಿವಾಸ್ ಪರ ಬಿರುಸಿನ ಮತಯಾಚನೆ ಮಾಡಿದರು. ಗ್ರಾಮದ ದಲಿತ ಕಾಲೋನಿ ಹಾಗೂ ವಿವಿಧ ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿದ ಮುಖಂಡರು ಕರಪತ್ರವನ್ನು ಹಂಚಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಯ ಗುರುತು ಹಸ್ತಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಮನೆ ಮನೆಗೆ ತೆರಳಿ ಕರಪತ್ರವನ್ನು ಹಂಚಿದ ಬಳಿಕ ಕಾಂಗ್ರೆಸ್ ಮುಖಂಡ ಕೆ ರವಿ ಮಾತನಾಡಿ ಕಾಂಗ್ರೆಸ್ ಸಾಮಾಜಿಕ ನ್ಯಾಯ ಕೊಡುವ ಪಕ್ಷವಾಗಿದ್ದು ಇಲ್ಲಿ ಎಲ್ಲರಿಗೂ ರಾಜಕೀಯ ಅವಕಾಶ ದೊರೆಯಲಿದೆ. ಆದ್ದರಿಂದ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದರು. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಬಿ.ಪಿ.ಎಲ್. ಕುಟುಂಬದಲ್ಲಿ ಒಬ್ಬರಿಗೆ ಹತ್ತು ಕೆ.ಜಿ. ಅಕ್ಕಿ ನೀಡಲಾಗುವುದು. ಗೃಹಜ್ಯೋತಿ ಯೋಜನೆಯಡಿ ಇನ್ನೂರು ಯೂನಿಟ್ ಕರೆಂಟ್ ಉಚಿತ, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾಮಾಡಲಾಗುವುದು. ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ಮೂರು ಸಾವಿರ ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ ಒಂದುವರೆ ಸಾವಿರ ರೂ.ಗಳನ್ನು ಎರಡು ವರ್ಷಗಳ ಕಾಲ ನೀಡಲಾಗುವುದು. ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಾಗುವುದು.

ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕೂಡ್ಲಿಗಿ ಹೊಸ ಬದಲಾವಣೆ ಕಾಣಬೇಕಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಆಗ ಮಾತ್ರ ಬಡವರು, ದೀನ ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬೋಸಮಲ್ಲಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಟಿ ಅಜ್ಜಣ್ಣ, ನಾಗಮ್ಮ ಗದ್ದಿ ಸ್ವಾಮಿ, ಪುಟ್ಟಮ್ಮ ಮಲ್ಲಿಕಾರ್ಜುನ್, ಶಶಿಕಲಾ ಜಯಣ್ಣ, ಎಲ್ಲಪ್ಪ, ಹಾಗೂ ಕಾಂಗ್ರೆಸ್ ಮುಖಂಡರಾದ ನೆವರ್ ಅಜ್ಜಣ್ಣ, ದಾಸಪ್ಪ, ಹೋಳಿಗೆ ಪಾಲಯ್ಯ, ಬಸವರಾಜ್ ಹೋಳಿಗೆ, ಅಂಗಡಿ ತಿಪ್ಪೇಸ್ವಾಮಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನಿ ಕೂಡ್ಲಿಗಿ